ಮಂಗಳವಾರ, ಜೂನ್ 15, 2021
25 °C
38 ಗುಂಟೆ ಜಮೀನಿನಲ್ಲಿಯೇ ಬೀಜೋತ್ಪಾದನೆ: ಅನ್ನ ದಕ್ಕಿಸಿಕೊಳ್ಳಬೇಕಾದ ಅನಿವಾರ್ಯತೆ

ನೊಗಕ್ಕೆ ಹೆಗಲು ಕೊಡುವ ಮಕ್ಕಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ತುಗ್ಗಲಡೋಣಿ ಗ್ರಾಮದ ಬಡ ರೈತ ಯಮನಪ್ಪ ಸೂಳಿಭಾವಿ ಅವರು ಎತ್ತುಗಳಿಲ್ಲದ ಕಾರಣ ತಮ್ಮ ಮಗನನ್ನೇ ನೊಗಕ್ಕೆ ಹೂಡಿ, ಕುಂಟಿ ಹೊಡೆದು ಉಳುಮೆ ಮಾಡಿಸುತ್ತಾರೆ.

ಈ ರೈತ ಕುಟುಂಬ 38 ಗುಂಟೆ ಜಮೀನು ಹೊಂದಿದೆ. ಅದರಲ್ಲೇ ಹತ್ತಿ ಬೀಜೋತ್ಪಾದನೆ ಮಾಡಿಕೊಂಡು, ಅನ್ನ ದಕ್ಕಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಯಮನಪ್ಪ ಅವರಿಗೆ 8 ಮಕ್ಕಳಿದ್ದು, ಅವರಲ್ಲಿ 5 ಪುತ್ರಿಯರನ್ನು ಮದುವೆ ಮಾಡಿಕೊಟ್ಟಿದ್ದಾರೆ. ಬೈಲಪ್ಪ, ಹನುಮಂತ ಮತ್ತು ಶೇಖಪ್ಪ ಕೂಲಿಗೆಲಸಕ್ಕೆ ಹೋಗುತ್ತಾರೆ. ಎತ್ತುಗಳನ್ನು ಕೊಳ್ಳಲು ಅಥವಾ ಟ್ರ್ಯಾಕ್ಟರ್ ಮೂಲಕ ಕೃಷಿ ಕೆಲಸ ಮಾಡಲು ಆರ್ಥಿಕ ಶಕ್ತಿ ಇಲ್ಲದ ಕಾರಣ ಯಮನಪ್ಪ ತಮ್ಮ ಮಕ್ಕಳನ್ನೇ ದಿನಕ್ಕೊಬ್ಬರಂತೆ ಎತ್ತುಗಳನ್ನಾಗಿಸಿ ನೊಗಕ್ಕೆ ಹೂಡಿ ಉಳುಮೆ ಮಾಡುತ್ತಾರೆ. ‘ಇದು ಇಂದು–ನಿನ್ನೆಯದ್ದಲ್ಲ. ಮಕ್ಕಳು ದೊಡ್ಡವರಾಗಿ, ಹೀಗೆ ಆಸರೆಯಾಗಿದ್ದಾರೆ. ಕೂಲಿಗೆಲಸಕ್ಕೆ ಹೋಗುತ್ತಾರೆ. ಮೂವರು ಮಕ್ಕಳಲ್ಲಿ ಒಬ್ಬರು ನನ್ನೊಂದಿಗೆ ಬಂದು, ನೊಗಕ್ಕೆ ಹೆಗಲು ಕೊಡುತ್ತಾರೆ. ಮಡಿಕೆ ಹೊಡೆಯುವುದು ಅಥವಾ ಬಿತ್ತನೆಯಂತಹ ಭಾರದ ಕೆಲಸವಿದ್ದರೆ, ಅಂದು ಇಬ್ಬರು ಮಕ್ಕಳು ಜೊತೆಯಾಗಿ ನೊಗಕ್ಕೆ ಹೆಗಲು ಕೊಡುತ್ತಾರೆ’ ಎಂದು ಯಮನಪ್ಪ ತಿಳಿಸಿದರು.

‘ಬಡತನದ ಕಾರಣ ಮಕ್ಕಳನ್ನು ಓದಿಸಲು ಆಗಲಿಲ್ಲ. ಹನುಮಂತ ಐಟಿಐ ಉತ್ತೀರ್ಣನಾಗಿದ್ದರೂ ಎಲ್ಲೂ ಕೆಲಸ ಸಿಗಲಿಲ್ಲ. ನಾಲ್ಕಾರು ಗಂಟೆ ಭಾರದ ಕುಂಟೆಯನ್ನು ತೇಕುತ್ತಾ ಎಳೆಯುವ ಈ ಯುವಕರು ಸಂಪೂರ್ಣವಾಗಿ ಜಮೀನು ಉಳುಮೆ ಮಾಡುವವರೆಗೆ ಬಿಡುವುದಿಲ್ಲ.ಜಮೀನಿನಲ್ಲಿ ಕೊಳವೆಬಾವಿ ಇದೆ. ಒಂದೂವರೆ ಅಂಗುಲ ನೀರು ಇದೆ. ಆದರೆ, ಇವರಿಗೆ ಭೂಮಿ ಕಡಿಮೆ
ಇದೆ.

‘ಮಕ್ಕಳು ಕುಂಟೆ ಜಗುವುದು ಕಂಡು ಕಣ್ಣಲ್ಲಿ ನೀರು ಬರುತ್ತದೆ. ಅವರಿಗೆ ನೋವು ಆಗದಿರಲಿಯೆಂದು ನಾನು ಕುಂಟೆಗೆ ಭಾರ ಬೀಳದಂತೆ ಹಿಡಿದಿರುತ್ತೇನೆ. ಮಕ್ಕಳು ಹೀಗೆ ಕೆಲಸ ಮಾಡುವುದು ಕಂಡು ಸಂಕಟ ಆಗುತ್ತದೆ’ ಎಂದು ಯಮನಪ್ಪ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.