ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನಿಂದ ಮಾತ್ರ ಬಡವರ ಅಭಿವೃದ್ಧಿ: ಶಾಸಕ ಹಿಟ್ನಾಳ ಹೇಳಿಕೆ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಪಾದಯಾತ್ರೆ
Last Updated 7 ಆಗಸ್ಟ್ 2022, 13:57 IST
ಅಕ್ಷರ ಗಾತ್ರ

ಹುಲಗಿ (ಕೊಪ್ಪಳ): ‘ಬಿಜೆಪಿ ಸರ್ಕಾರಗಳು ಕೇಂದ್ರ ಮತ್ತು ರಾಜ್ಯದಲ್ಲಿ ಜನರಿಗೆ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದಿವೆ. ಅವರಿಗೆ ಬಡವರ ಕಾಳಜಿಯಿಲ್ಲ. ಕಾಂಗ್ರೆಸ್‌ನಿಂದ ಮಾತ್ರ ಬಡವರ ಅಭಿವೃದ್ಧಿ ಸಾಧ್ಯ’ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ಪಾದಯಾತ್ರೆಯ ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಬಡವರನ್ನು, ಹಿಂದುಳಿದವರನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಕಾಂಗ್ರೆಸ್‌ ಮಾತ್ರ ಮಾಡಿದೆ. ಸ್ವಿಸ್‌ ಬ್ಯಾಂಕ್‌ನಲ್ಲಿರುವ ಶ್ರೀಮಂತರ ಹಣ ವಾಪಸ್‌ ಬರಲಿಲ್ಲ. ಬಿಜೆಪಿ ಸರ್ಕಾರ ಯುವಕರಿಗೆ ಉದ್ಯೋಗ ಕೊಡಲಿಲ್ಲ. ಮುಂದಿನ ಅವಧಿಯಲ್ಲಿಯೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಭಾರತ ಕೂಡ ಶ್ರೀಲಂಕಾಕ್ಕೆ ಆದ ಪರಿಸ್ಥಿತಿ ಆಗುತ್ತದೆ’ ಎಂದರು.

‘ಸುಳ್ಳು ಭರವಸೆಗಳಿಂದ ಜನರ ವಿಶ್ವಾಸ ಗಳಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯನವರ 75ನೇ ಜನ್ಮ ದಿನದ ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಪಾಲ್ಗೊಂಡಿದ್ದನ್ನು ನೋಡಿ ಬಿಜೆಪಿಯವರು ದಿಕ್ಕೆಟ್ಟು ಹೋಗಿದ್ದಾರೆ. ಬಿಜೆಪಿಗೆ ಅಧಿಕಾರ ವಿಕೇಂದ್ರೀಕರಣದ ಬಗ್ಗೆ ನಂಬಿಕೆ ಇಲ್ಲ. ಇದೇ ಕಾರಣಕ್ಕಾಗಿ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ನಡೆಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಮಾತನಾಡಿ ’ರಾಷ್ಟ್ರಧ್ವಜದ ಜಾಗದಲ್ಲಿ ಭಗವಾದ್ವಾಜ ಹಾರಿಸುವುದಾಗಿ ಹೇಳುವ ಈಶ್ವರಪ್ಪ ಅವರಿಂದ ದೇಶಭಕ್ತಿಯ ಪಾಠ ಕಲಿಯಬೇಕೇ? ಬಿಜೆಪಿಗೆ ನಿಜವಾದ ದೇಶಭಕ್ತಿಯಿದ್ದರೆ ಆ. 15ರಂದು ಆರ್‌ಎಸ್‌ಎಸ್‌ ಕಚೇರಿ ಮೇಲೆಯೂ ರಾಷ್ಟ್ರಧ್ವಜ ಹಾರಿಸಲಿ’ ಎಂದು ಸವಾಲು ಹಾಕಿದರು.

‘ದೇಶದ ಸಂವಿಧಾನ ಬದಲಿಸುವ ಬಗ್ಗೆ ಮಾತನಾಡುವ ಬಿಜೆಪಿ ನಾಯಕರಿಗೆ ಸ್ವಾತಂತ್ರ್ಯದ ಬಗ್ಗೆ ಹೇಳಿಕೆ ನೀಡುವ ನೈತಿಕತೆ ಉಳಿದಿಲ್ಲ. ನರೇಂದ್ರ ಮೋದಿ ಶೋಕಿಲಾಲ್‌ ಪ್ರಧಾನಿ. ನಾಟಕ ಕಂಪನಿಯ ಲೀಡರ್‌. ಸಂಗಣ್ಣ ಕರಡಿ ಎರಡು ಬಾರಿ ಸಂಸದರಾದರೂ ಕೊಪ್ಪಳದ ಅಭಿವೃದ್ಧಿ ಬಗ್ಗೆ ಮಾತನಾಡಿಲ್ಲ. ಆದ್ದರಿಂದ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಬೇಕು. ಜಿಲ್ಲೆಯಲ್ಲಿ ನಮ್ಮ ಪಕ್ಷ ಎಲ್ಲಾ ಐದು ಸ್ಥಾನಗಳಲ್ಲಿ ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕ ಕೆ.ಬಸವರಾಜ್ ಹಿಟ್ನಾಳ್,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೊಳಪ್ಪ ಹಲಗೇರಿ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಸೈಯ್ಯದ್ ಜುಲ್ಲು ಖಾದ್ರಿ, ಸವಿತಾ ಗೋರಂಟ್ಲಿ, ಸರ್ವೋದಯ ವಿರೂಪಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾರಡ್ಡಿ ಗಲಿಬಿ ರಾಜ್ಯ ಉಪಾಧ್ಯಕ್ಷೆ ಕಿಶೋರಿ ಬೂದನೂರು, ಇಂದಿರಾ ಬಾವಿಕಟ್ಟಿ, ಗೂಳಪ್ಪ ಹಲಗೇರಿ, ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಕಾಟನ್ ಪಾಷಾ, ಜ್ಯೋತಿ ಗೊಂಡಬಾಳ, ಮಾಲತಿ ನಾಯಕ, ಕೆ.ಎಂ.ಸೈಯ್ಯದ್, ಗಾಳೆಪ್ಪ ಪೂಜಾರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಹುಲಗಿ ತನಕ ಪಾದಯಾತ್ರೆ

ಮುನಿರಾಬಾದ್‌: ಇಲ್ಲಿನ ಪಂಪಾವನದಿಂದ ಹುಲಗಿ ತನಕ ಭಾನುವಾರ ನಡೆದ ಪಾದಯಾತ್ರೆಯಲ್ಲಿ ಕಾಂಗ್ರೆಸ್‌ನ ಪ್ರಮುಖರು ಪಾಲ್ಗೊಂಡಿದ್ದರು.

ಆರು ಕಿ.ಮೀ. ದೂರದ ಯಾತ್ರೆಯಲ್ಲಿ ಕಾರ್ಯಕರ್ತರು ಪಕ್ಷದ ಪರ ಘೋಷಣೆಗಳನ್ನು ಕೂಗುತ್ತ, ಶಾಸಕ ರಾಘವೇಂದ್ರ ಹಿಟ್ನಾಳಗೆ ಜೈಕಾರ ಹಾಕುತ್ತ ಸಾಗಿದರು. ಹುಲಗಿ ಪ್ರವೇಶಿಸುತ್ತಿದ್ದಂತೆ ಅದ್ದೂರಿ ಸ್ವಾಗತ ಲಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT