ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಮಾವು ಮಾಗಿಸಲು ‘ಇಥಲೀನ್’ ಮೊರೆ

ವಿದೇಶ ತಲುಪಿದ ‘ಕೊಪ್ಪಳ ಕೇಸರ್‌’
Published 9 ಮೇ 2023, 13:58 IST
Last Updated 9 ಮೇ 2023, 13:58 IST
ಅಕ್ಷರ ಗಾತ್ರ

ಪ್ರಮೋದ

ಕೊಪ್ಪಳ: ಮಾವಿನ ಹಣ್ಣುಗಳ ಮೂಲಸತ್ವ ಹಾಗೂ ರುಚಿ ಉಳಿಸಿಕೊಂಡು ನೈಸರ್ಗಿಕವಾಗಿ ಮಾಗಿಸಲು ಜಿಲ್ಲೆಯ ರೈತರು ‘ಇಥಲೀನ್’ ಮಾದರಿಯ ಮೊರೆ ಹೋಗಿದ್ದಾರೆ. ಇದರಿಂದ ಇಲ್ಲಿಯ ಮಾವಿಗೆ ವಿದೇಶಗಳಲ್ಲಿಯೂ ಬೇಡಿಕೆ ವ್ಯಕ್ತವಾಗುತ್ತಿದೆ.

ಚೆನ್ನಾಗಿ ಬಲಿತ ಮಾವಿನ ಕಾಯಿಗಳು ಹಣ್ಣಾಗಲು 15 ರಿಂದ 20 ದಿನ ಬೇಕು. ಆದ್ದರಿಂದ ಹಲವು ವ್ಯಾಪಾರಿಗಳು ‘ಕ್ಯಾಲ್ಸಿಯಂ ಕಾರ್ಬೈಡ್‌’ ಬಳಸಿ ಕೃತಕವಾಗಿ ಎರಡೇ ದಿನಗಳಲ್ಲಿ ಹಣ್ಣುಗಳಿಗೆ ಬಂಗಾರದ ಬಣ್ಣ ಬರುವಂತೆ ಮಾಡುವುದು ಈಗ ಗುಟ್ಟಾಗಿ ಉಳಿದಿಲ್ಲ. ಆಹಾರ ಕಲಬೆರಕೆ ಕಾಯ್ದೆ ಪ್ರಕಾರ, ‌‘ಕ್ಯಾಲ್ಸಿಯಂ ಕಾರ್ಬೈಡ್‌’ ಬಳಕೆ ಅಪರಾಧವಾಗಿದೆ. ಇದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕಾರಣ  ಜಿಲ್ಲೆಯ ರೈತರು ಸುರಕ್ಷಿತ ಮತ್ತು ವೈಜ್ಞಾನಿಕ ವಿಧಾನವಾದ ‘ಇಥಲೀನ್’ ಬಳಸುತ್ತಿದ್ದಾರೆ. ‘ಇಥಲೀನ್’ ಹಾರ್ಮೋನ್ ಆಗಿದ್ದು, ದ್ರವ ಹಾಗೂ ಅನಿಲ ರೂಪದಲ್ಲಿ ಲಭ್ಯವಾಗುತ್ತಿದೆ.

ಇದರ ಬಳಕೆಯಿಂದ ಮಾವಿನ ಕಾಯಿಗಳು ಹೆಚ್ಚು ಸುವಾಸನೆ ಹೊಂದಿ ಗರಿಷ್ಠ ನಾಲ್ಕು ದಿನಗಳಲ್ಲಿ ನೈಸರ್ಗಿಕವಾಗಿ ಮಾಗುತ್ತವೆ. ಹೀಗೆ ಹಣ್ಣಾದ ಮಾವುಗಳಿಗೆ ಬೇಡಿಕೆ ಹೆಚ್ಚಾಗಿ ಜಿಲ್ಲೆಯ ರೈತರ ಆದಾಯವೂ ಇಮ್ಮಡಿಗೊಂಡಿದೆ.

ಮಾವಿನ ಕಾಯಿಗಳನ್ನು ಕಟಾವು ಮಾಡಿದ ನಂತರ ಎರಡು ಗಂಟೆ ನೆರಳಿನಲ್ಲಿಡಬೇಕು. ಬಳಿಕ ಪ್ಲಾಸ್ಟಿಕ್‌ ಬುಟ್ಟಿಗಳಲ್ಲಿ ಸಂಗ್ರಹಿಸಿಟ್ಟು ಬಿಸಿ ನೀರಿನಲ್ಲಿ ಐದು ನಿಮಿಷ ಮುಳುಗಿಸಿ ಬಟ್ಟೆಯಿಂದ ಒರೆಸಲಾಗುತ್ತದೆ. ಹೀಗೆ ಒಣಗಿಸಿದ ಕಾಯಿಗಳನ್ನು ಪ್ಲಾಸ್ಟಿಕ್‌ ಬುಟ್ಟಿಯಲ್ಲಿ ತಲೆ ಕೆಳಗಾಗಿಟ್ಟು ಅದರ ಮೇಲೆ ಭತ್ತದ ಹುಲ್ಲು ಅಥವಾ ಪೇಪರ್‌ ತುಂಡುಗಳನ್ನು ಹಾಕುವ ಪ್ರಯೋಗ ರೈತರು ಮಾಡುತ್ತಿದ್ದಾರೆ.

‘ಕಬ್ಬಿನ ಸಿಪ್ಪೆಯಿಂದ ಮಾಡಿದ ‘ಇಥಲೀನ್’ ದ್ರಾವಣದಲ್ಲಿ ಕಾಯಿಗಳನ್ನು ಐದಾರು ಸೆಕೆಂಡ್‌ ಮುಳುಗಿಸಿ ತೆಗೆಯಬೇಕು. ಹಣ್ಣು ಮಾಗುವಾಗ ‘ಇಥಲೀನ್’ ಎನ್ನುವ ರಾಸಾಯನಿಕ ಉತ್ಪತ್ತಿಯಾಗಿ ಆಮ್ಲಗಳು ವಿಭಜನೆಯಾಗಿ ಸಕ್ಕರೆಯಾಗಿ ರೂಪುಗೊಳ್ಳುತ್ತವೆ. ಇದರಿಂದ ಹಣ್ಣಿನಲ್ಲಿ ಸುವಾಸನೆ ಬರುತ್ತವೆ. ನೈಸರ್ಗಿಕವಾಗಿ ಹಣ್ಣು ಮಾಗಿಸುವ ಈ ತಂತ್ರಜ್ಞಾವನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಸ್ಥೆ ಹಿಂದೆಯೇ ಅಭಿವೃದ್ಧಿ ಪಡಿಸಿದ್ದರೂ ವ್ಯಾಪಕವಾಗಿ ಗೊತ್ತಾಗಿರಲಿಲ್ಲ. ಜಿಲ್ಲೆಯ ರೈತರು ಇದನ್ನು ಈಗ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ’ ಎಂದು ಇಲ್ಲಿನ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ‘ಪ್ರಜಾವಾಣಿ’ಗೆ ತಿಳಿಸಿದರು.           

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT