ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಗೊಬ್ಬರ ಕಂಪನಿಗಳಿಂದ ರೈತರ ವಿನಾಶ: ಚಿಂತಕ ರವಿತೇಜ ಕಳವಳ

ವಿಶ್ವ ರೈತ ದಿನಾಚರಣೆ, ತರಬೇತಿ ಕಾರ್ಯಕ್ರಮದಲ್ಲಿ ಚಿಂತಕ ರವಿತೇಜ ಕಳವಳ
Last Updated 24 ಡಿಸೆಂಬರ್ 2019, 13:37 IST
ಅಕ್ಷರ ಗಾತ್ರ

ಕುಷ್ಟಗಿ: ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ ಕಂಪನಿಗಳು ರೈತರನ್ನು ಭ್ರಮಾಲೋಕದಲ್ಲಿ ಇರಿಸಿದ್ದು, ನಕಲಿ ಬೀಜ, ವಿಷಕಾರಿ ಗೊಬ್ಬರ, ಕುಲಾತಂರಿ ತಳಿಗಳನ್ನು ಮಾರಾಟ ಮಾಡುವ ಮೂಲಕ ರೈತರನ್ನು ವಿನಾಶದ ಅಂಚಿಗೆ ತಳ್ಳಿವೆ ಎಂದು ಚಿಂತಕ ರವಿತೇಜ ಅಬ್ಬಿಗೇರಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಕೃಷಿ ಇಲಾಖೆಯ ಸಭಾಂಗಣದಲ್ಲಿ ಸೋಮವಾರ 2019-20ನೇ ಸಾಲಿನ ಆತ್ಮ ಯೋಜನೆ ಅಡಿಯಲ್ಲಿ ರೈತರಿಗೆ ತರಬೇತಿ ಹಾಗೂ ವಿಶ್ವ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಕಂಪನಿಗಳ ಹುಚ್ಚು ಭ್ರಮೆಯಿಂದ ಹೊರ ಬರಲು, ಪಾರಂಪರಿಕ ಕೃಷಿಗೆ ಮರಳುವುದು ಅನಿವಾರ್ಯವಾಗಿದ್ದು, ಪಾರಂಪರಿಕ ಕೃಷಿ, ಸ್ವತಂತ್ರ ಬಿತ್ತನೆ ಬೀಜ ಸಂರಕ್ಷಣೆ, ಸ್ವಯಂ ಕೃಷಿಯಿಂದ ಮಾತ್ರ ಕೃಷಿ ಕ್ಷೇತ್ರ ಉಳಿಸಿಕೊಳ್ಳಲು ಸಾಧ್ಯವಿದೆ. ಕುಟುಂಬದ ವ್ಯಕ್ತಿ ಕನಿಷ್ಟ 8ರಿಂದ 10 ತಾಸಿನ ಕೆಲಸವಾದರೂ ನಿರ್ವಹಿಸಬೇಕಿದೆ. ಅಗತ್ಯವಾದರೆ ಮಾತ್ರ, ಕೃಷಿ ಕಾರ್ಮಿಕರ ಸಹಾಯ ತೆಗೆದುಕೊಂಡು ಕೆಲಸ ನಿರ್ವಹಿಸುವುದಾದರೆ ಮಾತ್ರ ಕೃಷಿ ಕ್ಷೇತ್ರ ಉಳಿಸಿಕೊಳ್ಳಬಹುದು ಎಂದರು.

ಕೃಷಿಕರು ಪರ್ಯಾಯ ಉದ್ಯೋಗಕ್ಕೆ ಮಾರು ಹೋಗಿರುವ ಹಿನ್ನೆಲೆಯಲ್ಲಿ ಸ್ವಂತ ಜಮೀನಿದ್ದರೂ ಲಾವಣಿ (ಲೀಜ್) ಕೊಟ್ಟು ಬೆಳೆ ಬೆಳೆಯಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿದ್ದು, ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರಕ್ಕಾಗಿ ಮಾರುಕಟ್ಟೆ ಅವಲಂಬಿಸಿ ವೆಚ್ಚ ಹೆಚ್ಚಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರ ಲಾಭದಾಯಕವಲ್ಲ ಎನ್ನುವುದು ಸತ್ಯ ಎಂದರು. ಪ್ರಗತಿಪರ ಕೃಷಿಕರಾದ ಶಂಕ್ರಪ್ಪ ಕವಡಿಕಾಯಿ, ಶೇಖರಪ್ಪ ಮಡಿವಾಳರ್, ಶಿವನಗೌಡ ಪಾಟೀಲ, ದೇಸಾಯಿ ಮಾತನಾಡಿದರು.ಕೃಷಿಕ ಸಮಾಜದ ಅಧ್ಯಕ್ಷ ಚಂದಪ್ಪ ತಳವಾರ ಅಧ್ಯಕ್ಷತೆ ವಹಿಸಿದ್ದರು.ಎಪಿಎಂಸಿ ನಿರ್ದೇಶಕ ಶಂಕ್ರಗೌಡ ಪಾಟೀಲ ಜಾಲಿಹಾಳ, ಪೀಕಾರ್ಡ್‌ ಬ್ಯಾಂಕ್‌ ನಿರ್ದೇಶಕ ಬಸನಗೌಡ ಮೇಗೂರು, ನಾಗನಗೌಡ ಪಾಟೀಲ, ಬಸವರಾಜ ಪಾಟೀಲ ಇದ್ದರು. ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ನಾಯಕ ಮಾತನಾಡಿದರು. ಕೃಷಿ ಅಧಿಕಾರಿ ಶಿವಾನಂದ ಮಳಿಗಿ ನಿರೂಪಿಸಿದರು, ಶೇಖರಯ್ಯ ಹಿರೇಮಠ ವಂದಿಸಿದರು. ಇದೇ ವೇಳೆ ರಾಜ್ಯಮಟ್ಟದ ರೈತ ಪ್ರಶಸ್ತಿಗೆ ಆಯ್ಕೆಯಾದ ಶಂಕ್ರಪ್ಪ ಕವಡಿಕಾಯಿ, ದೊಡ್ಡಪ್ಪ ರಸರಡ್ಡಿ, ಶಿವನಗೌಡ ಪಾಟೀಲ, ಬಸಯ್ಯ ಅವರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT