ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರ ನಡೆಗೆ ಟೀಕೆ

7
ಶಕ್ತಿ ಕಾರ್ಯಾಗಾರಕ್ಕೆ ಪ್ರಮುಖ ನಾಯಕರ ಕಡೆಗಣನೆ

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರ ನಡೆಗೆ ಟೀಕೆ

Published:
Updated:

ಗಂಗಾವತಿ: ಕೊಪ್ಪಳದಲ್ಲಿ ಸೋಮವಾರ ನಡೆದ ಕಾಂಗ್ರೆಸ್‌ನ ಶಕ್ತಿ ಕಾರ್ಯಾಗಾರದಲ್ಲಿ ಪಕ್ಷದ ಕೆಲ ಹಿರಿಯ ಮುಖಂಡರನ್ನು ಕಡೆಗಣಿಸಿರುವುದು ಪಕ್ಷದ ಕಾರ್ಯಕರ್ತರಲ್ಲಿ ಅಸಮಧಾನಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದೆ.

 ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಮಾಜಿ ಸಚಿವ ಶಿವರಾಜ ತಂಗಡಗಿ ದೊಡ್ಡ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಒಳಗೊಂಡ ಕಾರ್ಯಕ್ರಮ ಆಯೋಜಿಸಿದ್ದು, ಕಾರ್ಯಕ್ರಮದ ಬ್ಯಾನರ್‌, ಪ್ರಚಾರದ ಭಿತ್ತಿಪತ್ರ ಹಾಗೂ ಆಹ್ವಾನ ಪತ್ರಿಕೆಯಲ್ಲಿ ಕಾಂಗ್ರೆಸ್‌ನ ಮಾಜಿ ಸಂಸದ ಶಿವರಾಮೇಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮುಕುಂದರಾವ್ ಭವಾನಿಮಠ ಸೇರಿದಂತೆ ಹಲವರನ್ನು ಕೈಬಿಟ್ಟಿರುವುದಕ್ಕೆ ಟೀಕೆ ವ್ಯಕ್ತವಾಗಿದೆ.

ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಹಾಗೂ ಟ್ವಿಟ್ಟರ್‌ನಲ್ಲಿ ಪಕ್ಷದ ಕೆಲ ಕಾರ್ಯಕರ್ತರು ಬಹಿರಂಗವಾಗಿಯೇ ಶಿವರಾಜ ತಂಗಡಗಿ ಅವರ ನಡೆಯನ್ನು ಟೀಕಿಸಿದರೆ, ಇನ್ನು ಕೆಲವರು ತಂಗಡಗಿ ಅವರನ್ನು ಸಮರ್ಥಿಸಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಲ್ಲಿದ್ದ ಮಾಜಿ ಸಂಸದ ಶಿವರಾಮೇಗೌಡ ಹಾಗೂ ಮುಕುಂದರಾವ್ ಭವಾನಿಮಠ ಅವರನ್ನು ಕಾಂಗ್ರೆಸ್ ಕರೆತರುವಲ್ಲಿ ತಂಗಡಗಿ ಪ್ರಮುಖ ಪಾತ್ರವಹಿಸಿದ್ದರು. ‘ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಇದಕ್ಕೆ ಕೆಲವರು ಕಾರಣ ಎಂಬ ಅಸಮಾಧಾನ ಅವರಲ್ಲಿದೆ. ಹೀಗಾಗಿ ಇಂತಹ ವಿದ್ಯಮಾನ ನಡೆದಿರಬಹುದು’ ಎಂದು ಪಕ್ಷದ ಕಾರ್ಯಕರ್ತ ವೆಂಕಟರಾಜ ಬೂದಗುಂಪಾ ಎಂದರು.

ಕಾಂಗ್ರೆಸ್ ಜಿಲ್ಲಾ ಸಮಿತಿಯ ಅಧ್ಯಕ್ಷ ಶಿವರಾಜ ತಂಗಡಗಿ ಅವರು ಶಕ್ತಿ ಕಾರ್ಯಾಗಾರದಲ್ಲಿಯೇ ವಿಷಾದ ವ್ಯಕ್ತಪಡಿಸಿದ್ದಾರೆ. ಕಣ್ತಪ್ಪಿನಿಂದ ಕೆಲವರ ಹೆಸರು ಕೈಬಿಟ್ಟುಹೋಗಿದೆ. ಮುಂದಿನ ದಿನಗಳಲ್ಲಿ ಹೀಗಾಗದಂತೆ ಗಮನ ಹರಿಸುವುದಾಗಿ ತಿಳಿಸಿದ್ದಾರೆ‘ ಎಂದು ಮಾಜಿ ಸಂಸದ ಎಸ್.ಶಿವರಾಮೇಗೌಡ ತಿಳಿಸಿದರು.
 
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಯತ್ನಿಸಿದಾಗ ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ ಅವರು ಕರೆ ಸ್ವೀಕರಿಸಲಿಲ್ಲ.

 

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !