ಕುಷ್ಟಗಿ: ಕಳೆದ ಎರಡು ವಾರದಿಂದ ಮತ್ತು ಕೆಲ ದಿನಗಳ ಹಿಂದೆ ತಾಲ್ಲೂಕಿನಾ ದ್ಯಂತ ಅಧಿಕ ಮಳೆ ಸುರಿದಿದ್ದು, ಮುಂಗಾರು ಹಂಗಾಮಿನ ಬೆಳೆಗಳಿಗೆ ಅಗತ್ಯವಾಗಿರುವ ಯೂರಿಯಾ ರಸಗೊಬ್ಬರದ ಕೊರತೆ ಎದುರಾಗಿದೆ.
ಮಳೆ ಬಿಡುವು ನೀಡುತ್ತಿದಂತೆ ರಸಗೊಬ್ಬರ ಖರೀದಿಗೆ ರೈತರಲ್ಲಿ ಧಾವಂತ ಕಂಡುಬಂದಿದ್ದು ಬೇಡಿಕೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಯೂರಿಯಾ ಆವಕ ಆಗದ ಕಾರಣ ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗಿದೆ.
ವರ್ತಕರು ಪರಿಸ್ಥಿತಿಯ ದುರ್ಲಾಭ ಪಡೆಯುತ್ತಿದ್ದರೂ ಕೃಷಿ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಈ ವಿಷಯವನ್ನು ಸಹಾಯಕ ನಿರ್ದೇಶಕರು, ಕೃಷಿ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯವಹಿಸಿದ್ದಾರೆ ಎಂಬ ದೂರುಗಳು ರೈತರಿಂದ ಕೇಳಿಬಂದಿವೆ.
ನಿರಂತರ ಮಳೆಯಿಂದಾಗಿ ಜಮೀನಿನಲ್ಲಿ ಅಧಿಕ ಪ್ರಮಾಣದಲ್ಲಿ ತೇವಾಂಶ ಉಳಿದಿದ್ದು ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿರುವ ಸಜ್ಜೆ, ಮೆಕ್ಕೆಜೋಳ, ಸೂರ್ಯಕಾಂತಿಬೆಳೆಗಳು ಸದ್ಯ ಸಾರಜನಕದ ಕೊರತೆಯಿಂದ ಬಳಲುತ್ತಿದ್ದು ಹಳದಿ ಬಣ್ಣಕ್ಕೆ ತಿರುಗಿವೆ. ಬೆಳೆಗಳಿಗೆ ಸಾರಜನಕ ಪೂರೈಸುವ ಯೂರಿಯಾ ಗೊಬ್ಬರವನ್ನು ನೀಡದಿದ್ದರೆ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಎಂಬ ಚಿಂತೆ ರೈತರದು.
ಕೃಷಿ ಇಲಾಖೆ ಸಹಕಾರ ಸಂಘಗಳ ಮೂಲಕ ಯೂರಿಯಾ ಪೂರೈಸುತ್ತಿದೆ. ಆದರೆ ಗೊಬ್ಬರವನ್ನು ಯಾರಿಗೆ ಎಷ್ಟು ಪ್ರಮಾಣದಲ್ಲಿ ವಿತರಿಸಲಾಗಿದೆ ಎಂಬ ಬಗ್ಗೆ ಕೃಷಿ ಇಲಾಖೆ ಮುತುವರ್ಜಿ ವಹಿಸಿಲ್ಲ. ಹಾಗಾಗಿ ರೈತರು ಗೊಬ್ಬರಕ್ಕಾಗಿ ಪರದಾಡುತ್ತಿದ್ದರೆ ಸಹಕಾರ ಸಂಘಗಳಲ್ಲಿನ ಯೂರಿಯಾ ಪ್ರಭಾವಿ ವ್ಯಕ್ತಿಗಳ ಪಾಲಾಗುತ್ತಿದೆ. ಖಾಸಗಿ ಮಾರಾಟಗಾರರ ಬಳಿ ಹೋದರೆ ಗೊಬ್ಬರ ಇಲ್ಲ ಎನ್ನುತ್ತಿದ್ದಾರೆ. ಸಂಗ್ರಹಿಸಿ ಇಟ್ಟುಕೊಂಡಿರುವವರು ಬೇರೆ ಕಡೆಯಿಂದ ತರಿಸಿದ್ದೇವೆಎಂದು ಹೇಳಿ ರೈತರಿಂದ ಹೆಚ್ಚಿನ ದರ ವಸೂಲಿ ಮಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ರೈತರ ನೆರವಿಗೆ ಬಾರದ ಕೃಷಿ ಇಲಾಖೆ ಮತ್ತು ಅದರ ಅಧಿಕಾರಿಗಳು ಇದ್ದರೂ ಯಾರಿಗೆ ಪ್ರಯೋಜನ ಎಂದು ರೈತರಾದ ವೀರಭದ್ರಪ್ಪ ಸಂಕನೂರು, ಶಂಕರಪ್ಪ ಕಂದಕೂರು ಇತರರು ಅಸಮಾಧಾನ ತೋಡಿಕೊಂಡರು.
ಈ ಕುರಿತು ಮಾಹಿತಿಗಾಗಿ ಸಂಪರ್ಕಿಸಿದರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ನಾಯಕ ಯಾವುದೇ ಮಾಹಿತಿ ನೀಡದೆ ನುಣುಚಿಕೊಂಡರು.
ನಂತರ 'ಪ್ರಜಾವಾಣಿ'ಗೆ ಮಾಹಿತಿ ನೀಡಿದ ಕೊಪ್ಪಳದ ಕೃಷಿ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಅವರು, ಜಿಲ್ಲೆಯ ಖಾಸಗಿ ಮಾರಾಟಗಾರರು, ಸಹಕಾರ ಸಂಘಗಳು ಮತ್ತು ವೇರ್‌ಹೌಸ್‌ಗಳಲ್ಲಿ ಸುಮಾರು 6,700 ಮೆಟ್ರಿಕ್ ಟನ್ ಯೂರಿಯಾ ಸಂಗ್ರವಿದೆ. ಗಂಗಾವತಿಯಲ್ಲಿ 3,500 ಮೆಟ್ರಿಕ್ ಟನ್ ದಾಸ್ತಾನು ಇದೆ. ಕುಷ್ಟಗಿಯಲ್ಲಿ ಗುರುವಾರ ಒಂದೇ ದಿನ 138 ಮೆಟ್ರಿಕ್ ಟನ್ ಯೂರಿಯಾ ಮಾರಾಟವಾಗಿದೆ. ಯೂರಿಯಾ ಕೊರತೆಯಾಗಿಲ್ಲ ಪೂರೈಕೆ ನಿರಂತರವಾಗಿದೆ. ಬಂದಷ್ಟೇ ಖಾಲಿಯಾಗುತ್ತದೆ ಎಂದರು.
ಜಿಲ್ಲೆ ಸೇರಿದಂತೆ ರಾಜ್ಯದಾದ್ಯಂತ ವ್ಯಾಪಕವಾಗಿ ಮತ್ತು ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ. ಬೆಳೆಗಳೂ ಉತ್ತಮವಾಗಿರುವುದರಿಂದ ರೈತರಿಂದ ಏಕಕಾಲದಲ್ಲಿ ಬೇಡಿಕೆ ಹೆಚ್ಚಿದೆ ಎಂದು ವಿವರಿಸಿದರು.
ವರ್ತಕರು ಹೇಳಿದ್ದು: ರೈತರಿಗೆ ತೊಂದರೆ ಕೊಡಬೇಕೆಂಬ ಉದ್ದೇಶವಿಲ್ಲ. ತುರ್ತು ಅಗತ್ಯಕ್ಕಾಗಿ ಬೇರೆ ಕಡೆಯಿಂದ ಯೂರಿಯಾ ತರಿಸಿ ಸಕಾಲದಲ್ಲಿ ನೀಡುತ್ತಿದ್ದೇವೆ. ಲಾರಿಗೆ ಭರ್ತಿ ಮಾಡುವುದು ಇಳಿಸುವುದು, ಸಾಗಾಣಿಕೆ ವೆಚ್ಚ ಸೇರಿ ಒಂದಷ್ಟು ಹೆಚ್ಚಿನ ಹಣ ಪಡೆಯುವುದು ಹೇಗೆ ತಪ್ಪಾಗುತ್ತದೆ ಎಂದು ಗೊಬ್ಬರ ಮಾರಾಟಗಾರರು ಹೇಳಿದರು.
‘ಯೂರಿಯಾಕ್ಕೆ ಪರ್ಯಾಯ ನ್ಯಾನೊ’
ಆಧುನಿಕ ತಂತ್ರಜ್ಞಾನದಿಂದ ಇಫ್ಕೊ ಸಂಸ್ಥೆ ಆವಿಷ್ಕಾರಗೊಳಿಸಿ ಬಿಡುಗಡೆ ಮಾಡಿರುವ ದ್ರವ ರೂಪದ ನ್ಯಾನೊ ಸಾರಜನಕ ತಕ್ಷಣ ಬೆಳೆಗೆ ಲಭ್ಯವಾಗಿ ಶೀಘ್ರದಲ್ಲಿ ಬೆಳವಣಿಗೆ ಹೊಂದುವುದಕ್ಕೆ ಸಹಾಯವಾಗುತ್ತದೆ.
ಒಂದು ಎಕರೆಗೆ ಒಂದು ಲೀಟರ್ ನ್ಯಾನೊ ಯೂರಿಯಾ ಸಾಕಾಗುತ್ತದೆ. ಪ್ರತಿ ಲೀಟರ್ ನೀರಿಗೆ 4 ಎಂ.ಎಲ್ ದಂತೆ ಬೆರೆಸಿ ಬೆಳೆ ಮೊಣಕಾಲು ಮಟ್ಟದಲ್ಲಿ ಇರುವಾಗ ಸಿಂಪಡಿಸಬೇಕು. ಈಗಾಗಲೇ ಬಳಸಿರುವ ಕಡೆಗಳಲ್ಲಿ ಅತ್ಯುತ್ತಮ ಫಲಿತಾಂಶ ಬಂದಿದ್ದು ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ಹೊರಹೊಮ್ಮಿದ್ದು ಇದನ್ನು ಬಳಸುವ ನಿಟ್ಟಿನಲ್ಲಿ ಸರ್ಕಾರ ರೈತರನ್ನು ಪ್ರೋತ್ಸಾಹಿಸುತ್ತಿದೆ ಎಂದು ಜಂಟಿ ನಿರ್ದೇಶಕ ಸದಾಶಿವ ವಿವರಿಸಿದರು.
ಈಗಾಗಲೇ ಜಿಲ್ಲೆಗೆ 3,000 ಲೀಟರ್ ಬಂದಿದ್ದು ಎಲ್ಲದೂ ಖರ್ಚಾಗಿದೆ. ಮುಂದಿನ ವಾರದಲ್ಲೇ ಜಿಲ್ಲೆಗೆ ಸುಮಾರು 6,000 ಲೀಟರ್ ನ್ಯಾನೊ ಯೂರಿಯಾ ಬರಲಿದೆ ಎಂದು ಹೇಳಿದರು.
***
ಗೊಬ್ಬರ ಇದ್ದರೂ ಕೃತಕ ಅಭಾವ ಸೃಷ್ಟಿಸುವವರು ಮತ್ತು ಹೆಚ್ಚಿನ ದರಕ್ಕೆ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಅಲ್ಲದೆ ಅಂಗಡಿಗಳಲ್ಲಿ ದಾಸ್ತಾನು ಪರಿಶೀಲಿಸಿ ವರದಿ ಸಲ್ಲಿಸಲು ಎಲ್ಲ ತಾಲ್ಲೂಕು ಅಧಿಕಾರಿಗಳಿಗೆ ಸೂಚಿಸಿದ್ದೇವೆ.
- ಸದಾಶಿವ, ಕೃಷಿ ಇಲಾಖೆ ಜಂಟಿ ನಿರ್ದೇಶಕ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.