ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಗಿರಿ: 47 ನಾಮಪತ್ರ ಸಲ್ಲಿಕೆ, ಶಕ್ತಿ ಪ್ರದರ್ಶನ

ಪಟ್ಟಣ ಪಂಚಾಯಿತಿಯ 17 ಸ್ಥಾನಗಳಿಗೆ ಡಿ.27ರಂದು ಚುನಾವಣೆ
Last Updated 16 ಡಿಸೆಂಬರ್ 2021, 4:41 IST
ಅಕ್ಷರ ಗಾತ್ರ

ಕನಕಗಿರಿ: ಇಲ್ಲಿನ ಪಟ್ಟಣ ಪಂಚಾಯಿತಿಯ 17 ಸ್ಥಾನಗಳಿಗೆ ಡಿ.27ರಂದು ಚುನಾವಣೆ ನಡೆಯಲಿದ್ದು ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಬುಧವಾರ 47 ನಾಮಪತ್ರಗಳು ಸಲ್ಲಿಕೆಯಾಗಿವೆ.

ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಜಿಲ್ಲಾಡಳಿತ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ನಾಮಪತ್ರ ಸ್ವೀಕರಿಸಲು ಎರಡು ಕೇಂದ್ರ ತೆಗೆದಿದ್ದು 1-10ನೇ ವಾರ್ಡ್ ವರೆಗೆ 18 ನಾಮಪತ್ರ ಹಾಗೂ 11-17 ವಾರ್ಡ್ ವರೆಗೆ 43 ನಾಮಪತ್ರ ಇಲ್ಲಿವರೆಗೆ ಒಟ್ಟು 62 ನಾಮಪತ್ರ ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿಗಳಾದ ಮಹಾಂತಗೌಡ, ವೆಂಕಟೇಶ ಮುಕ್ಕುಂಪಿ ತಿಳಿಸಿದರು.

ವಿವಿಧ ವಾರ್ಡ್‌ಗಳ ಅಭ್ಯರ್ಥಿಗಳು ವಿವಿಧ ದೇವಸ್ಥಾನ, ದರ್ಗಾಗಳಿಗೆ ಭೇಟಿ ನೀಡಿ ದರ್ಶನ ಪಡೆದುಕೊಂಡು ನಾಮಪತ್ರ ಸಲ್ಲಿಸಿದರು. ಆಯಾ ಪಕ್ಷದ ಧ್ವಜಗಳನ್ನು ಹಿಡಿದುಕೊಂಡು ನಾಮಪತ್ರ ಸಲ್ಲಿಕೆ ಸ್ವೀಕರಿಸುವ ಕೇಂದ್ರಕ್ಕೆ ಬಂದ ಕಾರ್ಯಕರ್ತರು, ಬೆಂಬಲಿಗರು ಕೇಂದ್ರದ ಮುಂದೆ ಪಟಾಕಿ ಸಿಡಿಸಿದರು.
17 ವಾರ್ಡ್‌ಗಳ ವಿವಿಧ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ಒಂದೇ ಸಲ ನಾಮಪತ್ರ ಸಲ್ಲಿಸಲು ಪಟ್ಟಣ ಪಂಚಾಯಿತಿ ಕಚೇರಿಗೆ ಬಂದ ಪರಿಣಾಮ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡಿದರು.

ಹಿಂದುಳಿದ ವರ್ಗ ಬಿ ಮೀಸಲಾತಿ ಬಂದಿರುವ 7ನೇ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಬಯಸಿದ್ದ ಪಟ್ಟಣ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಂಜುನಾಥ ಗಡಾದ ಅವರಿಗೆ ಪಕ್ಷದ ಟಿಕೆಟ್ ನೀಡದ ಕಾರಣ ಅವರು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.

‘ಕಳೆದ 14 ವರ್ಷದಿಂದ ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ ಅವರೊಂದಿಗೆ ಗುರುತಿಸಿಕೊಂಡಿದ್ದೆ. ತಂಗಡಗಿ ಹಾಗೂ ಪಕ್ಷಕ್ಕೆ ನಿಷ್ಠೆ ಹೊಂದಿದ್ದರೂ ಟಿಕೆಟ್ ನೀಡದ ಕಾರಣ ಬಂಡಾಯ ಅಭ್ಯರ್ಥಿಯಾಗಿರುವೆ ಯಾವುದೇ ಕಾರಣಕ್ಕೂ ನಾಮಪತ್ರ ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ’ ಎಂದು ಗಡಾದ ಪ್ರತಿಕ್ರಿಯೆ ನೀಡಿದರು.

ಕಳೆದ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ 14 ನೇ ವಾರ್ಡ್ ನಿಂದ ಬಿಜೆಪಿಯಿಂದ ಸ್ಪರ್ಧಿಸಿ 26 ಮತಗಳ ಅಂತರದಿಂದ ಸೋಲುಂಡಿದ್ದ ಹನುಮೇಶ ವಾಲೇಕಾರ್ ಅವರ ತಾಯಿ ಅಂಜನಮ್ಮ ಅವರಿಗೆ ಈ ಸಲ ಬಿಜೆಪಿ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾಗಿರುವ 14ನೆ ವಾರ್ಡ್ ನಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಅಂಜನಮ್ಮ ಅವರು ತಮ್ಮ ಬೆಂಬಲಿಗರ ಮೂಲಕ ನಾಮಪತ್ರ ಸಲ್ಲಿಸಿದರು.

‘ಕಳೆದ ಚುನಾವಣೆಯಲ್ಲಿ ವಾರ್ಡ್ ನಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ಅಭ್ಯರ್ಥಿಗಳು ಸಿಕ್ಕಿರಲಿಲ್ಲ. ಹೊಲ ಮಾರಾಟ ಮಾಡಿದ ಹಣದಲ್ಲಿ ಚುನಾವಣೆ ಎದುರಿಸಿ ಅಲ್ಪ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದೆ. ಈ ಸಲ ತಮ್ಮ ತಾಯಿಗೆ ಪಕ್ಷದ ಟಿಕೆಟ್ ನೀಡುವ ಕುರಿತು ಶಾಸಕ ಬಸವರಾಜ ದಢೇಸೂಗುರು ಅವರು ಭರವಸೆ ನೀಡಿ ಕೈ ಕೊಟ್ಟಿದ್ದಾರೆ’ ಎಂದು ಹನುಮೇಶ ವಾಲೇಕಾರ ಕಣ್ಣೀರು ಹಾಕಿದರು.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿ ಕೆಲಸಗಾರ ಎಂದು ಕರೆಸಿಕೊಂಡಿದ್ದ ಸೈಯದ ಮಹ್ಮದ ಪಾಷ ಮುಲ್ಲಾರ ಅವರು ತಮ್ಮ ಪತ್ನಿಗೆ ಟಿಕೆಟ್ ನೀಡದ ಕಾರಣ ಮಂಗಳವಾರ ರಾತ್ರಿ ಬಿಜೆಪಿಗೆ ಸೇರ್ಪಡೆಯಾಗಿ ಪತ್ನಿ ಶಾಯಿದಾಬೇಗ್ಂ ಅವರನ್ನು ಕಣದಲ್ಲಿರುವಂತೆ ನೋಡಿಕೊಂಡಿದ್ದಾರೆ.

ನಾಲ್ಕನೇಯ ವಾರ್ಡ್ ಗೆ ಹಿಂದುಳಿದ ವರ್ಗ ಅ ಮೀಸಲಾತಿ ಬಂದಿದ್ದು ಬಿಜೆಪಿ ಬೆಂಬಲಿತ ಎಪಿಎಂಸಿ ನಿರ್ದೇಶಕ ದೇವಪ್ಪ ತೋಳದ ಅವರ ಸಹೋದರನ ಪುತ್ರ ಲಿಂಗರಾಜ ತೋಳದ ಅವರು ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ಅಪಾರ ಬೆಂಬಲಿಗರೊಂದಿಗೆ ನಾಮ ಪತ್ರ ಸಲ್ಲಿಸಿ ಗಮನ ಸೆಳೆದರು.

ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT