ಮಂಗಳವಾರ, ಮಾರ್ಚ್ 28, 2023
31 °C
ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಅಶೋಕ ಅಲ್ಲಾಪುರ ಹೇಳಿಕೆ

ಲಿಂಬೆ ಬೆಳೆಯಲು ಪ್ರೋತ್ಸಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ‘ವಿಜಯಪುರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಬೆಳೆಯುವ ಉತ್ಕೃಷ್ಟ ಗುಣಮಟ್ಟದ ‘ಕಾಗ್ಝಿ’ ತಳಿ ಲಿಂಬೆ ಅತ್ಯಂತ ಮಹತ್ವ ಪಡೆದಿದೆ. ಇದು ದೇಶ ವಿದೇಶಕ್ಕೆ ರಫ್ತಾಗುತ್ತಿದ್ದು, ಇಲ್ಲಿನ ರೈತರು ಬೆಳೆಯುವ ಮೂಲಕ ಲಿಂಬೆ ಕೃಷಿಯಲ್ಲಿ ಸಾಧನೆ ಮಾಡಬೇಕು’ ಎಂದು ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ (ಇಂಡಿ) ಅಧ್ಯಕ್ಷ ಅಶೋಕ.ಎಸ್.ಅಲ್ಲಾಪುರ ಅವರು ತಿಳಿಸಿದರು.

ತಾಲ್ಲೂಕಿನ ಮುನಿರಾಬಾದ್‌ ತೋಟಗಾರಿಕೆ ಕಾಲೇಜಿಗೆ ಭೇಟಿ ನೀಡಿ ವಿಜ್ಞಾನಿಗಳೊಂದಿಗೆ ಮಧ್ಯ ಕರ್ನಾಟಕ ಭಾಗದಲ್ಲಿ ಲಿಂಬೆ ಬೆಳೆ ಪ್ರೋತ್ಸಾಹಿಸುವ ಕುರಿತು ಸುದೀರ್ಘವಾಗಿ ಚರ್ಚಿಸಿದರು.

ಲಿಂಬೆ ಬೆಳೆಯನ್ನು ರಾಜ್ಯದ ಇತರೆ ಭಾಗಗಳಿಗೆ ವಿಸ್ತರಿಸುವ ಕಾರ್ಯಯೋಜನೆಯ ಬಗ್ಗೆ ಚರ್ಚಿಸಿದರು. ಮಹಾವಿದ್ಯಾಲಯ ವ್ಯಾಪ್ತಿಯ ಜಿಲ್ಲೆಗಳಲ್ಲಿ ತೋಟಗಾರಿಕೆ ರೈತರಿಗೆ ಲಿಂಬೆ ಬೆಳೆಯಲು ಉತ್ತೇಜನ ನೀಡುವುದು ಮತ್ತು ತಾಂತ್ರಿಕ ಮಾಹಿತಿಯನ್ನು ಪೂರೈಸುವ ಕುರಿತ ಪ್ರಸ್ತಾವವನ್ನು ಲಿಂಬೆ ಮಂಡಳಿ ಹಾಗೂ ತೋಟಗಾರಿಕೆ ಇಲಾಖೆ ಸಹಭಾಗಿತ್ವದಲ್ಲಿ ಅನುಷ್ಠಾನ ಗೊಳಿಸಲು ಮನವಿ ಮಾಡಿದರು.

ತೋಟಗಾರಿಕೆ ಮಹಾವಿದ್ಯಾ ಲಯದ ವಿದ್ಯಾರ್ಥಿಗಳಿಗೆ ಲಿಂಬೆ ಬೆಳೆಯನ್ನು ಸಂಸ್ಕರಿಸುವ, ಕೈಗಾರಿಕೆ ಸ್ಥಾಪಿಸಲು ಉತ್ತೇಜನ ನೀಡುವ ಪ್ರಾಮುಖ್ಯತೆ ಬಗ್ಗೆ ತಿಳಿಸಿದ ಅವರು,‘ರಾಜ್ಯದಲ್ಲಿ ಪ್ರತಿ ದಿನ ಸುಮಾರು 200 ರಿಂದ 400 ಟನ್ ತಾಜಾ ಲಿಂಬೆ ಹಣ್ಣಿನ ಉತ್ಪಾದನೆ ಆಗುತ್ತಿದೆ. ಮಾರುಕಟ್ಟೆ ಕೊರತೆಯಿಂದ ರೈತರಿಗೆ ನಿರೀಕ್ಷಿತ ಆದಾಯ ದೊರೆಯುತ್ತಿಲ್ಲ. ಈ ದಿಸೆಯಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸಂಸ್ಕರಣಾ ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಕೈಗಾರೀಕರಣಕ್ಕೆ ಉತ್ತೇಜನ ನೀಡುವ ಸಲುವಾಗಿ ಕಾರ್ಯೋನ್ಮುಖವಾಗಬೇಕು’ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಕಾಲೇಜಿನ ವ್ಯಾಪ್ತಿಯಲ್ಲಿ ಲಿಂಬೆ ಬೆಳೆಗಾರರ ಜತೆಯಲ್ಲಿ ವಿಚಾರ ಸಂಕಿರಣ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.  ಕಾಲೇಜಿನ ಡೀನ್ ಡಾ.ಪಿ.ಎಂ.ಗಂಗಾಧರಪ್ಪ ಮಾತನಾಡಿ, ಮಂಡಳಿಯ ಜೊತೆ ಕೈಗೂಡಿಸಿ, ಕಾಲೇಜಿನ ಕಾರ್ಯವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಲ್ಲಿ ಲಿಂಬೆ ಬೆಳೆ ಉತ್ತೇಜಿಸುವಲ್ಲಿ ಕಾರ್ಯ ಪ್ರವೃತ್ತರಾಗುವ ಕುರಿತು ಭರವಸೆ ನೀಡಿದರು. ಈ ಸಂದರ್ಭ ತೋಟಗಾರಿಕೆ ಕಾಲೇಜಿನ ಪ್ರಾಧ್ಯಾಪಕರು, ವಿಜ್ಞಾನಿಗಳು ಹಾಗೂ ಸಿಬ್ಬಂದಿ ಸೇರಿದಂತೆ ಹಲವರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.