ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಭಾರತ್ ಬಂದ್‌ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ

ಮೂರು ಕೃಷಿ ಕಾನೂನು ರದ್ದತಿಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರ ಪ್ರತಿಭಟನೆ: ಮನವಿ ಸಲ್ಲಿಕೆ
Last Updated 28 ಸೆಪ್ಟೆಂಬರ್ 2021, 3:42 IST
ಅಕ್ಷರ ಗಾತ್ರ

ಕೊಪ್ಪಳ:ರೈತ ಸಂಘಟನೆಗಳ ಸಮನ್ವಯ ಸಮಿತಿ,ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿಮೂರು ಕೃಷಿ ಕಾಯ್ದೆಗಳು ಹಾಗೂ ವಿದ್ಯುತ್ ತಿದ್ದುಪಡಿ ಮಸೂದೆ ಹಿಂಪಡೆಯಲು ಆಗ್ರಹಿಸಿ ಸೋಮವಾರ ಕರೆ ನೀಡಿದ್ದ ‘ಕೊಪ್ಪಳ ಬಂದ್’ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ದೆಹಲಿಯಲ್ಲಿ ರೈತರು ನಡೆಸಿರುವ ಹೋರಾಟಕ್ಕೆ 10 ತಿಂಗಳು ಸಂದಿದೆ. 700ಕ್ಕೂ ಹೆಚ್ಚು ರೈತರು ಚಳವಳಿಯಲ್ಲಿ ಹುತಾತ್ಮರಾಗಿದ್ದಾರೆ. ಆದರೆ ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ಅಂಬಾನಿ, ಅದಾನಿ ಕಂಪನಿಗಳ ಮೇಲಿನ ನಿಷ್ಠೆಯನ್ನು ಬಿಟ್ಟುಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಚಳವಳಿಗೆ ಅಪಮಾನ ಎನ್ನುವಂತೆ ಸರ್ಕಾರ ಆ.10 ರಂದು ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಲು ಮುಂದಾಗಿತ್ತು. ದೇಶದಾದ್ಯಂತ ಹೋರಾಟ ತೀವ್ರಗೊಂಡ ಕಾರಣ ಮಸೂದೆ ಸದ್ಯಕ್ಕೆ ಕೈ ಬಿಡಲಾಗಿದೆ.ರೈತರ ಒಡೆತನದ ಕೃಷಿ ವ್ಯವಸ್ಥೆಯನ್ನು ಕೊಲ್ಲುವ ಸರ್ಕಾರದ ನೀತಿಯಿಂದ ರೈತ ಕುಟುಂಬಗಳು ದಿವಾಳಿ ಅಂಚಿನಲ್ಲಿವೆ. ಕೃಷಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗದ ಕಾರಣ, ಪ್ರತಿ ವರ್ಷ ರೈತರು ನಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಬಂಡಾಯ ಸಾಹಿತ್ಯ ಸಂಘಟನೆ ಮುಖಂಡ, ಸಾಹಿತಿ ಅಲ್ಲಮಪ್ರಭು ಪಾಟೀಲ ಬೆಟ್ಟದೂರ ಮಾತನಾಡಿ,‘ಬಡ್ಡಿ, ಚಕ್ರಬಡ್ಡಿಗೆ ಬಲಿಯಾಗಿರುವ ರೈತರು ತಮ್ಮ ಭೂಮಿ ಮಾರಾಟ ಮಾಡುತ್ತಿದ್ದಾರೆ.ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿದ್ದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಗ್ರಾಮೀಣ ಭಾಗದ ಜನರು ಗ್ಯಾಸ್ ಸಿಲಿಂಡರ್ ಮೂಲೆಗೆಸೆದು ಪುನ: ಕಟ್ಟಿಗೆಯ ಮೊರೆ ಹೋಗಿದ್ದಾರೆ. ಹಾಗಾಗಿ ಸರ್ಕಾರ ಸಾಮಾನ್ಯ ಜನರನ್ನು ಬಲಿಕೊಟ್ಟುಕಾರ್ಪೊರೇಟ್ ಕಂಪನಿಗಳಿಗೆ ಲಕ್ಷಾಂತರ ಕೋಟಿ ಲಾಭ ಮಾಡುವ ನೀತಿಯನ್ನು ಕೈ ಬಿಡಬೇಕು. ಮೊಂಡು ವಾದವನ್ನು ಮುಂದುವರೆಸಿದರೆ ರೈತರ ಸಾಲು ಸಾಲು ಹೆಣಗಳನ್ನು ನೋಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ರೈತ ಸಂಘಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ನಜೀರ್‌ಸಾಬ್‌ ಮೂಲಿಮನಿ ಮಾತನಾಡಿ,‘2022 ರ ನಂತರ ಕೃಷಿ ಆದಾಯ ದ್ವಿಗುಣ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿಯವರು 4 ವರ್ಷಗಳಿಂದ ಹೇಳುತ್ತಿದ್ದಾರೆ. ಆದಾಯ ದ್ವಿಗುಣ ರೈತರಿಗಲ್ಲ.ಕಾರ್ಪೊ ರೇಟ್ ಕಂಪನಿಗಳಿಗೆ ಎನ್ನುವ ಅರ್ಥ ಈಗ ಸ್ಪಷ್ಟವಾಗಿದೆ. ಜಗತ್ತಿನಲ್ಲಿ ಭಾರತ ಅತ್ಯಂತ ಉತ್ಕೃಷ್ಟ, ಸಮೃದ್ಧ ಬೆಳೆ ಬೆಳೆಯುವ ದೇಶ. ಈ ಹಿನ್ನೆಲೆಯಲ್ಲಿಯೇ ಬಲಿಷ್ಠ ದೇಶಗಳು ಭಾರತವನ್ನು ದೋಚಲು ಮೋದಿಯವರನ್ನು ತಮ್ಮ ಕೈವಶ ಮಾಡಿಕೊಂಡಿವೆ ಎಂದು ಆರೋಪಿಸಿದರು.

ಎಪಿಎಂಸಿ ತಿದ್ದುಪಡಿ ಕಾಯ್ದೆ, ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು ಎಂದರು. ವಿವಿಧ ಸಂಘಟನೆಗಳ ಮುಖಂಡರಾದ ಹನುಮಂತಪ್ಪ ಹೊಳೆಯಾಚೆ,ಬಸ ವರಾಜ ಶೀಲವಂತರ,ಭೀಮಸೇ ನ ಕಲಕೇರಿ, ಮಹಾಂತೇಶ ಕೊತಬಾಳ,ಶರಣು ಗಡ್ಡಿ,ಮದ್ದಾನಯ್ಯ ಹಿರೇಮಠ ಹಲಗೇರಿ,ಯಂಕಾ ರಡ್ಡಿ ಮುದ್ದಾಬಳ್ಳಿ,ಶರಣು ಪಾಟೀಲ, ರಾಜಶೇಖರ ಅಂಗಡಿ,ಕನಕಪ್ಪ ಇಂದ ರಗಿ,ಬಸವರಾಜ,ಶಿವಪ್ಪ ಇದ್ದರು.

ಬೇಡಿಕೆ ಈಡೇರಿಕೆಗೆ ಹಕ್ಕೊತ್ತಾಯ
ಎಂ.ಎಸ್.ಸ್ವಾಮಿನಾಥನ್ ವರದಿಯ ಮಾನದಂಡದ ಪ್ರಕಾರ ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿ ಮಾಡಬೇಕು ಮತ್ತು ಭತ್ತ, ಹತ್ತಿ, ತೊಗರಿ, ಸಜ್ಜೆ, ಮೆಕ್ಕೆ ಜೋಳ ಇತರೆ ಕೃಷಿ ಉತ್ಪನ್ನಗಳು ಕಟಾವಿಗೆ ಬರುವ ಒಂದು ತಿಂಗಳು ಮುಂಚಿತವಾಗಿ ಸರ್ಕಾರಿ ಖರೀದಿ ಕೇಂದ್ರ ತೆರೆಯಬೇಕು ಎಂದು ಪ್ರತಿಭಟನಾ ನಿರತ ರೈತರು ಒತ್ತಾಯಿಸಿದರು.

ಬೆಂಬಲ ಬೆಲೆಯನ್ನು ಕಾಯ್ದೆ ವ್ಯಾಪ್ತಿಗೊಳಪಡಿಸಬೇಕು.ಸರ್ಕಾರ ನಿಗದಿ ಮಾಡಿದ ಬೆಲೆಗಿಂತ ಹೆಚ್ಚಿನ ಬೆಲೆಯಲ್ಲಿ ಖಾಸಗಿ ವರ್ತಕರು ಮತ್ತು ದಲ್ಲಾಳಿಗಳು, ರೈತರ ಕೃಷಿ ಉತ್ಪನ್ನಗಳನ್ನು ಖರಿದೀಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.ದೇಶಕ್ಕೆ ಮಾರಕವಾಗಿರುವ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಬೇಕು,ಉದ್ದೇಶಿತ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಕೈ ಬಿಡಬೇಕು,ಪ್ರತಿದಿನ ಮೂರು ಫೇಸ್ ವಿದ್ಯುತ್ ಸರಬರಾಜು ಮಾಡಬೇಕು,ಪೆಟ್ರೋಲ್ ಡೀಸೆಲ್, ಅಡಿಗೆ ಅನಿಲ ಮತ್ತು ಇತರೆ ಅಗತ್ಯ ವಸ್ತುಗಳ ಬೆಲೆ ಇಳಿಸಬೇಕು ಎಂದು ಹಕ್ಕೊತ್ತಾಯ ಮಂಡಿಸಿ ರಾಷ್ಟ್ರಪತಿಳಿಗೆ ಬರೆದ ಮನವಿಯನ್ನು ಸಲ್ಲಿಸಿದರು.

ಅಂಗಡಿ ಬಂದ್ ಮಾಡದ ವ್ಯಾಪಾರಸ್ಥರು
ಕೊಪ್ಪಳ ಬಂದ್‌ಗೆ ವಿವಿಧ ಸಂಘಟನೆಗಳು ಕೈಜೋಡಿಸಿ ತಾಲ್ಲೂಕು ಕ್ರೀಡಾಂಗಣದಿಂದ ಅಶೋಕ ವೃತ್ತ, ಕೇಂದ್ರ ಬಸ್ ನಿಲ್ದಾಣ, ಮಾರುಕಟ್ಟೆ ಪ್ರಮುಖ ಪ್ರದೇಶಗಳಲ್ಲಿ ಜಾಥಾ ನಡೆಸಿ ಅಂಗಡಿ ಮುಂಗಟ್ಟು ಬಂದ್‌ ಮಾಡುವಂತೆ ಮನವಿ ಮಾಡಿದರು.

ವ್ಯಾಪಾರಸ್ಥರು ಪ್ರತಿಭಟನಾಕಾರರ ಜೊತೆ ವಾಗ್ವಾದ ನಡೆಸಿದರು. ಜಾಥಾ ಹೋಗುವ ಸಂದರ್ಭದಲ್ಲಿ ಕೆಲ ಹೊತ್ತು ಅಂಗಡಿಗಳು ಬಂದ್‌ ಆಗಿದ್ದವು. ಸರ್ಕಾರಿ ಕಚೇರಿ, ಬ್ಯಾಂಕ್, ಶಾಲೆ, ಕಾಲೇಜು ಎಂದಿನಂತೆ ಕಾರ್ಯನಿರ್ವಹಿಸಿದವು. ಬಸ್‌ಗಳು ಎಂದಿನಂತೆ ಸಂಚರಿಸಿದವು. ನಗರದ ವಿವಿಧೆಡೆ ಪೊಲೀಸ್ ಬಿಗಿಬಂದೋಬಸ್ತ್ ಏರ್ಪಡಿಸಲಾಗಿತ್ತು. ಬಂದ್ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಎಚ್ಚರ ವಹಿಸಲಾಗಿತ್ತು. ಪದವೀಧರ ಹನುಮೇಶ ಮ್ಯಾಗಳಮನಿ ಏಕಾಂಗಿಯಾಗಿ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದ್ದು ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT