ಸೋಮವಾರ, ನವೆಂಬರ್ 18, 2019
27 °C
ಕುಷ್ಟಗಿ: ಚೆಕ್‌ಡ್ಯಾಂ ನಿರ್ಮಾಣದಲ್ಲಿ ಕರ್ತವ್ಯಲೋಪ

ಎಂಜಿನಿಯರ್‌ ಅಮಾನತು ಆದೇಶ

Published:
Updated:

ಕುಷ್ಟಗಿ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ನರೇಗಾ ಯೋಜನೆಯಲ್ಲಿ ಕೈಗೊಳ್ಳಲಾಗಿದ್ದ ಬಹುಕಮಾನು (ಮಲ್ಟಿ ಆರ್ಚ್) ಚೆಕ್‌ ಡ್ಯಾಂ ನಿರ್ಮಾಣ ಹಗರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದ ಆಧಾರದ ಮೇಲೆ ಕಿರಿಯ ಎಂಜಿನಿಯರ್‌ ಅಬ್ದುಲ್‌ ರಹೀಂ ಎಂಬುವವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.

ಜಿಲ್ಲಾ ಪಂಚಾಯಿತಿ ಸಿಇಒ ರಘುನಂದನಮೂರ್ತಿ ಈ ಕುರಿತು ಅ.15 ರಂದು ಆದೇಶ ಹೊರಡಿಸಿದ್ದಾರೆ. ಇಲ್ಲಿಯ ತಾಲ್ಲೂಕು ಪಂಚಾಯಿತಿ ಕಿರಿಯ ಎಂಜಿನಿಯರ್‌ ಆಗಿರುವ ಅಬ್ದುಲ್‌ ರೆಹಮಾನ ಸದ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದಲ್ಲಿ ಎರವಲು ಸೇವೆಯಲ್ಲಿದ್ದರು.

ಚೆಕ್‌ಡ್ಯಾಂಗಳ ನಿರ್ಮಾಣದ ಹೆಸರಿನಲ್ಲಿ ಅವ್ಯವಹಾರ ನಡೆದಿರುವ ವಿಷಯ ಕುರಿತಂತೆ ಸೆ.16ರ 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ವರದಿಯ ಅನ್ವಯ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬೆಂಗಳೂರು ಮೂಲದ ಸೆಪಿಯನ್ ಕನ್ಸಲ್ಟಂಟ್‌ ಎಂಜಿನಿಯರ್‌ ಸಂಸ್ಥೆಗೆ ನೀಡಿದ ಆದೇಶದಲ್ಲಿ ಸಿಇಒ ಸ್ಪಷ್ಟಪಡಿಸಿದ್ದರು.

ಸಂಸ್ಥೆ ನೀಡಿದ ತನಿಖಾ ವರದಿಯ ಆಧಾರದ ಮೇಲೆ ಎಂಜಿನಿಯರ್‌ಗೆ ಕಾರಣ ಕೇಳಿ ನೋಟಿಸ್‌ ನೀಡಲಾಗಿತ್ತು. ಆದರೆ, ಎಂಜಿನಿಯರ್‌ ನೋಟಿಸ್‌ಗೆ ಉತ್ತರ ನೀಡಿಲ್ಲ. ಕರ್ತವ್ಯ ಲೋಪ ಹಾಗೂ ಅವರಿಂದ ಸರ್ಕಾರಕ್ಕೆ ಆಗಿರುವ ಆರ್ಥಿಕ ನಷ್ಟದ ಕಾರಣಕ್ಕೆ ಎಂಜಿನಿಯರ್‌ ವಿರುದ್ಧ ಇಲಾಖೆ ಮಟ್ಟದಲ್ಲಿ ವಿಚಾರಣೆ ಜರುಗಿಸಬೇಕಿರುವುದು ಅವಶ್ಯವಾಗಿರುವುದರಿಂದ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ಅಮಾನತು ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಪ್ರತಿಕ್ರಿಯಿಸಿ (+)