ಶನಿವಾರ, ಡಿಸೆಂಬರ್ 14, 2019
24 °C

ಡೆಂಗಿ ಪೀಡಿತರ ನಿರ್ಲಕ್ಷ್ಯ ಮಾಡಿಲ್ಲ: ವೈದ್ಯರ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನಕಗಿರಿ: ಸಮೀಪದ ಬಸರಿಹಾಳ ಗ್ರಾಮದ ಡೆಂಗಿ ಹಾಗೂ ವಿಷಮಶೀತ ಜ್ವರದಿಂದ ಬಳಲುತ್ತಿರುವವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಪವನಕುಮಾರ ಅರವಟಗಿಮಠ ತಿಳಿಸಿದರು.

ಮಂಗಳವಾರ ‘ಪ್ರಜಾವಾಣಿ‘ಯ ಗ್ರಾಮಾಯಣದಲ್ಲಿ ಪ್ರಕಟವಾದ ‘ಡೆಂಗಿಗೆ ಬೆಚ್ಚಿ ಬಿದ್ದ ಬಸರಿಹಾಳ’ ವರದಿಗೆ ಅವರು  ಸ್ಪಷ್ಟನೆ ನೀಡಿದ್ದಾರೆ.

ಮುಸಲಾಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬಸರಿಹಾಳ ಗ್ರಾಮ ಸೇರಿದ್ದರೂ ಚಿಕಿತ್ಸೆಗಾಗಿ ಇಲ್ಲಿಗೆ ಬರುವ ಜನರಿಗೆ ರಕ್ತ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮದ ಕೆಲ ಯುವಕರು ಕನಕಗಿರಿ ಆಸ್ಪತ್ರೆ ಸಿಬ್ಬಂದಿ ಸ್ಪಂದಿಸುತ್ತಿಲ್ಲ ಎಂದು ದೂರಿರುವುದರಲ್ಲಿ ಯಾವುದೇ ಹುರುಳಿಲ್ಲ. ಪ್ರತಿದಿನ 20ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ’ ಎಂದರು.

ಡೆಂಗಿ ಮತ್ತು ಬಿಳಿ ರಕ್ತಕಣಗಳ ಪರೀಕ್ಷೆಯ ಸೌಲಭ್ಯ ಆಸ್ಪತ್ರೆಯಲ್ಲಿ ಇಲ್ಲ. ಅನಿವಾರ್ಯವಾಗಿ ಖಾಸಗಿ ರಕ್ತ ತಪಾಸಣಾ ಕೇಂದ್ರಗಳಿಗೆ ಕಳುಹಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

‘ಗ್ರಾಮಸ್ಥರು ಡೆಂಗಿ ಜ್ವರದಿಂದ ಬಳಲುತ್ತಿರುವ ಬಗ್ಗೆ ಮಾಹಿತಿ ಇದ್ದು, ಕಳೆದ ಒಂದು ತಿಂಗಳ ಹಿಂದೆಯೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರ ಗಮನಕ್ಕೆ ತರಲಾಗಿದೆ. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡುವಂತೆ  ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಶಾಂತಾ ರಮೇಶ ನಾಯಕ ತಿಳಿಸಿದರು.

ಮತ್ತೆ ದಾಖಲು: ಡೆಂಗಿ ಜ್ವರದಿಂದ ತತ್ತರಿಸಿರುವ ಬಸರಿಹಾಳ ಗ್ರಾಮಸ್ಥರು ಆತಂಕದಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಅಶೋಕ, ಹನುಮಮ್ಮ ಜೀರಾಳ, ಭಾಗ್ಯಶ್ರೀ, ಶಂಕ್ರಮ್ಮ, ಹನುಮಮ್ಮ, ಯಮನಮ್ಮ ಸೇರಿದಂತೆ ಹತ್ತಾರು ಜನ ವಿಷಮಶೀತ ಜ್ವರದಿಂದ ಬಳಲುತ್ತಿದ್ದ ಗ್ರಾಮಸ್ಥರು ಮಂಗಳವಾರವೂ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆದರು.

ಗ್ರಾಮದಲ್ಲಿ ಜ್ವರದಿಂದ ಬಳಲುವವರು ಸಂಖ್ಯೆ ವಿಪರೀತವಾಗಿದೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಖಾಸಗಿ ಆಸ್ಪತ್ರೆಯಲ್ಲಿ ದಿನಲೂ 40ಕ್ಕೂ ಹೆಚ್ಚು ಜನರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಲ್ಲಿನ ನಿವಾಸಿ ಬಸವರಾಜ ಬ್ಯಾಡಗಿ ‘ಪ್ರಜಾವಾಣಿ’ಗೆ ತಿಳಿಸಿದರು.
 

ಪ್ರತಿಕ್ರಿಯಿಸಿ (+)