ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ಅಗತ್ಯ ವಸ್ತುಗಳ ದರ ಮತ್ತೆ ಏರಿಕೆ

ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿ ಆರೋಪ: ದಿನಸಿ ಧಾರಣೆ ನಿಗದಿಗೆ ಒತ್ತಾಯ
Last Updated 31 ಮೇ 2021, 2:14 IST
ಅಕ್ಷರ ಗಾತ್ರ

ಕೊಪ್ಪಳ: ಕೊರೊನಾ ಎರಡನೇ ಅಲೆ ವೇಗವಾಗಿ ವ್ಯಾಪಿಸುತ್ತಿರುವ ಕಾರಣಕ್ಕೆ ಸರ್ಕಾರದ ಜೊತೆಗೆ ಜಿಲ್ಲಾಡಳಿತ ಲಾಕ್‌ಡೌನ್‌ ಹೇರಿದ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗುತ್ತಿರುವುದು ಜನರನ್ನು ಕೆಂಗೆಡಿಸಿದೆ.

ಸರ್ಕಾರದ ಮಾರ್ಗಸೂಚಿ ಅನ್ವಯ ಬೆಳಿಗ್ಗೆ 6 ರಿಂದ 10ರವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಜಿಲ್ಲಾಡಳಿತ 12 ದಿನಗಳ ಕಠಿಣ ಲಾಕ್‌ಡೌನ್‌ ವಿಸ್ತರಣೆ ಮಾಡಿ ಔಷಧಿ, ಹಾಲು ಮಾರಾಟಕ್ಕೆ ಮಾತ್ರ ಅವಕಾಶ ನೀಡಿ ವಾಣಿಜ್ಯ ವಹಿವಾಟುಗಳನ್ನು ಸಂಪೂರ್ಣ ಬಂದ್‌ ಮಾಡಿ ನಿರ್ಬಂಧ ವಿಧಿಸಿದೆ.

ಇದನ್ನೇ ನೆಪ ಮಾಡಿಕೊಂಡ ಕೆಲ ವ್ಯಾಪಾರಿಗಳುಅಗತ್ಯ ವಸ್ತುಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದು, ಜನ ಸಾಮಾನ್ಯರು ಸಂಕಷ್ಟ ಎದುರಿಸುವಂತಾಗಿದೆ.ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟಲು ಸರ್ಕಾರಜೂನ್‌ 7ರವರೆಗೆ ಲಾಕ್‌ಡೌನ್ವಿಧಿಸಿದೆ. ಇದರ ಜೊತೆಗೆ ಮೇ 31ಕ್ಕೆ ಮುಗಿಯಬೇಕಿದ್ದ ಸಂಪೂರ್ಣ ಲಾಕ್‌ಡೌನ್‌ಅನ್ನು ಜೂನ್‌ 7ರವರೆಗೆ ಮುಂದೂಡಿ ಭಾನುವಾರ ಆದೇಶ ಹೊರಡಿಸಿದೆ. ಇದರಿಂದ ಅಗತ್ಯ ವಸ್ತುಗಳ ಸರಬರಾಜಿನಲ್ಲಿ ಸ್ವಲ್ಪ ವ್ಯತ್ಯಯವಾಗಿರುವುದರ ಜತಗೆ ಕೃತಕ ಅಭಾವ ಸೃಷ್ಟಿ ಆಗುತ್ತಿರುವುದು ವಾಸ್ತವವಾಗಿದೆ.

ಜಿಲ್ಲೆಯಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿಯೂ ಗರಿಷ್ಠ ಮಾರಾಟ ದರಕ್ಕಿಂತ (ಎಂ.ಆರ್.ಪಿ) ಶೇ 10-20 ರಷ್ಟು ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿರುವುದನ್ನು ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗಿ ಪರಿಣಮಿಸಿದೆ. ಅಲ್ಲದೆ ನಿತ್ಯ ವಾಗ್ವಾದಕ್ಕೆ ಕಾರಣವಾಗುತ್ತಿದೆ. ತಂಬಾಕು, ಸಿಗರೇಟ್‌ ಉತ್ಪನ್ನಗಳನ್ನು ಮೂರು ಪಟ್ಟು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ.

‘ಸ್ಥಳೀಯಆಡಳಿತ ವರ್ತಕರ ಸಭೆ ನಡೆಸಿ ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಸಲುವಾಗಿ ಹಲವು ಅಂಗಡಿಗಳಿಗೆ ಪರವಾನಗಿ ನೀಡಬೇಕು. ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವವರಿಗೆ ಎಚ್ಚರಿಕೆ ನೀಡಬೇಕು. ಪ್ರತಿ ವಾರ್ಡ್‌ಗೆ ವ್ಯಾಪಾರಸ್ಥರು ವಾಹನಗಳ ಮೂಲಕ ಪೂರೈಸಬೇಕು. ಇದಕ್ಕೆ ಅಗತ್ಯ ದರ ನಿಗದಿ ಮಾಡಬೇಕು’ ಎಂದು ಜನರು ಒತ್ತಾಯಿಸಿದರೂ ಜಿಲ್ಲಾಡಳಿತದಿಂದ ಪ್ರತಿಕ್ರಿಯೆ ಬಂದಿಲ್ಲ.

‘ಪಟ್ಟಣದ ದಿನಸಿಅಂಗಡಿಯಲ್ಲಿ ಪ್ರತಿ ತಿಂಗಳು ಕಿರಾಣಿ ವಸ್ತುಗಳನ್ನು ಖರೀದಿಸಲಾಗುತ್ತಿತ್ತು. ಎರಡು ದಿನಗಳ ಹಿಂದೆ ಅದೇ ಸಾಮಗ್ರಿಗಳನ್ನು ಖರೀದಿಸಿದರೆ ಬೆಲೆ ಹೆಚ್ಚಾಗಿತ್ತು. ಈ ಬಗ್ಗೆ ಕೇಳಿದರೆ ನಮಗೆ ಕಳುಹಿಸುವವರು ಬೆಲೆ ಹೆಚ್ಚು ಮಾಡಿದ್ದಾರೆ ಎಂದು ಸಬೂಬು ಹೇಳುತ್ತಾರೆ’ ಎಂದು ಗ್ರಾಹಕ ಪ್ರಕಾಶ ಹುಲಿಗೆ ಅಲವತ್ತುಕೊಂಡರು.

‘ಈ ಮೊದಲು ನಾವು ಪ್ರತಿ ದಿನ ದುಡಿಯಲೂ ಹೋಗುತ್ತಿದ್ದು, ವರಮಾನ ಬರುತ್ತಿತ್ತು. ಈಗ ಕೈ ಖಾಲಿಯಾಗಿವೆ. ದಿನಸಿ ಖರೀದಿಸಬೇಕು ಎಂದರೆ ತೆರೆದ ಎರಡು ಅಂಗಡಿಗಳಲ್ಲಿ ಅವರು ಹೇಳಿದ ದರಕ್ಕೆ ಖರೀದಿಸುವುದು ಅನಿವಾರ್ಯವಾಗಿದೆ. ಉಪ್ಪು, ಎಣ್ಣೆ, ಚಹಾಪುಡಿ, ಸಕ್ಕರೆ, ಬೇಳೆ, ಬೆಲ್ಲ ಎಲ್ಲದರ ದರ ಏರಿಕೆಯಾಗಿದೆ’ ಎಂದು ಬಹದ್ದೂರು ಬಂಡಿಯ ಶಂಕ್ರಮ್ಮ ಹೇಳುತ್ತಾರೆ.

‘ಮಾರುಕಟ್ಟೆಯಲ್ಲಿಯೇ ಹೋಲ್‌ಸೇಲ್‌ ವ್ಯಾಪಾರಸ್ಥರು ಒಂದು ರೂಪಾಯಿ ದರ ಹೆಚ್ಚಳ ಮಾಡಿದರೆ, ರಿಟೇಲ್‌ ವ್ಯಾಪಾರಸ್ಥರಾದ ನಾವು ಕೂಡಾಎರಡು ರೂಪಾಯಿ ಹೆಚ್ಚಳ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ನಮಗೆ ಲಾಭವೇ ಆಗುವುದಿಲ್ಲ. ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಬೆಲೆ ಏರುತ್ತಲೇ ಇದೆ. ಬಡಾವಣೆಗಳಲ್ಲಿ ನಾವು ಜನರಿಗೆ ಉತ್ತರ ನೀಡುವುದೇ ಕಷ್ಟವಾಗುತ್ತಿದೆ’ ಎಂದು ಸಣ್ಣ ಕಿರಾಣಿ ಅಂಗಡಿ ನಡೆಸುವ ಕೋಟೆ ಪ್ರದೇಶದ ಮಂಜುನಾಥ ಹೇಳುತ್ತಾರೆ.

ಕೊರೊನಾ ರೋಗ ತಡೆಗೆ ಸರ್ಕಾರ ಲಾಕ್‌ಡೌನ್‌ ಹೇರಿದೆ. ಆದರೆ ಅಗತ್ಯ ವಸ್ತುಗಳ ದರ ಏರಿಕೆ ಆಗದಂತೆ ಕ್ರಮ ಕೈಗೊಳ್ಳಬೇಕು. ಇದಕ್ಕೆ ದರ ನಿಗದಿ ಮಾಡಬೇಕಾದ ಅವಶ್ಯಕತೆ ಇದೆ. ಅಲ್ಲದೆ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದು ಕಂಡು ಬಂದರೆ ಅವರಿಗೆ ದಂಡವನ್ನು ವಿಧಿಸುವ ಮೂಲಕ ಜನಸಾಮಾನ್ಯರಿಗೆ ಆಗುತ್ತಿರುವ ಕಷ್ಟವನ್ನು ತಪ್ಪಿಸಬಹುದು ಎಂಬುದು ಜಿಲ್ಲೆಯ ಬಹುತೇಕರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT