ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದರ ಇಳ್ಸಿ ಪುಣ್ಯ ಕಟ್ಕೊಳ್ರೀ’

ಪೆಟ್ರೋಲ್‌, ಡೀಸೆಲ್‌ ಧಾರಣೆ ಗಗನಮುಖಿ; ಗ್ರಾಹಕ ಕಕ್ಕಾಬಿಕ್ಕಿ
Last Updated 30 ಮೇ 2018, 10:22 IST
ಅಕ್ಷರ ಗಾತ್ರ

ವಿಜಯಪುರ: ‘ಡೀಸೆಲ್‌ ಧಾರಣೆ ಹೆಚ್ಚಾಗಿದ್ರಿಂದ ಆಟೊ ದಂದ್ಯಾಗ ಏನು ಉಳಿತಿಲ್ಲ... ನಾ ಅಂಗವಿಕಲ ಇದ್ದೀನಿ. ಕೆಲ್ಸಕ್ಕ ಹೋಗ್ಬೇಕ್‌ ಅಂದ್ರಾ ಬೈಕ್‌ ಇಲ್ದಿದ್ರೇ ನಡೆಯಲ್ಲ... ಪಗಾರನೆಲ್ಲಾ ಪೆಟ್ರೋಲ್‌ಗ ಹಾಕಿದ್ರೇ ನಮ್‌ ಜೀವನ ಹೆಂಗ ನಡೆಸಬೇಕ್ರೀ..?’

ದಿನೇ ದಿನೇ ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನಮುಖಿಯಾಗುತ್ತಿದ್ದು, ಧಾರಣೆ ಏರಿಕೆಯಿಂದ ಸಂಕಷ್ಟ ಅನುಭವಿಸುತ್ತಿರುವ ಆಟೊ ಚಾಲಕರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರು, ಬಡವರ ಯಾತನೆಯ ನುಡಿಗಳಿವು.

‘ನಾ ದುಡಿಯಾಕ ಚಾಲೂ ಮಾಡಿದ್ದು ಡ್ರೈವರ್‌ ಆಗಿ. ನಂಗ್‌ ಬ್ಯಾರೇ ಕೆಲಸ ಮಾಡಾಕ ಬರಲ್ಲ. ಹಿಂಗಾಗಿ ನಮ್ಮೂರಾಗ ದಿನಕ್‌ ಮೂರು ನೂರು ಕೊಟ್ಟು ಆಟೊ ಬಾಡಿಗೆ ತಗೊಂಡು ಓಡಿಸಿ ಜೀವನ ನಡಿಸ್ತ್ವೀನಿ. ಇದೀಗ ಡೀಸೆಲ್‌ ಧಾರಣೆ ಹೆಚ್ಚಾಗೈತಿ. ದುಡಿಕಿಯೊಳಗ ಏನ್‌ ಉಳಿತಿಲ್ಲ. ಮೊದ್ಲ ತಿಂಗ್ಳಿಗಿ ₹10,000–15,000 ಉಳಿತಿತ್ತು. ಸಂಸಾರಕ್ಕ ಕೊರತೆ ಇರಲಿಲ್ಲ. ಈಗ ಆಟೊ ಮಾಲಿಕ್ರೀಗಿ ಮೂರ್‌ನೂರ್ ಕೊಟ್ಟು, ದಿನಾ ನೂರ್ ಇನ್ನೂರ ಉಳಿತೈತಿ. ಇದರಾಗ ಮೂರು ಮಕ್ಳ ಸಾಲಿ ಕಲಿಸಿ, ಜೀವನ ಮಾಡಬೇಕ್‌ ನೋಡ್ರಿ...’ ಎಂದು ಹಿಟ್ನಳ್ಳಿ ಗ್ರಾಮದ ಅಶೋಕ ಚಿಕ್ಕಲಗಿ ಡೀಸೆಲ್‌ ಧಾರಣೆಯಿಂದ ತಾವು ಎದುರಿಸುತ್ತಿರುವ ಅಸಹಾಯಕತೆಯನ್ನು ‘ಪ್ರಜಾವಾಣಿ’ ಬಳಿ ಇಂಚಿಂಚು ಬಿಚ್ಚಿಟ್ಟರು.

‘ಈ ಹಿಂದ್‌ ಡೀಸೆಲಿಗೆ ಮೂವತ್ತು ರೂಪಾಯಿ ಇದ್ದಾಗ್ಲೂ ವಿಜಯಪುರದಿಂದ ಹಿಟ್ನಳ್ಳಿಗಿ ಹತ್ತು ರೂಪಾಯಿ ಚಾರ್ಜ್‌ ಇತ್ತು. ಈಗ ಎಪ್ಪತ್ತು ರೂಪಾಯಿ ಆದ್ರೂ ಅಷ್ಟೇ ಐತಿ. ದರ ಹೆಚ್ಚಿದಂತೆ ನಾವು ಹೆಚ್ಚಿಸೋಕೆ ಆಗಲ್ರೀ. ಜರಾ ಹೆಚ್ಚು ಮಾಡಿದ್ರೇ ಬಸ್ಸಿಗೆ ಹೋಗ್ತೀವಿ ಅನ್ತಾರ್ರೀ. ವಿಧಿಯಿಲ್ಲದೇ ಸಿಕ್ಕಷ್ಟೇ ಸಿಕ್ಕಲಿ ಅಂತಹ ದಂದಾ ನಡೆಸ್ವೀನಿ’ ಎಂದು ಅಶೋಕ ಹೇಳಿದರು.

‘ನಾನೇ ಮನಿ ಸಂಸಾರ ಮಾಡ್ಬೇಕು. ಸಣ್ದೊಂದು ಪಂಚರ್ ಅಂಗಡಿ ನಡಿಸ್ತಾ ತಿಂಗ್ಳಾ ನಾಲ್ಕೈದ್‌ ಸಾವಿರ ದುಡಿತ್ವೀನಿ. ನಾನ್‌ ಅಂಗವಿಕಲ ಆಗಿದ್ರಿಂದ ಬೈಕ್‌ ಇಲ್ದಿದ್ರೇ ನಡ್ಯಾಲ್ಲ. ಇವತ್ತಿನ ಪೆಟ್ರೋಲ್‌ ರೇಟ್‌ನ್ಯಾಗ ತಿಂಗ್ಳಿಗಿ ಏಳೆಂಟ್‌ ನೂರ್ ಅದ್ಕೆ ಹಾಕಬೇಕು. ಕಡಿಮಿ ಆದ್ರ ಚಲೋ ಆಗ್ತಾದ. ಉಳಿದ ರೊಕ್ಕಾ ಸಂಸಾರಕ ಹಾಕ್ಬೌದು’ ಎನ್ನುತ್ತಾರೆ ವಿಜಯಪುರದ ಬಸವರಾಜ ಚಡಚಣ.

‘ವಿಜಯಪುರದಾಗ ಆಟೊ ಹೆಚ್ಚಾಗ್ಯಾವು. ಬಸ್‌ಗಳು ಎಲ್ಲಾ ಕಡೆ ಓಡಾಡ್ತಾವು. ಹಿಂಗಾಗಿ ಆದಾಯ ಬಾಳ ಕಡಿಮಿ ಆಗ್ಯಾದ. ಅದರೊಳಗ ಈಗ ಡೀಸೆಲ್‌ ದರ ಬೇರೆ ಹೆಚ್ಚಾಗಿದ್ರಿಂದ ಏನು ಉಳಿತಿಲ್ಲ. ಎಲ್ಲಿ ಹೋದ್ರೂ ಹತ್ತ್‌ ರೂಪಾಯಿ ರೇಟ್‌ ಫಿಕ್ಸ್‌ ಮಾಡಿದ್ರಿಂದ; ಡೀಸೆಲ್‌ ಹೆಚ್ಚಾದ್ರೂ ಚಾರ್ಚ್‌ ಹೆಚ್ಚ ಮಾಡಿದ್ರ ಜನ ಒಪ್ಪಲ್ಲ. ಜೀವನಕ್ಕ ಆಧಾರ ಆದ ದಂದಾ ಬಿಟ್ರೂ ನಡೆಯೋಲ್ಲ. ಸರ್ಕಾರದವ್ರು ತುಸು ಮನಸ್‌ ಮಾಡಿ ರೇಟ್‌ ಇಳಿಸಿದ್ರ ಒಳ್ಳೆದಾಗ್ತಾದ. ಇಲ್ಲಾಂದ್ರ ನಮ್ಗ ಬಾಳ ಸಮಸ್ಯೆ ಆಗ್ತಾದ’ ಎಂದು ಆಟೊ ಚಾಲಕ ಬಸವರಾಜ ನೊಂದು ನುಡಿದರು.

**
ಡೀಸೆಲ್‌ ಧಾರಣೆ ಹೆಚ್ಚಾಗಿರೋದ್ರೀಂದ ಬಾಡಗಿ ತಗೊಂಡು ನಡೆಸೋ ಆಟೊದಾಗ ಲಾಭಾನೇ ಉಳಿತಿಲ್ಲ. ಮತ್ತೊಂದ್‌ ಕೆಲ್ಸಾ ನೀಗಲ್ಲಾ. ಸಿಕ್ಕಷ್ಟೇ ಸಿಗ್ಲಿ ಅಂದ್ಕೊಂಡು ಆಟೊ ಓಡ್‌ಸ್ತ್ವೀನಿ
- ಅಶೋಕ ಚಿಕ್ಕಲಕಿ, ಹಿಟ್ನಳ್ಳಿ

**
ಇಂಧನ ಧಾರಣೆ ಹೆಚ್ಚಾಗಿರೋದು ಖರೆ. ಆದ್ರೇ ಅದಕ್ಕೆ ಮೋದಿನೇ ಹೊಣೆ ಮಾಡಬಾರದು. ಅವರೇನು ರೊಕ್ಕಾನ ಮನಿಗೆ ಒಯ್ಯಲ್ಲ. ದೇಶದ ಅಭಿವೃದ್ಧಿಗೆ ಬಳಸ್ತಾರಾ
- ಸಿದ್ದನಗೌಡ ಬಿರಾದಾರ, ವಿಜಯಪುರ

ಬಾಬುಗೌಡ ರೋಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT