ಮಂಗಳವಾರ, ನವೆಂಬರ್ 12, 2019
20 °C
11,866 ಕುರಿ, ಮೇಕೆ ಸಾವು: ₹ 5.93 ಕೋಟಿ ಪರಿಹಾರ ಬಾಕಿ

ಕೊಪ್ಪಳ: ಪರಿಹಾರ ಧನಕ್ಕೆ ಕುರಿಗಾರರ ಅಲೆದಾಟ

Published:
Updated:
Prajavani

ಕೊಪ್ಪಳ: ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುರಿಗಾರರು ಇದ್ದು, ಕುರಿ, ಮೇಕೆಗಳೇ ಆರ್ಥಿಕ ಮೂಲವಾಗಿವೆ. ಋತುಮಾನಕ್ಕೆ ತಕ್ಕಂತೆ ಬರುವ ರೋಗ ಮತ್ತು ಆಕಸ್ಮಿಕ ಮರಣದಿಂದ ಸಾವಿಗೀಡಾಗುತ್ತಿದ್ದು ಪರಿಹಾರ ಧನಕ್ಕೆ ಸಂಬಂಧಿಸಿದ ಕಚೇರಿಗೆ ನಿತ್ಯ ಅಲೆದಾಡುವಂತಾಗಿದೆ.

ಕುರಿ ಮತ್ತು ಮೇಕೆ ಸೂಕ್ಷ್ಮಜೀವಿಗಳಾಗಿರುವುದರಿಂದ ಯಾವುದೇ ಕ್ಷಣದಲ್ಲಿ ರೋಗ ಬಂದು ಸಾವಿಗೀಡಾಗುತ್ತವೆ. ಕೃಷಿಯ ಜೊತೆ ಉಪಕಸಬನ್ನೇ ವೃತ್ತಿ ಮಾಡಿಕೊಂಡ ಕುರಿಗಾರರಿಗೆ ಅವುಗಳ ಸಾವಿನಿಂದ ಅಪಾರ ನಷ್ಟ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಆರ್ಥಿಕವಾಗಿ ಸಬಲಗೊಳಿಸಲು ಮತ್ತು ಉತ್ತೇಜಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಸಕಾಲಕ್ಕೆ ಅವರಿಗೆ ತಲುಪುದೇ ಇರುವುದರಿಂದ ತೊಂದರೆ ತಪ್ಪಿಲ್ಲ.

ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಪರಿಹಾರ ಧನ ನೀಡಲಾಗುತ್ತಿದ್ದು, ಅದನ್ನು ಪಡೆಯಲು ಕುರಿಗಾರರು ಹರಸಾಹಸ ಮಾಡಬೇಕು. ಜೊತೆ ಪಶು ವೈದ್ಯರ ದೃಢೀಕರಣ, ಶವಪರೀಕ್ಷೆ, ಅಂತ್ಯಕ್ರಿಯೆ ನೆರವೇರಿಸುವ ಭಾವಚಿತ್ರ. ಮುಂತಾದ ಪ್ರಕ್ರಿಯೆಗಳಿಂದ ಪರಿಹಾರ ಧನ ಬರುವಷ್ಟರಲ್ಲಿ ಹೈರಾಣಾಗುತ್ತಾರೆ. 

ಜಿಲ್ಲೆಯಲ್ಲಿ ಜನವರಿಯಿಂದ ಜುಲೈ ಅಂತ್ಯಕ್ಕೆ ಒಟ್ಟು 11,866 ಕುರಿಗಳು ಸಾವಿಗೀಡಾಗಿವೆ. ಅವುಗಳಿಗೆ ₹ 5.93 ಕೋಟಿ ಪರಿಹಾರ ಧನ ಬರಬೇಕಿದೆ. ಒಂದು, ಎರಡು ವರ್ಷದ ಹಿಂದೆ ಸತ್ತ ಕುರಿಗೆ ಇನ್ನೂ ಪರಿಹಾರ ಧನ ಬಂದಿಲ್ಲ. ಪರಿಹಾರಕ್ಕೆ ಆಯ್ಕೆಯಾದ ಕುರಿಗಾರರ ಪಟ್ಟಿಯನ್ನು ನಿಗಮ ಕಚೇರಿಯಲ್ಲಿ ನೋಟಿಸ್‌ ಬೋರ್ಡ್‌ಗೆ ಹಾಕುತ್ತಾರೆ. ಸಂಬಂಧಿಸಿದವರ ಖಾತೆಗೆ ನೇರ ಹಣ ಜಮಾ ಮಾಡಲಾಗುತ್ತದೆ ಎನ್ನುತ್ತಾರೆ. ಆದರೆ ಪರಿಹಾರ ಮಾತ್ರ ಬಂದಿಲ್ಲ.

ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಪರಿಹಾರ ಧನ ಮಂಜೂರು ಸಮಿತಿಯಲ್ಲಿ ಪರಿಚಯವಿದ್ದರಿಗೆ ಮೊದಲ ಪ್ರಾಶಸ್ತ್ಯ. ಉಳಿದವರು ನಿಯಮದ ಪ್ರಕಾರ ವರ್ಷಾನುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಕುರಿ ಮತ್ತು ಮೇಕೆಗಳಿಗೆ ಪ್ರಮುಖವಾಗಿ ಕಾಲು, ಬಾಯಿ ಬೇನೆ ಬರುತ್ತದೆ. ಹವಾಮಾನ ವ್ಯತ್ಯಾಸವಾದರೆ ಸಾಕು ದಿಢೀರ್‌ನೆ ಸತ್ತು ಬಿದ್ದು ಕುರಿಗಾರರನ್ನು ಆತಂಕಕ್ಕೆ ತಳ್ಳುತ್ತವೆ. ಈ ಬೇನೆಯಿಂದ ಆಹಾರ ಸೇವಿಸದೇ ನಿಶಕ್ತಗೊಂಡು, ರಕ್ತ ಹೀನತೆಯಿಂದಲೂ ಸಾಯುತ್ತವೆ.

ಜಿಲ್ಲೆಯಲ್ಲಿ ಆಗಾಗ ಬರ ಆವರಿಸುತ್ತಿದೆ. ಸತತ ಐದು ವರ್ಷ ಸರಿಯಾಗಿ ಮಳೆಯಾಗಿಲ್ಲ. ಈ ವರ್ಷ ಹಿಂಗಾರು ಉತ್ತಮವಾಗಿ ಸುರಿದಿದ್ದು ರೈತರು ಬಿತ್ತನೆಗೆ ಆರಂಭ ಮಾಡಿದ್ದಾರೆ. ಕೃಷಿ ಜೊತೆಗೆ ಕುರಿಗಾಹಿ ವೃತ್ತಿಯನ್ನು ಉಪಕಸುಬಾಗಿ ಮಾಡಿಕೊಂಡಿದ್ದಾರೆ. ಎಟಿಎಂನಂತೆ ಕುರಿಗಳು ಮಾಲೀಕರ ಪಾಲಿನ ಲಕ್ಷ್ಮಿಯಂತೆ. ಅಡಚಣೆಯಾದಗಲೆಲ್ಲ ಮಾರಿದರೆ ದುಡ್ಡು ಬರುತ್ತದೆ ಎಂಬ ಭರವಸೆ ಮೇಲೆ ಸಾಕಾಣಿಕೆ ಮಾಡುತ್ತಾರೆ. ಅಂತಹ ಆರ್ಥಿಕ ಮೂಲವಾದ ಕುರಿ, ಮೇಕೆ ಸತ್ತರೆ ಗೋಳಾಟ ತಪ್ಪುವುದಿಲ್ಲ.

ವಿಮೆ ಮಾಡಿಸದ 3 ರಿಂದ 6 ತಿಂಗಳೊಳಗಿನ ಕುರಿ ಮೇಕೆಗಳಿಗೆ ₹ 2.500 ಹಾಗೂ 6 ತಿಂಗಳ ಮೇಲ್ಮಟ್ಟ ಕುರಿಗಳು ಆಕಸ್ಮಿಕವಾಗಿ ಮರಣಿಸಿದರೆ ಅವುಗಳಿಗೆ ಪರಿಹಾರ ನೀಡಲಾಗುತ್ತದೆ. ಬಿಸಿಲಿನ ತಾಪಕ್ಕೆ ಕುರಿಗಳ ಮರಣದ ಸಂಖ್ಯೆಯೂ ಹೆಚ್ಚುತ್ತದೆ. ಪರಿಹಾರ ಧನಕ್ಕೆ ಕಚೇರಿಗೆ ಅಲೆದಾಡಿಸದೇ ಶೀಘ್ರ ನೀಡಬೇಕು ಎಂಬುವುದು ಕುರಿಗಾರರ ಆಗ್ರಹವಾಗಿದೆ. 

ಪ್ರತಿಕ್ರಿಯಿಸಿ (+)