ಶನಿವಾರ, ಮಾರ್ಚ್ 25, 2023
22 °C
ಲಾಭ ತಂದ ಚೆಂಡು ಹೂ ಕೃಷಿ, ಮನೆಯಲ್ಲೇ ಹಾರ ತಯಾರಿ

ಪುಷ್ಪ ಕೃಷಿಯಲ್ಲೇ ತೃಪ್ತಿ ಕಂಡ ಕುಟುಂಬ: ಇತರ ರೈತರಿಗೆ ಮಾದರಿ

ಕಿಶನರಾವ್ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ಇಲ್ಲಿಂದ ಹನುಮನಾಳ ಗ್ರಾಮಕ್ಕೆ ಹೋಗುವ ಮಾರ್ಗಕ್ಕೆ ಹೊಂದಿಕೊಂಡಿರುವ ಮದ್ನಾಳ ಗ್ರಾಮದ ದ್ಯಾಮಣ್ಣ ಹಟ್ಟಿಯವರ ಜಮೀನಿನಲ್ಲಿ ವರ್ಷಪೂರ್ತಿ ಯಾವುದಾದರೂ ಒಂದೆರಡು ಪುಷ್ಪ ಕೃಷಿ ನಡೆದಿರುವುದು ಕಂಡು ಬರುತ್ತದೆ.

ಅಷ್ಟೆ ಅಲ್ಲ ಆಕರ್ಷಕ ಪುಷ್ಪ ರಾಶಿ, ಸ್ವಚ್ಛವಾಗಿರುವ ಜಮೀನು ದಾರಿ ಹೋಕರ ಕಣ್ಮನ ಸೆಳೆಯದೆ ಬಿಡುವುದಿಲ್ಲ. ಹೀಗೆ ತೋಟಕ್ಕೆ ಬಂದವರಿಗೆ ದ್ಯಾಮಣ್ಣ ಹಟ್ಟಿ ಹಾಗೂ ಅವರ ಪತ್ನಿ ಕಮಲಾಕ್ಷಿ ಪುಷ್ಪ ಕೃಷಿಯ ಪಾಠ ಮಾಡುತ್ತಾರೆ. ಇದು ಹತ್ತಾರು ವರ್ಷಗಳಿಂದ ನಿರಂತರವಾಗಿ ನಡೆದು ಬಂದಿರುವ ಚಟುವಟಿಕೆ.

ದ್ಯಾಮಣ್ಣ ಹಟ್ಟಿಯವರಿಗೆ ಕೃಷಿಯ ಮೇಲೆ ತುಂಬಾ ಆಸಕ್ತಿ. ಆದರೆ ದುಡಿಯಲು ಅವರಿಗೆ ಇರುವುದು ಒಂದೂವರೆ ಎಕರೆ ಭೂಮಿ ಮಾತ್ರ. ಸಣ್ಣದಾಗಿ ನೀರು ಹೊಂದಿರುವ ಕೊಳವೆಬಾವಿ. ಊರಲ್ಲಿ ಮನೆ ಇಲ್ಲದ ಕಾರಣಕ್ಕೆ ಜಮೀನಿನಲ್ಲಿಯೇ ಪುಟ್ಟದೊಂದು ಮನೆ ಕಟ್ಟಿಕೊಂಡು ಬದುಕು ನಡೆಸುತ್ತಿದಾರೆ.

ಆರಂಭದಲ್ಲಿ ರಾಜ್ಯದ ವಿವಿಧ ಭಾಗದಿಂದ ಸಸಿಗಳನ್ನು ತಂದು ನಾಟಿ ಮಾಡಿದರು. ಪ್ರಗತಿಪರ ಕೃಷಿಕರ ಸಲಹೆ ಪಡೆದುಕೊಂಡರು. ಹತ್ತಾರು ವರ್ಷಗಳಿಂದ ವರ್ಷಪೂರ್ತಿ ಒಂದಿಲ್ಲೊಂದು ಪುಷ್ಪ ಕೃಷಿ ಮಾಡುತ್ತಾ ಬಂದಿದ್ದಾರೆ.

‘ನಮ್ಮದು ದೊಡ್ಡ ಕುಟುಂಬ ಎಲ್ಲರಿಗೂ ಕೆಲಸ ಬೇಕು. ಇರುವ ಇಷ್ಟು ಜಮೀನಿನಲ್ಲಿ ಪುಷ್ಪ ಬೆಳೆಯುತ್ತೇವೆ. ಹೂವುಗಳನ್ನು ಮಾರಾಟ ಮಾಡುವುದರ ಬದಲು ನಾವೇ ಮಾಲೆ ತಯಾರಿಸುತ್ತೇವೆ. ನಮ್ಮ ಜಮೀನು ಮತ್ತು ಮನೆ ಮುಖ್ಯ ರಸ್ತೆಯ ಅಂಚಿಗೆ ಇರುವುದರಿಂದ ಈ ಮಾರ್ಗದಲ್ಲಿ ದೇವಸ್ಥಾನಗಳಿಗೆ ಹೋಗುವವರು ಮಾಲೆ ಖರೀದಿಸಿಕೊಂಡು ಹೋಗುತ್ತಾರೆ. ಇಡೀ ದಿನ ಕುಟುಂಬ ಸದಸ್ಯರಿಗೆ ಮಾಲೆ ತಯಾರಿಸುವ ಕೈತುಂಬ ಕೆಲಸವೂ ದೊರಕಿದೆ’ ಎಂದು ಕಮಲಾಕ್ಷಿ ಹೇಳಿದರು.

ಈ ಮೊದಲು ದೀಪಾವಳಿ ಸಂದರ್ಭಕ್ಕೆಂದೇ ಅಲಂಕಾರಕ್ಕಾಗಿ ಹೂವುಗಳನ್ನು ಬೆಳೆಯುತ್ತಿದ್ದರು. ಆದರೆ, ನಂತರ ಇಡೀ ವರ್ಷಪೂರ್ತಿ ಹೂವುಗಳನ್ನೇ ಬೆಳೆಯಲು ಆರಂಭಿಸಿದರು. ಇಷ್ಟೆ ಜಮೀನಿನಲ್ಲಿ ಸೇವಂತಿಗೆ, ಅಡಿಕೆ ಹೂವು, ಮಾರಿಗೋಲ್ಡ್, ಚೆಂಡು ಹೀಗೆ ವಿವಿಧ ಹೂವುಗಳನ್ನು ಹಾಕಿಕೊಂಡಿದ್ದಾರೆ. ಹಾರ ತಯಾರಿಸುವಾಗ ವಿವಿಧ ಹೂವುಗಳನ್ನು ಪೋಣಿಸಿ ಆಕರ್ಷಕ ಹಾರ ತಯಾರಿಸುವುದರ ಕಾರಣವಾಗಿ ಸಾಕಷ್ಟು ಬೇಡಿಕೆಯೂ ಇದೆ.

ಸದ್ಯ ಸಾವಯವ ವಿಧಾನದಲ್ಲಿ ಖರ್ಚಿಲ್ಲದೆ ಬೆಳೆದ ಚೆಂಡು ಹೂವಿನ ಬೆಳೆ ಹಟ್ಟಿಯವರಿಗೆ ಲಾಭ ತಂದುಕೊಟ್ಟಿದೆ. ಪ್ರತಿದಿನ ತಮಗೆ ಎಷ್ಟು ಹೂವುಗಳ ಅಗತ್ಯವಿದೆಯೋ ಅಷ್ಟು ಹೂವುಗಳನ್ನು ಮಾತ್ರ ಸ್ವತಃ ತಾವೇ ಕೊಯ್ಲು ಮಾಡಿಕೊಂಡು ಹಾರ ತಯಾರಿಸುತ್ತಾರೆ. ಏಕಕಾಲದಲ್ಲಿ ಅಧಿಕ ಇಳುವರಿ ಬಂದರೆ ಮಾತ್ರ ಹೂವಿನ ವ್ಯಾಪಾರಸ್ಥರಿಗೆ ನೀಡುತ್ತಾರೆ. ಇವರ ಮೂವರು ಮಕ್ಕಳು ಹಾರ ತಯಾರಿಸುವುದರಲ್ಲಿ ಕೈಗೂಡುವುದರ ಜತೆಗೆ ಕಾಲೇಜ್‍ಗೆ ಹೋಗುತ್ತಾರೆ.

ಈ ಭಾಗದಲ್ಲಿ ಕಲ್ಲಂಗಡಿ, ಸೂರ್ಯಕಾಂತಿ, ಮೆಕ್ಕೆಜೋಳ ಬೆಳೆದು, ಬೆಲೆ ಹಾಗೂ ಬೆಳೆಯಿಂದ ಸೋತು ಹೋಗಿದ್ದ ಅನೇಕ ಸಣ್ಣ ರೈತರು ಈಗ ಅಲ್ಪಾವಧಿ ಬೆಳೆಯಾಗಿರುವ ಪುಷ್ಪ ಕೃಷಿಯತ್ತ ವಾಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು