ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಂಗಾವತಿ: ರೆಡ್ಡಿ ಆಪರೇಷನ್‌ಗೆ ಒಲಿಯುತ್ತಾ ನಗರಸಭೆ?

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ಇಂದು
ಎನ್‌. ವಿಜಯ್
Published 26 ಆಗಸ್ಟ್ 2024, 5:23 IST
Last Updated 26 ಆಗಸ್ಟ್ 2024, 5:23 IST
ಅಕ್ಷರ ಗಾತ್ರ

ಗಂಗಾವತಿ: ಇಲ್ಲಿನ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸೋಮವಾರ ಚುನಾವಣೆ ನಡೆಯಲಿದ್ದು, ಬಿಜೆಪಿ ಶಾಸಕ ಜಿ.ಜನಾರ್ದನರೆಡ್ಡಿ ನಗರಸಭೆಯಲ್ಲಿ ಪಕ್ಷದ ಬಾವುಟ ಹಾರಿಸಲು, ತಂತ್ರ-ರಣತಂತ್ರಗಳನ್ನು ಹಣೆಯುತ್ತಿದ್ದಾರೆ. 28 ಸದಸ್ಯರನ್ನು ತನ್ನ ಬಳಿ ಇರಿಸಿಕೊಂಡಿದ್ದಾರೆ. ಆದ್ದರಿಂದ ನಗರಸಭೆ ಅಧಿಕಾರದ ಚುಕ್ಕಾಣಿ ಬಿಜೆಪಿ ಪಾಲಾಗುವ ಸಾಧ್ಯತೆ ದಟ್ಟವಾಗಿದೆ.

ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಅ), ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿರುವುದರಿಂದ ರೆಡ್ಡಿ ಸದಸ್ಯರನ್ನು ಬೆಂಗಳೂರಿಗೆ ಒಮ್ಮೆ ಕರೆಯಿಸಿ, ಮತ್ತೊಮ್ಮೆ ಗಂಗಾವತಿಯಲ್ಲಿ ಸ್ಥಳೀಯ ನಾಯಕರ ಸಮ್ಮುಖದಲ್ಲಿ ನಗರಸಭೆ ಅಧಿಕಾರ ಹಿಡಿಯುವ ಬಗ್ಗೆ ಸಭೆ ನಡೆಸಿ, ಸಕಲ ರೀತಿಯಲ್ಲಿ ಸಿದ್ಧತೆ ನಡೆಸಿದ್ದರು.ಆದರೆ ಕಾಂಗ್ರೆಸ್ ನಾಯಕರು ಮಾತ್ರ ಅಧಿಕಾರದ ಗದ್ದುಗೆಗಾಗಿ ಕಿಂಚಿತ್ತೂ ಪ್ರಯತ್ನಗಳು ನಡೆಸಿಲ್ಲ. ಈ ಕುರಿತು ಕಾಂಗ್ರೆಸ್ ಮುಖಂಡರನ್ನು ಕೇಳಿದರೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್ ಶ್ರೀನಾಥ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಾಮೀದ್ ಮನಿಯಾರ್ ಅವರ ನಡುವೆ ರಾಜಕೀಯ ತಿಕ್ಕಾಟವಿದೆ. ಹಾಗಾಗಿ ಅನ್ಸಾರಿ ಅವರ ಸಹಕಾರ ಪಡೆಯಲ್ಲ ಎನ್ನುತ್ತಾರೆ.

ಬಿಜೆಪಿಗೆ 28 ಸದಸ್ಯರ ಬೆಂಬಲ: ಶಾಸಕ ಜನಾರ್ದನ ರೆಡ್ಡಿ ಶತಾಯಗತಾಯ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿಯ 14, ಜೆಡಿಎಸ್ 2, ಪಕ್ಷೇತರ 2 ಸೇರಿ ಕಾಂಗ್ರೆಸ್ಸಿನ 10 ನಗರಸಭೆ ಸದಸ್ಯರನ್ನು 4-5 ದಿನಗಳು ಬೆಂಗಳೂರಿನ ರೆಸಾರ್ಟ್ ಒಂದರಲ್ಲಿ ಇರಿಸಿದ್ದಾರೆ. ಇನ್ನು ಚುನಾವಣೆ ಹಿಂದಿನ ದಿನ ರಾತ್ರಿ ನಗರಸಭೆ ಸದಸ್ಯರು ಹನುಮನಹಳ್ಳಿ ಬಳಿ ಖಾಸಗಿ ಹೋಟೆಲ್‌ಗೆ ಆಗಮಿಸಿ ಚುನಾವಣೆ ದಿನ ನಗರಸಭೆಗೆ ಬರಲಿದ್ದಾರೆ. ನಗರಸಭೆಗೆ ಒಟ್ಟು 35 ಜನ ಸದಸ್ಯರಿದ್ದಾರೆ.

ತಿಕ್ಕಾಟ: ಸ್ಥಳೀಯ ಬಿಜೆಪಿ ನಾಯಕರು ಮೂಲ ಬಿಜೆಪಿಗರಿಗೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ಕೇಳಿದ್ದಾರೆ. ಬಿಜೆಪಿಗೆ ಬೆಂಬಲಿಸುವ ಕಾಂಗ್ರೆಸ್ ಸದಸ್ಯರು ತಮಗೂ ಅಧ್ಯಕ್ಷ ಸ್ಥಾನ ಬೇಕೆಂದು ಶಾಸಕರ ಬಳಿ ಬೇಡಿಕೆ ಇಟ್ಟಿದ್ದಾರೆ. ಬಿಜೆಪಿಯಿಂದ ನೀಲಕಂಠ ಕಟ್ಟಿಮನಿ, ಅಜಯ್ ಬಿಚ್ಚಾಲಿ, ಪರುಶುರಾಮ ಮಡ್ಡೇರಾ, ಕಾಂಗ್ರೆಸ್ಸಿನಿಂದ ಮೌಲಾಸಾಬ, ಮುಸ್ತಾಕ್ ಅಲಿ, ಜೆಡಿಎಸ್‌ನಿಂದ ಉಸ್ಮಾನ್ ಬಿಚ್ಚಗತ್ತಿ ಆಕಾಂಕ್ಷಿಗಳಿದ್ದು, ಅಧ್ಯಕ್ಷಗಿರಿ ಯಾರಿಗೆ ಎನ್ನುವ ಗುಟ್ಟು ಇನ್ನೂ ರಟ್ಟಾಗಿಲ್ಲ.

ಬಿಜೆಪಿಗೆ ಬೆಂಬಲಿಸುವ ಕೆಲ ಕಾಂಗ್ರೆಸ್ ಸದಸ್ಯರು, ಚುನಾವಣೆ ದಿನ ಕಾಂಗ್ರೆಸ್‌ಗೆ ಬೆಂಬಲ ಸೂಚಿಸುವ ಬಗ್ಗೆ ಮಾತುಕತೆ ನಡೆದಿದ್ದು, ಕಾಂಗ್ರೆಸ್‌ ನಾಯಕರು ತೆರೆಮರೆ ಕಸರತ್ತು ನಡೆಸಿದ್ದಾರೆ.
ಎಚ್.ಆರ್ ಶ್ರೀನಾಥ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT