ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಸರಾ ಸಡಗರ, ಸಾಂಸ್ಕೃತಿಕ ಸಂಭ್ರಮ

ನಾಡಹಬ್ಬದ ಅಂಗವಾಗಿ ವಿವಿಧೆಡೆ ಕಾರ್ಯಕ್ರಮಗಳ ಆಯೋಜನೆ
Last Updated 28 ಸೆಪ್ಟೆಂಬರ್ 2022, 16:02 IST
ಅಕ್ಷರ ಗಾತ್ರ

ಕೊಪ್ಪಳ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ದಸರಾ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ನವರಾತ್ರಿಯ ಈ ಸಡಗರಕ್ಕೆ ಸಾಂಸ್ಕೃತಿಕ ಚಟುವಟಿಕೆಗಳು ಕಳೆ ತಂದಿವೆ.

ನಗರದ ಗಡಿಯಾರ ಕಂಬದ ಬಳಿ ದುರ್ಗಾದೇವಿ ಮಿತ್ರಮಂಡಳಿ ಪ್ರತಿಷ್ಠಾಪಿಸಿರುವ ಚಾಮುಂಡೇಶ್ವರಿ ವಿಗ್ರಹ, ವಿದ್ಯುಕ್ತ ಅಲಂಕಾರ, ಹೂಗಳ ಶೃಂಗಾರ ಮತ್ತು ದೀಪಗಳಿಂದ ಅಲಂಕಾರಗೊಂಡ ವೇದಿಕೆ ಎಲ್ಲರ ಕಣ್ಮನ ಸೆಳೆಯುತ್ತಿದೆ. ಇದೇ ವೇದಿಕೆಯ ಮುಂದೆ ಬುಧವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಾಕಷ್ಟು ಜನ ವೀಕ್ಷಿಸಿದರು. ಭವ್ಯ ವೇದಿಕೆಯ ಮೇಲೆ ಕಂಬಗಳಿಂದ ಮಂಟಪ ನಿರ್ಮಿಸಿ ಹೂಗಳಿಂದ ಸುಂದರಗೊಳಿಸಲಾಗಿದೆ.

ಇಲ್ಲಿನ ವಾಸವಿ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ದಸರಾ ಹಬ್ಬದ ಪ್ರಯುಕ್ತ ಮೂರನೇ ದಿನ ನವಧಾನ್ಯಗಳ ಅಲಂಕಾರ ಮಾಡಲಾಗಿತ್ತು.ಗಂಗಾವತಿ ತಾಲ್ಲೂಕಿನ ಆನೆಗೊಂದಿ ಸಮೀಪದ ಆದಿಶಕ್ತಿ ದುರ್ಗಾದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ರುದ್ರಾಭಿಷೇಕ, ಚಂಡಿಹೋಮ, ಕುಂಕಾಮಾರ್ಚನೆ, ಗೋ ಪೂಜೆ, ಮಹಾಪ್ರಸಾದ ವ್ಯವಸ್ಥೆ ಇತ್ತು. ಆದಿಶಕ್ತಿ ಮತ್ತು ಗಂಗಾವತಿ ತಾಲ್ಲೂಕಿನ ಹೇಮಗುಡ್ಡದಲ್ಲಿ ವಿಜಯನಗರ ಕಾಲದ ಮಾದರಿಯಲ್ಲಿಯೇ ದಸರಾ ಕಾರ್ಯಕ್ರಮಗಳನ್ನು ಪ್ರತಿವರ್ಷವೂ ಆಯೋಜಿಸಿಕೊಂಡು ಬರಲಾಗುತ್ತಿದೆ. ಹೇಮಗುಡ್ಡಕ್ಕೆ ನಿತ್ಯ ಸಾಕಷ್ಟು ಜನ ಭಕ್ತರು ಬರುತ್ತಿದ್ದಾರೆ.

ಯುವಸೌರಭ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಇಲ್ಲಿಗೆ ಸಮೀಪದ ಭಾಗ್ಯನಗರದ ನವಚೇತನ ಆಂಗ್ಲಮಾಧ್ಯಮ ಪ್ರೌಢಶಾಲೆ ಮತ್ತು ವಿಜ್ಞಾನ ಪದವಿಪೂರ್ವ ವಸತಿ ಕಾಲೇಜಿನಲ್ಲಿ ಯುವ ಸೌರಭ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಂಸದ ಕರಡಿ ಸಂಗಣ್ಣ ‘ಯುವ ಜನರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಾನಸಿಕ ಹಾಗೂ ದೈಹಿಕ ಒತ್ತಡ ಕಡಿಮೆ ಮಾಡಿಕೊಳ್ಳಬೇಕು’ ಎಂದರು.

‘ಯುವಜನತೆಯಲ್ಲಿನ ಸಾಂಸ್ಕೃತಿಕ ಅಭಿರುಚಿ ಪ್ರೋತ್ಸಾಹಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಮಾನ್ಯವಾಗಿ ಇಂದಿನ ಯುವ ಜನತೆ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಒತ್ತಡಕ್ಕೆ ಸಿಲುಕಿದ್ದಾರೆ. ಒತ್ತಡ ಕಡಿಮೆ ಮಾಡಲು ಯುವಸೌರಭ ವೇದಿಕೆಯಾಗಿದೆ. ಜೀವನ ಒತ್ತಡ ರಹಿತವಾಗಿದ್ದರೆ ಸರ್ವತೋಮುಖ ಬೆಳವಣಿಗೆಯ ಹಾದಿ ಸುಲಭವಾಗುತ್ತದೆ’ ಎಂದರು.

ನವಚೇತನ ಆಂಗ್ಲಮಾಧ್ಯಮ ಪ್ರೌಢಶಾಲೆ ಮತ್ತು ವಿಜ್ಞಾನ ಪದವಿಪೂರ್ವ ವಸತಿ ಕಾಲೇಜಿನ ಕಾಲೇಜಿನ ಪ್ರಾಚಾರ್ಯ ಸಂಗೀತಾ ಕಲ್ಲೇಶ ಅಧ್ಯಕ್ಷತೆ ವಹಿಸಿದ್ದರು. ಭಾಗ್ಯನಗರ ಪಟ್ಟಣ ಪಂಚಾಯಿತಿ ಸದಸ್ಯ ಪರಶುರಾಮ ನಾಯಕ್, ನವಚೇತನ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಮೀನಾಕ್ಷಮ್ಮ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT