ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಈದ್ ಮಿಲಾದ್ ಸರಳ ಆಚರಣೆ

ಪ್ರವಾದಿ ಮುಹಮ್ಮದ್ ಪೈಗಂಬರ್ ಸ್ಮರಣೆ: ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ, ವಿವಿಧೆಡೆ ಅನ್ನ ಸಂತರ್ಪಣೆ: ಸಮಾಜದವರಿಂದ ಗ್ರಾಮ ಸ್ವಚ್ಛತಾ ಕಾರ್ಯ
Last Updated 31 ಅಕ್ಟೋಬರ್ 2020, 4:45 IST
ಅಕ್ಷರ ಗಾತ್ರ

ಕೊಪ್ಪಳ: ಕೋವಿಡ್‌ ಕಾರಣಕ್ಕೆ ಈ ಬಾರಿಯ ಈದ್ ಮಿಲಾದ್ ಆಚರಣೆ ಹೊರಗಡೆ ಎಲ್ಲಿಯೂ ಕಂಡುಬರಲಿಲ್ಲ. ಬಹುತೇಕರು ಮನೆಯಲ್ಲಿಯೇ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಪ್ರತಿವರ್ಷಅದ್ದೂರಿ ಮೆರವಣಿಗೆ ಇರುತ್ತಿತ್ತು. ದರ್ಗಾಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಲು ಸಾಕಷ್ಟು ಸಂಖ್ಯೆಯಲ್ಲಿ ಜನ ಬರುತ್ತಿದ್ದರು ಮತ್ತು ಮಸೀದಿಯಲ್ಲಿ ಹಾಗೂ ಈದ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿತ್ತು. ಆದರೆ ಈ ಸಲ ಯಾವ ಸಡಗರವೂ ಕಂಡುಬರಲಿಲ್ಲ. ನಗರದ ಬಹಳಷ್ಟು ಮಸೀದಿಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಆದರೆ, ದಾಸೋಹದ ವ್ಯವಸ್ಥೆ ಇರಲಿಲ್ಲ.

ಹಣ್ಣು-ಹಂಪಲು ವಿತರಣೆ:ಅಂಜುಮನ್‌ ಎ ಇಸ್ಲಾಂ ಸಮಿತಿಯ ಪದಾಧಿಕಾರಿಗಳುಜಿಲ್ಲಾ ಆಸ್ಪತ್ರೆಯ ರೋಗಿಗಳಿಗೆ ಆಹಾರ ವಿತರಸಿದರು. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಕಾಟನ ಪಾಷಾ, ಸಂಸ್ಥೆಯ ಅಧ್ಯಕ್ಷ ಹುಸೇನ್ ಪೀರಾ ಚಿಕನ್, ನಗರಸಭೆ ಸದಸ್ಯರಾದ ಅಜೀಂಅತ್ತಾರ, ಅಕ್ಬರ್ ಪಾಶಾ ಪಲ್ಟನ್, ಡಾ.ಎಸ್‌.ಬಿ.ದಾನರೆಡ್ಡಿ,ನಗರ ಠಾಣೆ ಸಿಪಿಐ ಮಾರುತಿ ಗುಳ್ಳಾರಿ ಇದ್ದರು. ‘ನೆರೆಹೊರೆಯವರು ಹಸಿವಿನಿಂದಬಳಲುತ್ತಿರುವಾಗ,ತಮ್ಮಮನೆಯಲ್ಲಿ ಊಟ ಮಾಡಿ ನೆರೆಹೊರೆಯವರ ಸಂಕಷ್ಟಕ್ಕೆ ಆಗದವರು ನಿಜವಾದ ಇಸ್ಲಾಂನಲ್ಲಿ ನಂಬಿಕೆ ಉಳ್ಳವರು ಅಲ್ಲ ಎಂದು ಪ್ರವಾಸಿ ಮೊಹಮ್ಮದ್‌ (ಸ) ಹೇಳಿದ್ದಾರೆ’ ಎಂಬ ಸಂದೇಶವನ್ನು ಪ್ರವಾದಿ ಮುಹಮ್ಮದ್ ಪೈಗಂಬರ್ ಅವರು ಸಾರಿದ್ದಾರೆ ಅದರಂತೆ ನಾವು ನಡೆದುಕೊಳ್ಳಬೇಕು ಎಂದು ಹಿರಿಯರಾದ ಜುಲ್ಲು ಖಾದರ್ ಖಾದ್ರಿ ಹೇಳಿದರು.

ಗಮನ ಸೆಳೆದ ಪ್ರತಿಕೃತಿ: ನಗರದಹಿರೇಮಸೂತಿ ಆವರಣದಲ್ಲಿ ಶುಕ್ರವಾರ ಈದ್ ಮಿಲಾದ್ ಹಬ್ಬದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಮದೀನಾ ಪ್ರತಿಕೃತಿ ಆಕರ್ಷಕವಾಗಿತ್ತು. ಸಮಾಜದ ಯುವಕರು ಮಕ್ಕಳು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ನಗರದ ಕೋಟೆ ರಸ್ತೆಯ ಖಾದರ ಲಿಂಗ ಬಾಬಾ ದರ್ಗಾದ ಬಳಿ ನಿರ್ಮಿಸಲಾಗಿದ್ದ ಮೆಕ್ಕಾದ ಖಾಬಾ ಪ್ರತಿಕೃತಿ ಸುಂದರವಾಗಿತ್ತು. ಮಂಟಪ ಹಾಕಿ ಒಂದೆಡೆ ಪ್ರತಿಷ್ಠಾಪನೆ ಮಾಡಲಾಗಿತ್ತು. ಅನೇಕರು ಕೈಮುಗಿದು ಭಕ್ತಿ ಸಮರ್ಪಿಸಿದರು.

ಹಬ್ಬದ ಪ್ರಯುಕ್ತ ಹೊಸಬಟ್ಟೆ ತೊಟ್ಟು ಮುಸ್ಲಿಂರು ಸಂಭ್ರಮಿಸಿದರಲ್ಲದೆ, ವಿಶೇಷ ಅಡುಗೆಯನ್ನು ಮಾಡಿದ್ದರು. ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಂಡರು.ಗಡಿಯಾರ ಕಂಬ ವೃತ್ತದಲ್ಲಿ ಶುಕ್ರವಾರ ಗಂಜೆ ಶಹೀದ್ ಬಾಬಾ ದರ್ಗಾ ಕಮೀಟಿಯಿಂದ ಈದ್ ಮಿಲಾದ್ ಅಂಗವಾಗಿ ಸಾರ್ವಜನಿಕರಿಗೆ ಸಿಹಿ ಹಂಚಲಾಯಿತು.

ಸಂಚಾರಿ ಪೊಲೀಸರಿಗೆ ಆಹಾರದ ಪೊಟ್ಟಣ ನೀಡಿದರು. ವಿವಿಧ ಮಸೀದಿಗಳನ್ನು ವಿದ್ಯುತ್ ದೀಪ ಹಾಕಿ ಅಲಂಕಾರ ಕೂಡಾ ಮಾಡಲಾಗಿತ್ತು.

ಮನೆಯಲ್ಲಿ ವಿಶೇಷ ಪ್ರಾರ್ಥನೆ

ತಾವರಗೇರಾ: ಪಟ್ಟಣದಲ್ಲಿ ಶುಕ್ರವಾರ ಈದ್ ಮಿಲಾದ್ ಅನ್ನು ಸರಳವಾಗಿ ಆಚರಿಸಲಾಯಿತು.

ಕೊರೊನಾ ಸೋಂಕು ಹರಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಸಾಮೂಹಿಕ ಪ್ರಾರ್ಥನೆ ಮತ್ತು ಮೆರವಣಿಗೆ ನಿಷೇಧಿಸಲಾಗಿತ್ತು. ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿ ಮುಸ್ಲಿಂ ಬಾಂಧವರು ಈದ್ ಆಚರಣೆ ಮಾಡಿದರು.

ಗುರುವಾರ ರಾತ್ರಿ ಮುಸ್ಲಿಂ ಸಮುದಾಯದವರು ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಪ್ರವಾದಿ ಸ್ಮರಣೆ

ಯಲಬುರ್ಗಾ: ಮುಹಮ್ಮದ್ ಪೈಗಂಬರ್ ಜಯಂತಿ ಪ್ರಯುಕ್ತ ತಾಲ್ಲೂಕಿನ ಸಂಕನೂರು ಗ್ರಾಮದಲ್ಲಿ ಮುಸ್ಲಿಂ ಧರ್ಮದವರು ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಅಹಲೆ ಸನ್ನತ್ ಅಂಜುಮನ್ ಸಮಿತಿ ವತಿಯಿಂದ ನಡೆದ ಮೆರವಣಿಯಲ್ಲಿ ಮುಖಂಡರಾದ ಮಾಬುಸಾಬ ಇಟಗಿ, ದಸ್ತಗಿರ್‍ಸಾಬ ಮ್ಯಾಗೇರಿ, ಮಲ್ಕಸಾಬ ಮದಾರಿ, ರಾಜೇಸಾಬ ಆದಾಪೂರ, ಅಬ್ದುಲ್‍ಸಾಬ ಅಮರಾವತಿ, ಖಾಜಾಸಾಬ ಅಮರಾವತಿ, ಅಬ್ದುಲ್‍ಖಾದರ ಮಲ್ಕಸಮುದ್ರ ಹಾಗೂ ಖಾಜಾಮೈನೂದ್ದೀನ್ ಇದ್ದರು.

ಸ್ವಚ್ಛತಾ ಕಾರ್ಯ

ಹನುಮಸಾಗರ: ಪ್ರವಾದಿ ಮುಹಮ್ಮದ್ ಪೈಗಂಬರ್‌ ಅವರ ಜನ್ಮದಿನ ಈದ್‌ ಮಿಲಾದ್‌ ಅನ್ನು ಮನೆಯಲ್ಲಿಯೇ ಆಚರಣೆ ಮಾಡಿದೆವು ಎಂದು ಜಮಾ ಅತೆ ಇಸ್ಲಾಮೀ ಹಿಂದ್ ಘಟಕದ ಅಧ್ಯಕ್ಷ ಗೇಸೂದರಾಜ ಮೂಲಿಮನಿ ತಿಳಿಸಿದರು.

ಈದ್ ಮಿಲಾದ್‌ ಪ್ರಯುಕ್ತ ಜಮಾ ಅತೆ ಇಸ್ಲಾಮೀ ಹಿಂದ್ ಘಟಕದಿಂದ ಆಯೋಜಿಸಲಾಗಿದ್ದ ಗ್ರಾಮ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಕೊರೊನಾ ಹಿನ್ನೆಲೆಯಲ್ಲಿ ಮೆರವಣಿಗೆ, ಸಾಮೂಹಿಕ ಪ್ರಾರ್ಥನೆ ನಿಷೇಧಿಸಿದ ಕಾರಣ ಸಮಾಜದ ಯುವಕರ ಸಹಕಾರದಿಂದ ದೈಹಿಕ ಅಂತರ ಕಾಪಾಡಿಕೊಂಡು ಗ್ರಾಮ ಸ್ವಚ್ಛತಾ ಕಾರ್ಯ ಹಮ್ಮಿಕೊಂಡಿದ್ದೆವು’ ಎಂದು ಹೇಳಿದರು.

ಪ್ರಮುಖರಾದ ಜಹಾಂಗೀರ ಸಾಬ ಚಳಗೇರಿ, ಹಸನಸಾಬ ಮೂಲಿಮನಿ, ದಸ್ತಗೀರಸಾಬ ಮೂಲಿಮನಿ, ಬಾದಶಾಸಾಬ ಹುನಗುಂದ, ಮಹೇಬೂಬಸಾಬ ಮೂಲಿಮನಿ, ಜಿಯಾ ಚೌಧರಿ, ಅಬ್ದುಲ್ ರವುಫ್ ಹಾಗೂ ಖಾದರಸಾಬ ಪತ್ಲಾ ಇದ್ದರು.

ಪೈಗಂಬರ್‌ ವಿಚಾರ ಸಾರ್ವಕಾಲಿಕ

ಕನಕಗಿರಿ: ‘ಪ್ರವಾದಿ ಮುಹಮ್ಮದ್ ಅವರ ವಿಚಾರಧಾರೆ ಹಾಗೂ ಜೀವನ ಮೌಲ್ಯ ಸಾರ್ವಕಾಲಿಕ’ ಎಂದು ಗಂಗಾವತಿಯ ಆಫೀಜ್‌

ಸೈಯದ್ ನೂರುದ್ದೀನ್ ಖಾದ್ರಿ ಅಭಿಪ್ರಾಯಪಟ್ಟರು.

ಇಲ್ಲಿನ ಜಾಮಿಯಾ ಮಸೀದಿಯಲ್ಲಿ ಶುಕ್ರವಾರ ನಡೆದ ‘ಈದ್‌ ಮಿಲಾದ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮಾಜದ ಅಭಿವೃದ್ಧಿಗೆ ಶಿಕ್ಷಣ ಮುಖ್ಯ ಎನ್ನುವುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಅಂದಾಗ ಪ್ರಗತಿ ಸಾಧ್ಯ ಎಂದು
ಹೇಳಿದರು.

ಎಲ್ಲರಿಗೂ ಶಿಕ್ಷಣ ಪಡೆಯಬೇಕು ಎಂಬ ಆಶಯದಿಂದ ಸರ್ಕಾರ ಎಲ್ಲ ವರ್ಗದ ಜನರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುತ್ತಿದೆ.

ಅವುಗಳ ಸದುಪಯೋಗ ಪಡೆದುಕೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ತಿಳಿಸಿದರು.

ಶಿಕ್ಷಣ, ಸಂಘಟನೆ ಇಲ್ಲದೆ, ಮುಸ್ಲಿಂರು ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಉರ್ದು ಭಾಷೆ ಜತೆಗೆ ಇತರೆ ಭಾಷೆಗಳ ಕಲಿಕೆ ಸಹ ವ್ಯಕ್ತಿಯನ್ನು ಉನ್ನತ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ. ಪಾಲಕರು ಈ ಕುರಿತು ಜಾಗೃತಿ ಹೊಂದಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ಒತ್ತಿ
ಹೇಳಿದರು.

ಚಂದುಸಾಬ ಸೂಳೇಕಲ್ ಅವರು ವಿಶೇಷ ಪ್ರಾರ್ಥನೆ ಮಾಡಿಸಿದರು. ಸಿಹಿ ವಿತರಣೆ, ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು. ಯುವಕರು ಕುರಾನ್ ಶ್ಲೋಕ್‌ಗಳನ್ನು ಪಠಿಸಿದರು.

ಜಾಮೀಯ ಮಸೀದಿ ಅಧ್ಯಕ್ಷ ಮೆಹಬೂಬಸಾಬ ಗುರಿಕಾರ, ಎಪಿಎಂಸಿ ಮಾಜಿ ನಾಮ ನಿರ್ದೇಶಕ ಇಮಾಮಸಾಬ ಎಲಿಗಾರ, ಪ್ರಮುಖರಾದ ಯಮನೂರಸಾಬ ಬಾಗಲಿ, ಶಾಮೀದಸಾಬ ಲೈನದಾರ, ಪೀರ ಆಹ್ಮದ ಬೀಡಿ, ರಸೂಲಸಾಬ ಮಕಾನದರಮ ಹಾಗೂ ಹೊನ್ನೂರುಸಾಬ ಬೀಡಿ ಇದ್ದರು.

ಅಬ್ದುಲ್ ಕ್ವಾಟಿ ಅವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಚಿಕ್ಕಖೇಡ ಮೌಲಾನ್ ಆಹ್ಮದಸಾಬ ಹೊಸಗೇರ ಅವರು
ಪೈಗಂಬರರ ಜೀವನ ಚರಿತ್ರೆ ಕುರಿತು ತಿಳಿಸಿದರು. ಮಸೀದಿ ಸಮಿತಿ ಅಧ್ಯಕ್ಷ ಬಾಹುದ್ದೀನ್ ಅಗರಬತ್ತಿ, ಪ್ರಮುಖರಾದ ತಾಜುದ್ದೀನ್ ವಟಪರ್ವಿ, ಶೌಕತ್ ನಡಲಮನಿ, ವಕೀಲ ಮಾಬುಹುಸೇನ ಗುಡಿಹಿಂದಲ, ಕಾಶೀಂಸಾಬ ಮಂಗಳೂರು ಹಾಗೂ ಮೌಲಾಹುಸೇನ ಶಿರಿವಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT