ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಷ್ಟಗಿ: ನಿವೇಶನ ಮಾರಾಟಕ್ಕೆ ಆನ್‌ಲೈನ್‌ ದಾಖಲೆ, ಅಕ್ರಮ

ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿದ ಕುಷ್ಟಗಿ ಪುರಸಭೆ
Last Updated 10 ಮಾರ್ಚ್ 2022, 2:56 IST
ಅಕ್ಷರ ಗಾತ್ರ

ಕುಷ್ಟಗಿ: ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ (ಎನ್‌ಎ)ಗೆ ಸಂಬಂಧಿಸಿದ ನಿಯಮ ಮತ್ತು ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿರುವ ಇಲ್ಲಿಯ ಪುರಸಭೆಯು ಅಭಿವೃದ್ಧಿಗೊಳ್ಳದ ಬಡಾವಣೆಗಳ ಮಾಲೀಕರಿಗೆ ನಿವೇಶನಗಳ ಮಾರಾಟಕ್ಕೆ ಆನ್‌ಲೈನ್‌ ದಾಖಲೆಗಳನ್ನು (ಫಾರ್ಮ್ ನಂ 3 ಉತಾರ) ಅಕ್ರಮವಾಗಿ ನೀಡುತ್ತಿದೆ.

ನಿಯಮಗಳ ಪ್ರಕಾರ ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ ಹೊಂದಿದ ಸರ್ವೆ ಸಂಖ್ಯೆಯಲ್ಲಿ ಬಡಾವಣೆ ಅಭಿವೃದ್ಧಿಪಡಿಸುವ ಉದ್ದೇಶಕ್ಕೆ ಬಡಾವಣೆ ಮಾಲೀಕರಿಗೆ ಪ್ರಾರಂಭದಲ್ಲಿ ಶೇಕಡ 44ರಷ್ಟು ನಿವೇಶನಗಳನ್ನು ಮಾತ್ರ ಮಾರಾಟ ಮಾಡುವುದಕ್ಕೆ ಅನುಮತಿ ನೀಡಬೇಕಾಗುತ್ತದೆ. ಉಳಿದ ಶೇ 56ರಷ್ಟು ನಿವೇಶನಗಳನ್ನು ಮಾರಾಟ ಮಾಡಬೇಕಾದರೆ ಸಂಬಂಧಿಸಿದ ಬಡಾವಣೆಯಲ್ಲಿ ಮೂಲ ಸೌಲಭ್ಯಗಳಾದ ಡಾಂಬರ್‌, ಕಾಂಕ್ರೀಟ್‌ ರಸ್ತೆ ಮತ್ತು ಚರಂಡಿ, ವಿದ್ಯುತ್‌ ವ್ಯವಸ್ಥೆ, ಅರಣ್ಯೀಕರಣ, ಕುಡಿಯುವ ನೀರು ಹೀಗೆ ಅಗತ್ಯ ಮೂಲಸೌಲಭ್ಯಗಳನ್ನು ಕೈಗೊಳ್ಳುವುದು ಕಡ್ಡಾಯ. ಮೂಲ ಸೌಲಭ್ಯಗಳನ್ನು ಕಲ್ಪಿಸಿದ್ದನ್ನು ಖಚಿತಪಡಿಸಿಕೊಂಡ ನಂತರವಷ್ಟೇ ಉಳಿದ ನಿವೇಶನಗಳ ಮಾರಾಟಕ್ಕೆ ಪುರಸಭೆ ನಮೂನೆ 3ರ ಮೂಲಕ ನಿವೇಶನ ಮಾರಾಟಕ್ಕೆ ಪುರಸಭೆ ಅನುಮತಿ ನೀಡಬೇಕು. ಇಲ್ಲದಿದ್ದರೆ ಪೂರ್ಣಪ್ರಮಾಣದ ಅಭಿವೃದ್ಧಿಯಾಗುವವರೆಗೂ ನಿವೇಶನಗಳ ಮಾರಾಟಕ್ಕೆ ಅನುಮತಿ ನೀಡುವುದನ್ನು ತಡೆಹಿಡಿಯಬೇಕು ಎಂಬುದು ಸರ್ಕಾರದ ಸುತ್ತೋಲೆಯಲ್ಲಿ ಸ್ಪಷ್ಟವಾಗಿದೆ.

ಆದರೆ, ಈ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿರುವ ಪುರಸಭೆ ಅಧಿಕಾರಿಗಳು, ಕೆಲ ಚುನಾಯಿತ ಪ್ರತಿನಿಧಿಗಳು ಮತ್ತು ಸಿಬ್ಬಂದಿಯು, ಬಡಾವಣೆಗಳ ಮಾಲೀಕರೊಂದಿಗೆ ಮೈತ್ರಿ ಮಾಡಿಕೊಂಡು ಆದೇಶಕ್ಕೆ ವಿರುದ್ಧವಾಗಿ ದಾಖಲೆಗಳನ್ನು ನೀಡಿರುವುದು 'ಪ್ರಜಾವಾಣಿ' ಸಂಗ್ರಹಿಸಿರುವ ಅಧಿಕೃತ ದಾಖಲೆಗಳಿಂದ ತಿಳಿದುಬಂದಿದೆ.

2021ರ ಫೆಬ್ರುವರಿಯಿಂದ ಇಲ್ಲಿಯವರೆಗೆ ಅಭಿವೃದ್ಧಿಗೊಳ್ಳದ ಹೊಸ ಬಡಾವಣೆಗಳಲ್ಲಿನ ನೂರಾರು ನಿವೇಶನಗಳ ಮಾರಾಟಕ್ಕೆ ಅನುಮತಿ ನೀಡಿದ್ದು ಇದರಲ್ಲಿ ಲಕ್ಷಾಂತರ ಹಣ ಕೈ ಬದಲಾಗಿದೆ.

ಪಟ್ಟಣದ 7ನೇ ವಾರ್ಡ್‌ನ ಶಾಖಾಪುರ ರಸ್ತೆಯಲ್ಲಿನ 182/2/1ರ ಸರ್ವೆ ಸಂಖ್ಯೆಯಲ್ಲಿನಶಶಿಧರ ಕವಲಿ ಎಂಬುವವರಿಗೆ ಸೇರಿದ 5.35 ಎಕರೆ ಗುಂಟೆ ಜಮೀನನ್ನು ವಸತಿ ಉದ್ದೇಶಕ್ಕೆ 2014ರಲ್ಲಿ ಭೂ ಪರಿವರ್ತನೆಗೊಳಿಸಲಾಗಿತ್ತು. ಇದರಲ್ಲಿ ಉದ್ಯಾನ ಮತ್ತು ಸಾರ್ವಜನಿಕ ಬಳಕೆ ಪ್ರದೇಶಗಳನ್ನು ಹೊರತುಪಡಿಸಿ ಒಟ್ಟು 98 ನಿವೇಶನಗಳನ್ನು ಗುರುತಿಸಲಾಗಿತ್ತು. ಬಡಾವಣೆ ಅಭಿವೃದ್ಧಿಪಡಿಸುವುದಕ್ಕೆ ಪ್ರಾರಂಭದಲ್ಲಿ ಶೇಕಡ 44ರಂತೆ 2017ರ ಡಿಸೆಂಬರ್‌ ತಿಂಗಳಲ್ಲಿ ಒಟ್ಟು 39 ನಿವೇಶನಗಳ ಮಾರಾಟಕ್ಕೆ ಫಾರ್ಮ್ ನಂ 3 ಬಿಡುಗಡೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಷರತ್ತುಗಳನ್ನು ವಿಧಿಸಿದ್ದ ಪುರಸಭೆ, ಬಡಾವಣೆಯಲ್ಲಿ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡ ನಂತರ ಉಳಿದ ನಿವೇಶನಗಳ ಮಾರಾಟಕ್ಕೆ ಅನುಮತಿ ನೀಡಲು ಆದೇಶದಲ್ಲಿ ಸ್ಪಷ್ಟಪಡಿಸಿದ ದಾಖಲೆ ಲಭ್ಯವಿದೆ.

ಆದರೆ, ಈ ಬಡಾವಣೆ ಯಾವ ಮೂಲಸೌಲಭ್ಯಗಳಿಲ್ಲದೆ ಹಾಳುಬಿದ್ದಿದೆ. ಆದರೂ ಶೇ 90ರಷ್ಟು ನಿವೇಶನಗಳ ಮಾರಾಟಕ್ಕೆ ಪುರಸಭೆ ಅನುಮತಿ ನೀಡಿರುವುದು ಉಪ ನೋಂದಣಿ ಕಚೇರಿಯಿಂದ 'ಪ್ರಜಾವಾಣಿ' ಪಡೆದಿರುವ ಅಧಿಕೃತ ದಾಖಲೆಗಳಿಂದ ಗೊತ್ತಾಗಿದೆ. ಅದೇ ರೀತಿ ಯಮನಪ್ಪ ಎಂಬುವವರ ಬಡಾವಣೆಯಲ್ಲಿ 70, ಕೃಷ್ಣಮೂರ್ತಿ ಬಡಾವಣೆಯಲ್ಲಿ 50, ಮದ್ದಾನಯ್ಯ ಎಂಬುವವರ ಬಡಾವಣೆಯಲ್ಲಿ 15 ರಷ್ಟು ಆನ್‌ಲೈನ್‌ ಉತಾರ ನೀಡಲಾಗಿದೆ.

ಮಾಹಿತಿ ನೀಡದ ಅಧಿಕಾರಿ: ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ ಮುಖ್ಯಾಧಿಕಾರಿ ಉಮೇಶ ಹಿರೇಮಠ, ಯಾರಿಗೂ ಫಾರ್ಮ್ ನಂಬರ್ 3 ನೀಡಿಲ್ಲ ಎಂದೇ ವಾದಿಸಿದರು.

ನಿಯಮ ಉಲ್ಲಂಘಿಸಿದ್ದರೆ ಕ್ರಮ; ಡಿಸಿ
ಈ ಕುರಿತು 'ಪ್ರಜಾವಾಣಿ'ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ವಿಕಾಶ ಕಿಶೋರ ಸುರಳ್ಕರ್, 'ಫಾರ್ಮ್ ನಂ 3 ಬಿಡುಗಡೆಗೆ ಶೇಕಡ 44 ಮತ್ತು 56ರ ನಿಯಮದಂತೆಯೇ ನಡೆದುಕೊಳ್ಳುವುದು ಕಡ್ಡಾಯ. ಈ ಪ್ರಕಾರ ಆನ್‌ಲೈನ್‌ ಮೂಲಕ ದಾಖಲೆ ಕೊಟ್ಟರೆ ಅದು ನಿಯಮ ಉಲ್ಲಂಘನೆ ಆಗುವುದಿಲ್ಲ. ಆದರೂ ನಿಯಮ ಮೀರಿ ನಡೆದುಕೊಂಡಿದ್ದರೆ ಪರಿಶೀಲಿಸಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಖಂಡಿತವಾಗಿಯೂ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ' ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT