ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಹನುಮಮಾಲೆ ಧರಿಸಿದ ಕನಕಗಿರಿ ಕ್ಷೇತ್ರದ ಹಾಲಿ, ಮಾಜಿ ಶಾಸಕರು

ಕನಕಗಿರಿ ಕ್ಷೇತ್ರದಾದ್ಯಂತ ಗಣ್ಯರ ಹನುಮ ವ್ರತಕ್ಕೆ ರಾಜಕೀಯ ಬಣ್ಣ; ಬೆಂಬಲಿಗರೊಂದಿಗೆ ಅಂಜನಾದ್ರಿಗೆ ಭೇಟಿ
Last Updated 12 ಏಪ್ರಿಲ್ 2022, 5:16 IST
ಅಕ್ಷರ ಗಾತ್ರ

ಕೊಪ್ಪಳ: ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಡೇಸಗೂರ ಮತ್ತು ಮಾಜಿ ಶಾಸಕ ಶಿವರಾಜ ತಂಗಡಗಿ ಹನುಮಮಾಲೆ ಧಾರಣೆ ಕ್ಷೇತ್ರದಾದ್ಯಂತ ತೀವ್ರ ಚರ್ಚೆಗೆ ಗ್ರಾಸ ಒದಗಿಸಿದೆ.

ಮಾಜಿ ಸಚಿವ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ ತಂಗಡಗಿ ತಂಗಡಗಿ ಈ ಬಾರಿ ಹನುಮಮಾಲೆಯನ್ನು ಸೋಮವಾರ ಧರಿಸುವುದಾಗಿ ಹೇಳಿಕೆ ನೀಡಿದ್ದರು. ಇದನ್ನು ಗಮನಿಸಿದ ಬಿಜೆಪಿ ಶಾಸಕ ಬಸವರಾಜ ದಡೇಸಗೂರ ಭಾನು ವಾರವೇ ಹನುಮಮಾಲೆ ಹಾಕಿಕೊಂಡು ತಂಗಡಗಿಗೆ ಟಾಂಗ್ ನೀಡಿದ್ದಾರೆ.

ಇಬ್ಬರು ದಿಢೀರ್ ಹನುಮಾನ್ ಭಕ್ತರಾಗಿ 9 ದಿನಗಳ ಕಠಿಣ ವ್ರತಾಚಾರಣೆಗೆ ಮಾಲೆಯನ್ನು ಧರಿಸಿದ್ದು, ಹೆಚ್ಚುತ್ತಿರುವ ಆಂಜನೇಯನ ಭಕ್ತರ ಸಂಖ್ಯೆ ಮತ್ತು ರಾಜಕೀಯ ಜಿದ್ದಾಜಿದ್ದಿಯಲ್ಲಿ ಹನುಮಮಾಲೆಗೆ ರಾಜಕೀಯ ಸ್ವರೂಪ ಬಂದಿದೆ.

ಭಾನುವಾರ ಬಸವರಾಜ ದಡೇಸಗೂರ ಕನಕಗಿರಿ ತಾಲ್ಲೂಕಿನ ತೊಂಡಿದೇವರಪ್ಪ ದೇವಸ್ಥಾನದಲ್ಲಿ ಹನುಮಮಾಲೆ ಧರಿಸಿಕೊಂಡರು. ನಂತರ ಅಂಜನಾದ್ರಿ ಪರ್ವತಕ್ಕೆ ತೆರಳಿ ದರ್ಶನ ಪಡೆದು, ಅರ್ಚಕರಿಂದ ಹನುಮಮಾಲೆ ಧಾರಣೆ ವ್ರತಾಚರಣೆಗೆ ಮಾಹಿತಿ ಪಡೆದುಕೊಂಡರು.

ಮಾಜಿ ಸಚಿವ ಶಿವರಾಜ ತಂಗಡಗಿ ಗಂಗಾವತಿಯ ಅಯ್ಯಪ್ಪನ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಅನುಗುಣವಾಗಿ ‌ಬೆಂಬಲಿಗ ರೊಂದಿಗೆ ಹನುಮಮಾಲೆ ಧರಿಸಿದರು.

ಏ.16ರಂದು ಹನುಮ ಜಯಂತಿಇದೆ. ಅಂದೇ ದೇವರ ದರ್ಶನ ಪಡೆದು ಹನುಮ ಮಾಲಾಧಾರಿಗಳ ಮಾಲೆ ವಿರಮಣ (ವಿಸರ್ಜನೆ) ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಾದ್ಯಂತ ಹನುಮಾನ್ ಚಾಲೀಸಾ ಭರ್ಜರಿಯಾಗಿ ನಡೆಯುತ್ತಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯುತ್ತಿರುವ ಅಂಜನಾದ್ರಿ ಆಂಜನೇಯ ಈಗ ಲಕ್ಷಾಂತರ ಭಕ್ತರ ಆರಾಧ್ಯದೈವವಾಗಿದ್ದು, ಜಯಂತಿ ಯಂದು ಸಾವಿರಾರು ಜನ ಸೇರುತ್ತಾರೆ.

ಅಲ್ಲದೆ ಗಂಗಾವತಿ, ಕಾರಟಗಿ, ಕನಕಗಿರಿಯಲ್ಲಿ ಸಾವಿರಾರು ಯುವಕರು ಹನುಮಮಾಲಾಧಾರಣೆ ಮಾಡುತ್ತಿ ರುವುದರಿಂದ ಯುವಕರನ್ನು ಮೆಚ್ಚಿಸಲು ಮಾಲೆ ಧಾರಣೆ ಹೊಸ ಪ್ರಚಾರ ತಂತ್ರ ಆರಂಭಿಸಿದ್ದಾರೆ ಎಂದು ಜನತೆ ಆಡಿಕೊಳ್ಳುವಂತೆ ಆಗಿದೆ.

ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ಬಿಜೆಪಿ, ಹಿಂದೂ ಸಂಘಟನೆಗಳ ಕಡು ಟೀಕಾರರಾಗಿರುವ ತಂಗಡಗಿ ಏಕಾಏಕಿ ಹನುಮಮಾಲೆ ಧಾರಣೆ ಮಾಡಿಕೊಂಡಿದ್ದು, ಅಭಿಮಾನಿಗಳ ಹುಬ್ಬೇರಿಸುವಂತೆ ಮಾಡಿದೆ. ವ್ರತಾಚಾರಣೆಗಳಲ್ಲಿ ಅಷ್ಟೊಂದು ಆಸಕ್ತಿ ತೋರದ ದಡೇಸಗೂರ ಅವರು ಮಾಲೆ ಹಾಕಿಕೊಂಡಿದ್ದು, ಚರ್ಚೆಗೆ
ಗ್ರಾಸ ಒದಗಿಸಿದೆ.

ಕಾವಿ ಮತ್ತು ಕೇಸರಿ ಯಾರ ಸ್ವತ್ತೂ ಅಲ್ಲ: ತಂಗಡಗಿ

ಕಾರಟಗಿ: ದೇಶದಲ್ಲಿ ಕಾವಿಗೆ ಮತ್ತು ಕೇಸರಿಗೆ ತನ್ನದೇ ಆದ ಶಕ್ತಿ ಇದೆ. ಇವಕ್ಕೆ ತಲೆಮಾರುಗಳಿಂದ ಮಹತ್ವದ ಸ್ಥಾನವಿದೆ. ಹಿಂದುತ್ವ ಪ್ರತಿಪಾದನೆ ಹೆಸರಿನಲ್ಲಿ ಕಾಳಿಸ್ವಾಮೀಜಿ ಮತ್ತು ದೇಶಭಕ್ತಿಯ ಸೋಗಿನ ಕೆಲ ಸಂಘಟನೆಗಳು ಇವನ್ನು ತಮ್ಮದೇ ಸ್ವತ್ತು ಎಂಬಂತೆ ವರ್ತಿಸುತ್ತಿರುವುದು ದುರಂತವೇ ಸರಿ ಎಂದು ಕಾಂಗ್ರೆಸ್‌ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು.

ಭಾನುವಾರ ಪಟ್ಟಣದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾವಿತೊಟ್ಟ ಗುರುಗಳನ್ನು ಕಾಲು ಮುಗಿದು ನಮಸ್ಕರಿಸಿ ಸತ್ಕರಿಸುವ ಪರಂಪರೆ ಜೀವಂತವಾಗಿದೆ. ಸ್ವಾಮೀಜಿ ಕೇಸರಿ, ಕಾವಿಗೆ ಅವಮಾನಿಸಿದ್ದಲ್ಲದೇ ಹಿಂದೂ ಜನತೆಯ ಧಾರ್ಮಿಕ ನಂಬಿಕೆಗಳಿಗೆ ದಕ್ಕೆ ತರುವಂತಿದೆ. ಕೇಸರಿ ಕೇವಲ ಬಿಜೆಪಿಯರ ಆಸ್ತಿಯಲ್ಲ, ಅದೊಂದು ತ್ಯಾಗದ ಸಂಕೇತ. ಹಿಂದೂ ಹೆಸರಲ್ಲಿ ಕೇಸರಿ ತೊಟ್ಟು ಜನರ ನಡುವೆ ಬೆಂಕಿ ಹಚ್ಚುವ ಕೆಲಸವನ್ನು ಯಾರೂ ಮಾಡಬಾರದು ಎಂದರು.

ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲಾ ಧಾರ್ಮಿಕ ದೊಂಬರಾಟಗಳ ಹಿಂದೆ ಆರ್‌ಎಸ್‍ಎಸ್ ಮತ್ತು ಬಿಜೆಪಿಯ ಪಾತ್ರವಿದೆ. ಇದಕ್ಕೆಲ್ಲಾ ಸರ್ಕಾರವೇ ಸೂತ್ರಧಾರವಾಗಿದೆ. ‌ನಿರಂತರ ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದಾರೆ. ಜನರ ಸಮಸ್ಯೆ, ಅಭಿವೃದ್ಧಿಯನ್ನು ಬಿಜೆಪಿಯು ಮರೆತು ಧಾರ್ಮಿಕ ಮತ್ತು ಧರ್ಮಗಳ ಪ್ರಚೋದನೆಯ ಬೆಂಕಿಯಲ್ಲಿ ರಾಜಕೀಯ ನಡೆಸುತ್ತಿದೆ. ಇದಕ್ಕೆಲ್ಲಾ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT