ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ಮೊದಲ ಬಾರಿ ಐಸಿಸಿ ಸಭೆಯಿಲ್ಲದೆ ಕಾಲುವೆಗೆ ನೀರು

ಮಲೆನಾಡಿನಲ್ಲಿ ವ್ಯಾಪಕ ಮಳೆ: ಭತ್ತ ನಾಟಿಗೆ ಸಜ್ಜು
Last Updated 23 ಜುಲೈ 2020, 19:31 IST
ಅಕ್ಷರ ಗಾತ್ರ

ಕೊಪ್ಪಳ: ತಾಲ್ಲೂಕಿನ ಮುನಿರಾಬಾದಿನ ಕಾಡಾ ಕಚೇರಿಯಲ್ಲಿ ಐಸಿಸಿ ಸಭೆ ವಾರ್ಷಿಕ ಹಬ್ಬವೆಂದೇ ಹೇಳಬಹುದು. ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಜನಪ್ರತಿನಿಧಿಗಳು, ರೈತ ಮುಖಂಡರು, ಹೊರಗೆ ಕೊನೆಯ ಭಾಗದ ರೈತರ ಪ್ರತಿಭಟನೆ ಸಾಮಾನ್ಯ ವಾಗಿರುತ್ತಿತ್ತು.

ಆದರೆ ಈ ಸಾರಿ ತುಂಗಭದ್ರಾ ಜಲಾಶಯ ಅವಧಿಗೆ ಮುಂಚೆಯೇ ನೀರು ಸಂಗ್ರಹವಾಗಿರುವುದರಿಂದ ರೈತರ ಮನವಿಗೆ ಮುಂಚೆಯೇ ನೀರು ಬಿಡಲಾಗುತ್ತದೆ. ಮಲೆನಾಡಿನ ಭಾಗದಲ್ಲಿ ವ್ಯಾಪಕ ಮಳೆ ಆಗುತ್ತಿರುವುದರಿಂದ ತುಂಗಭದ್ರೆ ಮೈದುಂಬುತ್ತಿದ್ದಾಳೆ. ರೈತರು ಭತ್ತ ನಾಟಿಗೆ ಸಿದ್ಧತೆ ಮಾಡಿಕೊಂಡು ಮಡಿ ಮಾಡಿದ್ದಾರೆ. ಕಾಲುವೆಗೆ ನೀರು ಬಂದರೆ ಜೀವಕಳೆ ಬರಲಿದೆ.

ಕಾರಟಗಿ, ಸಿಂಧನೂರ ಸಮೀದಪ ಕೆಲವು ಕಡೆ ಕಾಲುವೆ ಇನ್ನೂ ದುರಸ್ತಿ ಕಾರ್ಯ ನಡೆಯುತ್ತಿದ್ದವು. ನಿಗಮದ ಅಧಿಕಾರಿಗಳು ಶುಕ್ರವಾರದಿಂದ ಕೆಲಸ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಕಾಲುವೆಗೆ ನೀರು ಬರುವುದನ್ನೇ ಕಾಯುತ್ತಿದ್ದಾರೆ. ಸಮೀಪದ ರೈತರು ಉತ್ತಮ ನೀರಿನ ಸೌಲಭ್ಯ ಇದ್ದರೆ ಎರಡು ಬೆಳೆಯನ್ನು ಬೆಳೆಯುತ್ತಾರೆ. ಕೆಲವೊಮ್ಮೆ ಎರಡನೇ ಬೆಳೆಗೆ ನೀರಿಲ್ಲದೆ ಹೋರಾಟಗಳು ನಡೆಯುತ್ತವೆ.

ಈಗ ಮುಂಗಾರು ಮಳೆ ಸಮೃದ್ಧವಾಗಿದ್ದು, ಅಧಿಕಾರಿಗಳ ತಲೆ ನೋವು ತಪ್ಪಿಸಿವೆ.

ಭತ್ತವನ್ನೇ ಅಧಿಕವಾಗಿ ಬೆಳೆಯುತ್ತಿದ್ದು, ಪರ್ಯಾಯ ಬೆಳೆಯತ್ತ ರೈತರು ಚಿತ್ತ ಹರಿಸುತ್ತಿಲ್ಲ. ಪರಿಣಾಮವಾಗಿ ಅನೇಕ ಜಮೀನುಗಳು ಸವಳು ಆಗಿವೆ. ನೀರು ಬಾರದ ರೈತರು ಕಾಲುವೆಗೆ ಪಂಪ್‌ಸೆಟ್‌ಗಳನ್ನು ಹಾಕಿ ಅಕ್ರಮವಾಗಿ ಪಡೆಯುತ್ತಾರೆ.

'ಪ್ರತಿವರ್ಷ ನೀರು ಬಿಡುವಂತೆ ಕಾಡಾ ಕಚೇರಿಗೆ ಬರುತ್ತಿದ್ದೇವೆ. ಈಗ ಮಳೆ ಆಗಿರುವುದರಿಂದ ಆ ಸಮಸ್ಯೆ ಇಲ್ಲ. ಭತ್ತ ನಾಟಿಗೆ ಸಿದ್ಧತೆ ನಡೆಸಿದ್ದೇವೆ' ಎನ್ನುತ್ತಾರೆ ರೈತ ಮುಖಂಡ ತಿಪ್ಪೇಸ್ವಾಮಿ.

ಪೂರ್ಣವಾಗದ ಕಾಮಗಾರಿ:ಕಾಲುವೆ ವ್ಯಾಪ್ತಿ ಪ್ರದೇಶ 176 ಕಿ.ಮೀ ಇದೆ. ಕೊನೆಯ ಭಾಗದಲ್ಲಿ ಇನ್ನೂ ಬೃಹತ್ ಕಾಲುವೆ ನಿರ್ಮಾಣವಾಗುತ್ತಿವೆ. ನೀರು ತಲುಪಲು ಅನೇಕ ದಿನ ಹಿಡಿಯಬಹುದು. ಆದರೂ ನೀರು ಬಂದರೆ ಕಾಮಗಾರಿಗೆ ಕಷ್ಟವಾಗಲಿದೆ. ಕಾರಟಗಿ ಭಾಗದಲ್ಲಿ ಕಾಲುವೆಗಳ ದುರಸ್ತಿ ಕಾರ್ಯ ವ್ಯಾಪಾಕವಾಗಿ ನಡೆಯುತ್ತಿತ್ತು. ಶನಿವಾರದಿಂದ ನೀರು ಹರಿಯಲಿದೆ.

ರೈತರ ಬೇಡಿಕೆಗೆ ಮುಂಚೆಯೇ ನೀರು ಕಾಲುವೆಗೆ ಹರಿದು ಬರುತ್ತಿದ್ದು, ಅವರು ಹರ್ಷಚಿತ್ತರಾಗಿದ್ದಾರೆ, ಕೆಲವೇ ದಿನದಲ್ಲಿ ಭತ್ತ ನಳನಳಲಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT