ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಕ್ಷೇತ್ರ ಸ್ಥಿತಿ–ಗತಿ| ಕಾಂಗ್ರೆಸ್‌–ಬಿಜೆಪಿ ನಡುವೆ ನೇರ ಹಣಾಹಣಿ

ಇತಿಹಾಸ ಬದಲಿಸುವತ್ತ ಅಮರೇಗೌಡ ಬಯ್ಯಾಪುರ, ಉಳಿಸುವತ್ತ ದೊಡ್ಡನಗೌಡ ಚಿತ್ತ
Last Updated 5 ಫೆಬ್ರುವರಿ 2023, 6:40 IST
ಅಕ್ಷರ ಗಾತ್ರ

ಕೊಪ್ಪಳ: ಹಿಂದಿನ ನಾಲ್ಕು ಚುನಾವಣೆಗಳಿಂದ ಒಂದು ಬಾರಿ ಗೆದ್ದವರು ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎನ್ನುವ ‘ಇತಿಹಾಸ’ ದಾಖಲಾಗಿರುವ ಜಿಲ್ಲೆಯ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ‘ಇತಿಹಾಸ ಅಳಿಸುವ ಮತ್ತು ಉಳಿಸುವ’ ಸವಾಲಿಗೆ ಅಣಿಯಾಗಿದ್ದಾರೆ.

ಹಾಲಿ ಶಾಸಕ ಕಾಂಗ್ರೆಸ್‌ನ ಅಮರೇಗೌಡ ಬಯ್ಯಾಪುರ 2008ರಲ್ಲಿ ಬಿಜೆಪಿಯ ದೊಡ್ಡನಗೌಡ ಎಚ್‌. ಪಾಟೀಲ ಎದುರು ಗೆಲುವು ಸಾಧಿಸಿ ಕುಷ್ಟಗಿ ಕ್ಷೇತ್ರದಿಂದ ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಿದ್ದರು. ಇದಕ್ಕೂ ಮೊದಲು ಅವರು ಲಿಂಗಸಗೂರು ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿದ್ದರು. 2013ರ ಚುನಾವಣೆಯಲ್ಲಿ ಸೋಲು ಕಂಡರು.

ದೊಡ್ಡನಗೌಡ 2004ರಲ್ಲಿ ಗೆಲುವು ಪಡೆದು ಮುಂದಿನ ಚುನಾವಣೆಯಲ್ಲಿ ಸೋತು, 2013ರಲ್ಲಿ ಗೆಲುವು ಸಾಧಿಸಿದರು. ಹಿಂದಿನ ನಾಲ್ಕು ಚುನಾವಣೆಗಳಲ್ಲಿ ಕ್ಷೇತ್ರದ ಮತದಾರರು ತಲಾ ಎರಡು ಸಲ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿದ್ದಾರೆ. ಇವರಿಬ್ಬರಲ್ಲಿ ಯಾರೂ ಸತತವಾಗಿ ಗೆದ್ದಿಲ್ಲ. ಈ ದಾಖಲೆ ಬದಲಾಗುವುದೇ ಅಥವಾ ಮುಂದುವರಿಯುವುದೇ ಎನ್ನುವ ಚರ್ಚೆ ಕ್ಷೇತ್ರದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ.

ಕುರುಬ ಸಮುದಾಯದ ಜನರಿಗೆ ಇಲ್ಲಿ ಪಕ್ಷಕ್ಕಿಂತ ತಮ್ಮದೇ ಸಮುದಾಯದ ದೊಡ್ಡನಗೌಡ ಅವರ ಪರ ಒಲವಿದೆ. ರೆಡ್ಡಿ ಸಮುದಾಯದವರು ಬಯ್ಯಾಪುರ ಪರ ಬ್ಯಾಟಿಂಗ್‌ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ಇಲ್ಲಿ ಪಕ್ಷಕ್ಕಿಂತ ವ್ಯಕ್ತಿ ರಾಜಕಾರಣಕ್ಕೆ ಮಹತ್ವ ಸಿಗುತ್ತಿದೆ.

ಈಗಾಗಲೇ ಕುಷ್ಟಗಿಯಲ್ಲಿ ಹೆಚ್ಚು ರಾಜಕೀಯ ಸಮಾರಂಭಗಳು ನಡೆದಿವೆ. ಬಯ್ಯಾಪುರ ತಮ್ಮ ಜನ್ಮದಿನದ ನೆಪದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರನ್ನು ಕರೆಯಿಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ದೊಡ್ಡನಗೌಡ ಪಾಟೀಲರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಚುನಾವಣಾ ಸಮಿತಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ನಾಯಕರನ್ನು ಕರೆಯಿಸಿ ಶಕ್ತಿ ಪ್ರದರ್ಶಿಸಿದ್ದರು. ಈ ಕಾರ್ಯಕ್ರಮಗಳಲ್ಲಿ ಸಿದ್ದರಾಮಯ್ಯ ಹಾಗೂ ಬೊಮ್ಮಾಯಿ ಅವರು ತಮ್ಮ ಪಕ್ಷಗಳ ಹುರಿಯಾಳುಗಳನ್ನು ಪಕ್ಕದಲ್ಲಿಯೇ ನಿಲ್ಲಿಸಿಕೊಂಡು ಮತಬೇಟೆಯಾಡಿದ್ದರು. ಹೀಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಡುವುದು ನಿಶ್ಚಿತ.

ಈಚೆಗೆ ಜೆಡಿಎಸ್‌ ರಾಜ್ಯ ಸಂಘಟನಾ ಕಾರ್ಯದರ್ಶಿ ಸಿ.ಎಂ. ಹಿರೇಮಠ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸ್ಪರ್ಧಿಸುವುದಾಗಿ ಹೇಳುತ್ತಿದ್ದಾರೆ. ಇನ್ನೂ ಕೆಲವರು ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆಯಾದರೂ ‘ಕೊನೆಯ ಕಸರತ್ತಿ’ಗೆ ಕಾಯುತ್ತಿದ್ದಾರೆ.

ಮಾಜಿ ಶಾಸಕ ಕೆ. ಶರಣಪ್ಪ ಅವರು ಜೆಡಿಎಸ್‌ನಲ್ಲಿದ್ದಾಗ ಪಕ್ಷಕ್ಕೆ ಕುಷ್ಟಗಿ ಕ್ಷೇತ್ರದಲ್ಲಿ ಗಟ್ಟಿ ನೆಲೆಯಿತ್ತು. ಪಕ್ಷದ ವರ್ಚಸ್ಸಿಗಿಂತ ಶರಣಪ್ಪ ಅವರ ವೈಯಕ್ತಿಕ ಪ್ರಭಾವವೇ ಪಕ್ಷವನ್ನು ಬೆಳೆಸಿತ್ತು. ಹಲವು ವರ್ಷಗಳಿಂದ ಜೆಡಿಎಸ್‌ ನೆಲೆ ಕಳೆದುಕೊಂಡಿದೆ. ಇದರ ನಡುವೆಯೂ ಜೆಡಿಎಸ್‌ ಹಿಂದೂ ಗೋಂದಳಿ ಸಮಾಜದ ತುಕಾರಾಮ್‌ ಸೂರ್ವೆ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ.

ಕುಷ್ಟಗಿ ಕ್ಷೇತ್ರದ ಜೆಡಿಎಸ್‌ನ ಶಕ್ತಿ ಎನಿಸಿದ್ದ ಶರಣಪ್ಪ ಅವರು ಚುನಾವಣೆಗೆ ಸ್ಪರ್ಧಿಸಿದಾಗಲೆಲ್ಲ ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಮತಗಳನ್ನು ಗಳಿಸಿದ್ದಾರೆ. ಆದರೆ 2018ರ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಎಚ್‌.ಸಿ. ನೀರಾವರಿ 4,002 ಮತಗಳನ್ನಷ್ಟೇ ಪಡೆದುಕೊಂಡಿದ್ದರು. ಹಿಂದಿನ ಶಕ್ತಿ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಈಗ ಉಳಿದಿಲ್ಲ.

ಕ್ಷೇತ್ರದ ಚುನಾವಣಾ ಹಿನ್ನೋಟ

ಕೊಪ್ಪಳ: 1962ರ ಚುನಾವಣೆಯಲ್ಲಿ ಲೋಕಸೇವಕ್‌ ಸಂಘದಿಂದ ಕಾಂತಾರಾವ್‌ ಗೆಲುವು ಪಡೆದಿದ್ದನ್ನು ಹೊರತುಪಡಿಸಿದರೆ 1957ರಿಂದ 1983ರ ಅವಧಿಯಲ್ಲಿ ನಡೆದ ಚುನಾವಣೆಗಳಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಜಯಭೇರಿ ಮೊಳಗಿಸಿತ್ತು. ಜಯಪ್ರಕಾಶ ನಾರಾಯಣರು ಸ್ಥಾಪಿಸಿದ್ದ ಜನತಾ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಎಂ.ಎಸ್‌. ಪಟೇಲ್‌ ಗೆಲ್ಲುವ ಮೂಲಕ 1985ರಲ್ಲಿ ಕಾಂಗ್ರೆಸ್‌ ಜಯದ ಓಟಕ್ಕೆ ಲಗಾಮು ಹಾಕಿದರು.

ಮುಂದಿನ 1989ರಲ್ಲಿ ಕಾಂಗ್ರೆಸ್‌ನ ಹನುಮಗೌಡ ಶೇಖರಗೌಡ, 1994ರಲ್ಲಿ ಜನತಾದಳದಿಂದ ಕೆ. ಶರಣಪ್ಪ, 1999ರಲ್ಲಿ ಕಾಂಗ್ರೆಸ್‌ನ ಹಸನಸಾಬ್‌ ದೋಟಿಹಾಳ್‌ ಗೆಲುವು ಪಡೆದಿದ್ದರು. ಈ ಸಲದ ಚುನಾವಣೆಗೂ ಟಿಕೆಟ್‌ ನೀಡುವಂತೆ ಹಸನಸಾಬ್‌ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT