ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್ ಆಂಡ್ ಆಫ್ ಪದ್ಧತಿ: ರೈತರ ವಿರೋಧ

ಸಕರಾತ್ಮಕ ಪ್ರತಿಕ್ರಿಯೆ ಬಾರದಿದ್ದರೆ ಹೋರಾಟ, ಜಾಕ್‌ವೆಲ್‌ ಕಾಯಲು ರೈತರ ನಿರ್ಧಾರ
Last Updated 14 ಫೆಬ್ರುವರಿ 2021, 13:27 IST
ಅಕ್ಷರ ಗಾತ್ರ

ಕಾರಟಗಿ: ಎಡದಂಡೆ ನಾಲೆ ವ್ಯಾಪ್ತಿಯ ವಿತರಣಾ ಕಾಲುವೆಯಲ್ಲಿ ನೀರು ಪೂರೈಸುವುದನ್ನು ನಿಲ್ಲಿಸಿ, ರಾಯಚೂರು ಪಟ್ಟಣಕ್ಕೆ ನೀರು ಪೂರೈಸುವ ನೆಪದಲ್ಲಿ ಮೂರು ದಿನಗಳ ಆನ್ ಆ್ಯಂಡ್ ಆಫ್ ನೀರು ನಿರ್ವಹಣೆ ಪದ್ಧತಿ ಜಾರಿಗೊಳಿಸಲು ಹೊರಟಿರುವ ನೀರಾವರಿ ನಿಗಮದ ನಿರ್ಧಾರಕ್ಕೆ ತುಂಗಭದ್ರಾ 31ನೇ ಕಾಲುವೆ ವ್ಯಾಪ್ತಿಯ ಕೆಳಭಾಗದ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಶನಿವಾರ ಸಂಜೆ ಜಮಾವಣೆಗೊಂಡಿದ್ದ ರೈತರು ಆನ್‌ ಆಂಡ್ ಆಫ್ ಪದ್ಧತಿ ಕೈಬಿಟ್ಟು, ಸಮರ್ಪಕ ನಿರ್ವಹಣೆ ಮೂಲಕ ನಿರಂತರವಾಗಿ ನೀರು ಹರಿಸಿ, ಬೆಳೆ ರಕ್ಷಿಸಬೇಕು. ಅಕ್ರಮ ನೀರು ಪಡೆಯುವುದಕ್ಕೆ ಬ್ರೇಕ್‌ ಹಾಕಬೇಕು ಎಂದು ಆಗ್ರಹಿಸಿದರು.

‘ನಮ್ಮ ಒತ್ತಾಯಕ್ಕೆ ಸಕರಾತ್ಮಕ ಪ್ರತಿಕ್ರಿಯೆ ಬಾರದಿದ್ದರೆ ಬೆಳೆ ಸಂರಕ್ಷಣೆಗಾಗಿ ಉಗ್ರ ಹೋರಾಟಕ್ಕಿಳಿಯಲೂ ನಾವು ಸಿದ್ಧ’ ಎಂದು ಘೋಷಿಸಿದರು.

ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳ ಕೆಳಭಾಗದ 31ನೇ ವಿತರಣಾ ಕಾಲುವೆ ವ್ಯಾಪ್ತಿಯ ರೈತರು ಫೆ. 15 ರಿಂದ 18ರವರೆಗೆ ನೀರಾವರಿ ನಿಗಮದ ಆನ್ ಅಂಡ್ ಆಫ್ ಪದ್ಧತಿ ವಿರೋಧಿಸಿ ಫೆ.15ರಿಂದ ಎಡದಂಡೆ ಮುಖ್ಯ ನಾಲೆಯ ಬಳಿ ಜಾಕ್‍ವೆಲ್‌ ಕಾವಲು ಕಾಯಲು, ನೀರು ಸ್ಥಗಿತಕ್ಕೆ ಆಸ್ಪದ ನೀಡದಂತೆ ನೋಡಿಕೊಳ್ಳಬೇಕೆಂಬ ನಿರ್ಧಾರ ಕೈಗೊಂಡರು.

ನೀರು ನಿರ್ವಹಣೆಯಲ್ಲಿ ಇಲಾಖೆ ವಿಫಲವಾಗಿರುವುದರಿಂದ ಕೆಳ ಭಾಗಕ್ಕೆ ಸಕಾಲಕ್ಕೆ ಸಮರ್ಪಕ ನೀರು ತಲುಪದೆ ರೈತರು ನಿರಂತರವಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಸಂಕಷ್ಟದ ಮಧ್ಯೆಯೂ ಭತ್ತ ನಾಟಿ, ಕ್ರಿಮಿನಾಶಕ ಹಾಗೂ ರಸಗೊಬ್ಬರಕ್ಕೆ ₹20 ಸಾವಿರವರೆಗೆ ಸಾಲ ಮಾಡಿ ವಿನಿಯೋಗಿಸಿದ್ದಾರೆ. ಇಲಾಖೆಯ ನಿರ್ಧಾರದಿಂದ ಬೆಳೆ ಹಾಳಾಗಿ, ಸಾಲದ ಶೂಲಕ್ಕೆ ಈಡಾಗಿ, ಆತ್ಮಹತ್ಯೆ ದಾರಿ ಹಿಡಿಯುವ ಅಪಾಯವಿದೆ ಎಂದು ನೆರೆದಿದ್ದ ಹತ್ತಾರು ಗ್ರಾಮಗಳ ರೈತರು ಆತಂಕ, ಆಕ್ರೋಶ ವ್ಯಕ್ತಪಡಿಸಿದರು.

ಮೇಲ್ಭಾಗದಲ್ಲಿ ಎಗ್ಗಿಲ್ಲದೆ ನಡೆದಿರುವ ನೀರು ಕಳ್ಳತನಕ್ಕೆ ಜನಪ್ರತಿನಿಧಿಗಳು ಪ್ರೋತ್ಸಾಹಿಸುತ್ತ, ಅಧಿಕಾರಿಗಳ ಕೈ ಕಟ್ಟಿ ಹಾಕುವ ಕೆಟ್ಟ ಸಂಪ್ರದಾಯವನ್ನು ಕೈಬಿಡಬೇಕು ಎಂದು ನೆರೆದ ರೈತರು ಕಿವಿಮಾತು ಹೇಳಿದರು.

ಬೂದುಗುಂಪಾ, ಹಾಲಸಮುದ್ರ ಮತ್ತು ತಿಮ್ಮಾಪುರ, ಚನ್ನಳ್ಳಿ, ಸಿದ್ರಾಂಪುರ, ಯರಡೋಣ, ದೇವಿಕ್ಯಾಂಪ್, ಈಳಿಗನೂರು, ಜಮಾಪುರ, ಉಳೇನೂರು ಸೇರಿದಂತೆ ವಿವಿಧ ಗ್ರಾಮಗಳ ನೀರು ಬಳಕೆದಾರರ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ನೂರಾರು ರೈತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT