ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಚರಣೆಗೆ ಸೀಮಿತವಾದ ಪರಿಸರ ಸಂರಕ್ಷಣೆ ಕಾಳಜಿ

ಜಿಲ್ಲೆಯ ಹೆದ್ದಾರಿಗಳಲ್ಲಿ ನೋಡಲೂ ಸಿಗದ ಗಿಡಗಳು: ನಿರೀಕ್ಷೆಯಷ್ಟು ಯಶಸ್ಸು ಸಾಧಿಸದ ವೃಕ್ಷ ಲಕ್ಷ ಆಂದೋಲನ
Last Updated 28 ಜೂನ್ 2021, 4:38 IST
ಅಕ್ಷರ ಗಾತ್ರ

ಕೊಪ್ಪಳ: ಹಿಂದುಳಿದ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪರಿಸರ ಅವಶ್ಯಕ. ಆದರೆ ಮಳೆಗಾಲದಲ್ಲಿ ಅರಣ್ಯ ಇಲಾಖೆ ಸಸಿ ನೆಟ್ಟು ಚಿತ್ರ ತೆಗೆಸಿಕೊಂಡರೆ ಮುಗಿಯಿತು. ನೆಟ್ಟ ಮರಗಳು ಏನಾದವೋ ಎಂಬ ಬಗ್ಗೆ ಚಿಂತೆ ಮಾಡದ ಪರಿಣಾಮ ಹಸರೀಕರಣ ಯೋಜನೆ ನೆಪಕ್ಕೆ ಮಾತ್ರ ಎಂಬಂತೆ ಆಗಿದೆ.

ಜಿಲ್ಲೆಯಲ್ಲಿ ಗವಿಮಠ ಬಿಟ್ಟರೆ ಪರಿಸರ ಸಂಬಂಧಿ ಸಂಘಟನೆಗಳು ಕಡಿಮೆ. ವಿಶ್ವ ಪರಿಸರ ದಿನದಂದು ಪರಿಸರ ಸಂರಕ್ಷಣೆಗೆ ಪೂರಕವಾಗಿ ಹೆಚ್ಚಿನ ಕಾರ್ಯಕ್ರಮಗಳು ಜರುಗುತ್ತವೆ. ಆದರೆ, ಹಸಿರು ಜಿಲ್ಲೆಯ ಕನಸು ನನಸಾಗದೇ ಯಥಾಸ್ಥಿತಿ ಉಳಿದಿದೆ. ಇದರಲ್ಲಿ ಅರಣ್ಯ ಇಲಾಖೆಯ ಪಾಲು ದೊಡ್ಡದಿದೆ.

ಜಿಲ್ಲೆಯಲ್ಲಿ ಗಿಡ, ಮರ ಬೆಳೆಸಲು ಹೇಳಿ ಮಾಡಿಸಿದ ವಾತಾವರಣ ಇದೆ. ಆದರೂ ಸಸಿ ನೆಟ್ಟು ಪೋಷಿಸುವವರಿಲ್ಲದ ಕಾರಣ ಬರಗಾಲದ ಜಿಲ್ಲೆ ಎಂಬ ಹಣೆಪಟ್ಟಿ ಅಂಟಿಸಿಕೊಂಡಿದೆ.

ಹಸರೀಕಣಕ್ಕೆ ಅವಕಾಶ: ಜಿಲ್ಲೆಯಲ್ಲಿ ಅರಣ್ಯ, ಕಂದಾಯ ಇಲಾಖೆಗೆ ಸೇರಿದ ಸಾವಿರಾರು ಎಕರೆ ಗುಡ್ಡ, ಕುರುಚಲು ಕಾಡು, ರಸ್ತೆ ಬದಿ, ಗೋಮಾಳ ಸೇರಿದಂತೆ ಹೇರಳ ಅವಕಾಶವಿದೆ. ಆದರೆ ನಿರೀಕ್ಷೆಯಷ್ಟು ಗಿಡ, ಮರ ನೆಡುವ ಕಾರ್ಯ ಸಾಕಾರಗೊಳ್ಳುತ್ತಿಲ್ಲ. ಕಾಯ್ದಿಟ್ಟ ಮತ್ತು ಮೀಸಲು ಅರಣ್ಯಗಳಲ್ಲಿ ಮುಳ್ಳಿನ ಗಿಡಕ್ಕೆ ಹೆಚ್ಚು ಪ್ರಾಶಸ್ತ್ಯ. ಅವುಗಳನ್ನು ನೆಡದೇ ಹೋದರು, ಬೀಜ ಉದರಿ ತಾವೇ ವೃಕ್ಷವಾಗಿ ಎಲ್ಲೆಂದರಲ್ಲಿ ಹರಡಿಕೊಂಡಿವೆ.

ಹಣ್ಣಿನ, ಔಷಧೀಯ, ಬಹುಬಾಳಿಕೆಯ, ನೆರಳು ನೀಡುವ ಹೆಚ್ಚಿನ ಮರ ನೆಡುವ ಕಾರ್ಯ ನಿರೀಕ್ಷೆಯಂತೆ ನಡೆದಿಲ್ಲ. ವೃಕ್ಷ ಲಕ್ಷ ಆಂದೋಲನ ಕಳೆದ ನಾಲ್ಕು ವರ್ಷದಿಂದ ಜಾರಿಯಲ್ಲಿದ್ದರೂ ಶೇ 20 ರಷ್ಟು ಮರಗಳನ್ನೂ ಬೆಳೆಸಲು ಆಗುತ್ತಿಲ್ಲ. ಜಿಲ್ಲೆಯಲ್ಲಿ ಮೂರು ರಾಜ್ಯ ಹೆದ್ದಾರಿಗಳು ನೂರಾರು ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿದ್ದು, ಒಂದೇ ಒಂದು ಸಸಿ ನೆಡುವ ಕಾರ್ಯವಾಗುತ್ತಿಲ್ಲ.

ಗ್ರಾಮೀಣ ಭಾಗದ ರಸ್ತೆಯುದ್ದಕ್ಕೂ ಅಲ್ಲಲ್ಲಿ ಸಸಿಗಳನ್ನು ನೆಡಲಾಗಿದ್ದರೂ ಶೇ 40 ರಷ್ಟು ಪೋಷಣೆಯಿಲ್ಲದೆ ಒಣಗಿ ಹೋಗಿವೆ ಅಲ್ಲದೇ, ಶೇ 50ರಷ್ಟು ಮರಗಳನ್ನು ಮೇಕೆ, ಕುರಿ, ಜಾನುವಾರುಗಳು ತಿಂದು ಮುಗಿಸಿವೆ. ಸೌದೆಗಾಗಿ ಮರಗಳನ್ನು ಕಡಿಯುವ ಕೆಲಸ ಬಹುತೇಕ ನಿಂತು ಹೋಗಿದ್ದು, ಅನಿವಾರ್ಯವಾಗಿ ಕೆಲವು ದೊಡ್ಡ ಮರಗಳನ್ನು ಅರಣ್ಯ ಇಲಾಖೆ ಕಣ್ಣು ತಪ್ಪಿಸಿ ಕಡಿದ ಘಟನೆಗಳು ವರದಿಯಾಗಿವೆ.

ಗವಿಮಠ: ಕೆರೆ, ಹಳ್ಳಗಳಿಗೆ ಪುನಶ್ಚೇತನ ನೀಡಿ ದಂಡೆಗಳಲ್ಲಿ ಸಸಿ ನೆಡುವ ಕಾರ್ಯ ಗವಿಮಠದಿಂದ ಸಮರೋಪಾದಿಯಲ್ಲಿ ನಡೆದಿದೆ. ಅಲ್ಲದೆ ಸ್ವತಃ ಮಠದಲ್ಲಿ ನರ್ಸರಿಯೊಂದನ್ನು ಆರಂಭಿಸಲಾಗಿದ್ದು, ಮಠದ ಅಧೀನದಲ್ಲಿರುವ ಜಮೀನುಗಳಲ್ಲಿ ಹಣ್ಣಿನ ಮತ್ತು ತರೇವಾರಿ ಮರಗಳನ್ನು ಬೃಹತ್ ಪ್ರಮಾಣದಲ್ಲಿ ಬೆಳೆಸಿ ಮಾದರಿ ಕಾರ್ಯ ಮಾಡಿದೆ.

ಪ್ರತಿ ವರ್ಷ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಕೃಷಿ, ತೋಟಗಾರಿಕೆ ಇಲಾಖೆಗಳು ಸಸಿ ಮೇಳವನ್ನು ಆಯೋಜಿಸುತ್ತವೆ. ಧರ್ಮ ಜಾಗೃತಿಯ ಜತೆಗೆ ಪರಿಸರದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆ ನೀಡಿದೆ. ಗಿಣಗೇರಾ ಕೆರೆಯ ಸುತ್ತಲೂ ಸಾವಿರಾರು ಸಸಿ ನೆಡಲು ಈಗಾಗಲೇ ತಯಾರಿ ಮಾಡಲಾಗಿದೆ. ಹಿರೇಹಳ್ಳದ 23 ಕಿ.ಮೀ ವ್ಯಾಪ್ತಿಯಲ್ಲಿ ಮರ ಬೆಳೆಸುವ ಮಹತ್ವಾಕಾಂಕ್ಷೆ ಹೊಂದಲಾಗಿದ್ದು, ಇನ್ನೇನು ಆರಂಭವಾಗಬೇಕಿದೆ.

ಸಾಮಾಜಿಕ ಅರಣ್ಯ ಇಲಾಖೆಯಿಂದ ಜಿಲ್ಲೆಯನ್ನು ಹಸರೀಕರಣ ಮಾಡಲು ಸಾಕಷ್ಟು ಅವಕಾಶವಿದ್ದರೂ ಅದು ಅಂದುಕೊಂಡಂತೆ ಆಗುತ್ತಿಲ್ಲ ಎಂಬುವುದೇ ವಿಪರ್ಯಾಸ. ಕೆಲವು ಅರಣ್ಯ ಅಧಿಕಾರಿಗಳ ಪರಿಸರ ಪ್ರೇಮದಿಂದ ಯಲಬುರ್ಗಾ, ಕನಕಗಿರಿಯ ಗ್ರಾಮೀಣ ಭಾಗದ ರಸ್ತೆಗಳು ಹಸಿರು ಹೊದ್ದುಕೊಂಡಿವೆ. ಆ ಪರಿಸರ ಕಂಡರೆ ಸಂತಸವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT