ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗೆ ಈಗಿನಿಂದಲೇ ಪಕ್ಷ ಸಂಘಟನೆ: ಶಿವರಾಜ ತಂಗಡಗಿ

ಸಚಿವರಾದ ಬಳಿಕ ಮೊದಲ ಬಾರಿಗೆ ಕೊಪ್ಪಳಕ್ಕೆ ಭೇಟಿ, ಕಾರ್ಯಕರ್ತರಿಂದ ಅಭಿನಂದನಾ ಕಾರ್ಯಕ್ರಮ
Published 5 ಜೂನ್ 2023, 13:18 IST
Last Updated 5 ಜೂನ್ 2023, 13:18 IST
ಅಕ್ಷರ ಗಾತ್ರ

ಕೊಪ್ಪಳ: ‘ಒಂದು ಚುನಾವಣೆಯಲ್ಲಿ ಗೆದ್ದಾಕ್ಷಣ ವಿರಮಿಸುವುದಿಲ್ಲ. ಮುಂಬರುವ ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಮತ್ತಷ್ಟು ಬಲಿಷ್ಠಗೊಳಿಸಲು ಪಕ್ಷ ಸಂಘಟನೆ ಮಾಡಲಾಗುವುದು’ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷರೂ ಆದ ಹಿಂದುಳಿದ ವರ್ಗಗಳ ಖಾತೆ ಸಚಿವ ಶಿವರಾಜ ತಂಗಡಗಿ ಹೇಳಿದರು.

ಇಲ್ಲಿ ಸೋಮವಾರ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಅರ್ಪಿಸಲು ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು ‘ಮುಂಬರುವ ದಿನಗಳಲ್ಲಿ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಲು ಕಾರ್ಯಕ್ರಮ ನಡೆಸಲಾಗುವುದು. ಕಾರ್ಯಕಾರಿಣಿ ರೂಪದಲ್ಲಿ ಸಭೆ ನಡೆಸಿ ಗೋಷ್ಠಿಗಳನ್ನು ಆಯೋಜಿಸಿ ಎಲ್ಲ ಪ್ರಮುಖರಿಗೂ ಮಾತನಾಡಲು ಅವಕಾಶ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

‘ಗಂಗಾವತಿ ಮತ್ತು ಕುಷ್ಟಗಿ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸೋಲು ಕಂಡಿದ್ದರೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬಂದಿರುವ ಕಾರಣ ಸೋತವರೂ ಗೆದ್ದಂತೆಯೇ. ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆ ಮಾಡೋಣ. ನಮ್ಮ ಗೆಲುವಿಗೆ ಕಾರ್ಯಕರ್ತರು ಶ್ರಮ ಪಟ್ಟಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅವರ ಗೆಲುವಿಗಾಗಿ ಪಕ್ಷ ಸಂಘಟಿಸುವ ಕೆಲಸ ಮಾಡಬೇಕಾಗಿದೆ’ ಎಂದರು.

ಕೊಪ್ಪಳ ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ ‘ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ನಿರೀಕ್ಷೆಯಿದ್ದರೂ ಮೂರು ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಿಕ್ಕಿದೆ. ಚುನಾವಣಾ ಪೂರ್ವದಲ್ಲಿ ನೀಡಿದ್ದ ಗ್ಯಾರಂಟಿ ಭರವಸೆಗಳನ್ನು ಕಾರ್ಯಕರ್ತರು ಮತದಾರರ ಮನೆಗಳಿಗೆ ತಲುಪಿಸುವಲ್ಲಿ ಯಶಸ್ಸು ಕಂಡಿದ್ದಾರೆ’ ಎಂದರು.

‘ನಮ್ಮ ಪಕ್ಷವೇ ಅಧಿಕಾರದಲ್ಲಿರುವುದರಿಂದ ಸಾಕಷ್ಟು ಅನುದಾನ ತರುವೆ. ನೆನಗುದಿಗೆ ಬಿದ್ದ ಯೋಜನೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವೆ. ಎಲ್ಲರೂ ಸೇರಿ ಜಿಲ್ಲೆಯಲ್ಲಿ ಪ್ರಗತಿಯ ಹಾದಿಯಲ್ಲಿ ತೆಗೆದುಕೊಂಡು ಹೋಗುತ್ತೇವೆ’ ಎಂದು ಭರವಸೆ ನೀಡಿದರು.

ಮಸೀದಿಗೆ ಭೇಟಿ: ಇಲ್ಲಿನ ಜವಾಹರ ರಸ್ತೆಯ ಯುಸೂಫಿಯಾ ಮಸೀದಿಗೆ ಭೇಟಿ ನೀಡಿದಾಗ ಮೌಲಾನಾ ಮುಫ್ತಿ ಮಹ್ಮದ್ ನಜೀರ್ ಅಹ್ಮದ್ ಖಾದ್ರಿ ತಸ್ಕೀನ್‌ ಅವರು ಸಚಿವ ಮತ್ತು ಶಾಸಕರನ್ನು ಸನ್ಮಾನಿಸಿದರು. ಮುಸ್ಲಿಂ ಸಮಾಜದ ಮುಖಂಡರಾದ ಜಾಕೀರ್‌ಹುಸೇನ್, ಅಮ್ಜದ್‌ ಪಟೇಲ, ಖತೀಬ್ ಭಾಷಾಸಾಬ್, ಕೆ.ಎಂ. ಸೈಯದ್‌ ಇದ್ದರು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಜಶೇಖರ್ ಹಿಟ್ನಾಳ , ಎಸ್.ಬಿ.ನಾಗರಳ್ಳಿ, ಜನಾರ್ದನ ಹುಲಿಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಮಾಲತಿ ನಾಯಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಸವರಾಜ ಉಳ್ಳಾಗಡ್ಡಿ, ಶಾಮೀದ್ ಮನಿಯಾರ್, ಕೃಷ್ಣಾರೆಡ್ಡಿ ಗಲಬಿ, ಕಾಟನ್ ಪಾಶಾ, ಶ್ರೀನಿವಾಸ ರೆಡ್ಡಿ, ಶರಣೇಗೌಡ ಪೊಲೀಸ್ ಪಾಟೀಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Highlights - ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಭರವಸೆ ಕೊಪ್ಪಳದಲ್ಲಿ ಡಾ. ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಜವಾಹರ ರಸ್ತೆಯ ಯುಸೂಫಿಯಾ ಮಸೀದಿ ವತಿಯಿಂದ ಗೌರವ ಸಲ್ಲಿಕೆ

Cut-off box - 15 ದಿನಗಳಲ್ಲಿ ಸಾಹಿತಿಗಳ ಸಭೆ: ತಂಗಡಗಿ ಕೊಪ್ಪಳ: ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯಾವ ಕ್ರಮ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಚರ್ಚಿಸಲು ಜಿಲ್ಲೆಯ ಸಾಹಿತಿಗಳು ಮತ್ತು ಪ್ರಮುಖರ ಸಭೆ ನಡೆಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವರೂ ಆದ ತಂಗಡಗಿ ಹೇಳಿದರು. ‘ಸಭೆಯಲ್ಲಿ ವ್ಯಕ್ತವಾಗುವ ಅನಿಸಿಕೆಗಳನ್ನು ಆಲಿಸಿ ಅಭಿವೃದ್ಧಿಗೆ ಬೇಕಾದ ಯೋಜನೆಗಳನ್ನು ರೂಪಿಸಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿರುವ ಸಮಸ್ಯೆಗಳು ಮತ್ತು ಸಿಬ್ಬಂದಿ ಕೊರತೆ ವಿಷಯ ಗಮನಕ್ಕೆ ಬಂದಿದ್ದು ಅವುಗಳನ್ನು ಪರಿಹರಿಸಲಾಗುವುದು’ ಎಂದರು.

Cut-off box - null

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT