ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ದರಾಮಯ್ಯ, ಕಾಂಗ್ರೆಸ್‌ಗೆ ಗೋ ಶಾಪ

ಗ್ರಾಮ ಪಂಚಾಯಿತಿಗಳ ಬಿಜೆಪಿ ಬೆಂಬಲಿತ ಪ್ರತಿನಿಧಿಗಳಿಗೆ ಸನ್ಮಾನ: ಕೆ.ಎಸ್‌. ಈಶ್ವರಪ್ಪ ಹೇಳಿಕೆ
Last Updated 2 ಮಾರ್ಚ್ 2021, 4:44 IST
ಅಕ್ಷರ ಗಾತ್ರ

ಕುಷ್ಟಗಿ: ‘ಗೋಹತ್ಯೆ ನಡೆಸುವವರ ಪರವಾಗಿ ಅಧಿಕಾರ ನಡೆಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರ ಕಳೆದುಕೊಳ್ಳುವುದಕ್ಕೆ ಗೋ ಶಾಪವೇ ಕಾರಣ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು.

ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿರುವ ಬಿಜೆಪಿ ಬೆಂಬಲಿತ ಸದಸ್ಯರು, ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

‘ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾಯ್ದೆ ರದ್ದುಪಡಿಸುತ್ತೇವೆ ಎಂದು ಹೇಳುತ್ತಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯ ಕನಸು ಕಾಣುತ್ತಿದ್ದಾರೆ. ಮೊದಲು ಇವರು ಗೆದ್ದು ಬರಲಿ ನಂತರ ನೋಡೋಣ’ ಎಂದು ಲೇವಡಿ ಮಾಡಿದರು.

‘ಗೆದ್ದಿರುವ ಪಂಚಾಯಿತಿ ಸದಸ್ಯರಲ್ಲಿ ತಮ್ಮ ಪಕ್ಷದವರೇ ಹೆಚ್ಚು ಎನ್ನುತ್ತಿರುವ ಸಿದ್ದರಾಮಯ್ಯ ಹಾಗೂ ಶಿವಕುಮಾರ ಈ ರಾಜ್ಯದ ಮಹಾ ಸುಳ್ಳುಗಾರರು. ಬಿಜೆಪಿ ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವುದೇ ಜನರು ಪಕ್ಷದ ಮೇಲೆ ಇಟ್ಟಿರುವ ನಂಬಿಕೆಯಿಂದ, ಪ್ರತಿ ಹಳ್ಳಿಯಲ್ಲಿಯೂ ಒಬ್ಬ ಸಾಮಾನ್ಯ ರೈತರೂ ನಮ್ಮ ನಾಯಕ ನರೇಂದ್ರ ಮೋದಿ ಎಂದು ಗಟ್ಟಿ ಧ್ವನಿಯಲ್ಲಿ ಹೇಳುತ್ತಾರೆ’ ಎಂದರು.

‘ರಾಮ ಮಂದಿರಕ್ಕೆ ದೇಣಿಗೆ ಕೊಡುವುದಿಲ್ಲ ಎನ್ನುವ ಸಿದ್ದರಾಮಯ್ಯ ಲೆಕ್ಕಕೊಡಿ ಎಂದು ಕೇಳುತ್ತಿದ್ದಾರೆ. ‘ನೀನು ಯಾರೋ ಲೆಕ್ಕ ಕೇಳೋಕೆ ಹತ್ತು ರೂಪಾಯಿ ದೇಣಿಗೆ ನೀಡಿದ ಬಡ ರೈತ ಕೇಳಲಿ ಲೆಕ್ಕ ಕೊಡ್ತೇವೆ’ ಎಂದು ಸಿದ್ದರಾಮಯ್ಯ ವಿರುದ್ಧ
ಹರಿಹಾಯ್ದರು.

ಕುಡಿಯುವ ನೀರು, ಶೌಚಾಲಯ ಸೇರಿದಂತೆ ಗ್ರಾಮದ ಅಭಿವೃದ್ಧಿ ಮತ್ತು ಜನರ ಏಳಿಗೆಯನ್ನು ಗಮನದಲ್ಲಿಟ್ಟುಕೊಡು ಕೆಲಸ ನಿರ್ವಹಿಸುವಂತೆ ಪಂಚಾಯಿತಿ ಸದಸ್ಯರಿಗೆ ಕಿವಿಮಾತು ಹೇಳಿದರು.

ತೋಟಗಾರಿಕೆ ಸಚಿವ ಆರ್‌.ಶಂಕರ ಮಾತನಾಡಿ,‘ರೇಷ್ಮೆ, ತೋಟಗಾರಿಕೆ ಇಲಾಖೆಗಳಿಗೆ ಸಂಬಂಧಿಸಿದ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ರೈತರಿಗೆ ಆರ್ಥಿಕ ಸ್ಥಿರತೆ ತಂದುಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ’ ಹೇಳಿದರು

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ದೊಡ್ಡನಗೌಡ ಪಾಟೀಲ, ಸಂಸದ ಸಂಗಣ್ಣ ಕರಡಿ, ಮಾಜಿ ಶಾಸಕ ಕೆ.ಶರಣಪ್ಪ, ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ ಮಾತನಾಡಿದರು.

ನಂತರ ಗ್ರಾಮ ಪಂಚಾಯಿತಿಗಳ ಬಿಜೆಪಿ ಬೆಂಬಲಿತ ಸದಸ್ಯರು, ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು.

ಮಾಜಿ ಶಾಸಕರಾದ ಪ್ರತಾಪಗೌಡ ಪಾಟೀಲ್, ನೇಮಿರಾಜ ನಾಯಕ, ಸಿದ್ದೇಶ ಯಾದವ, ಜಿಲ್ಲಾ
ಪಂಚಾಯಿತಿ ಸದಸ್ಯ ಕೆ.ಮಹೇಶ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಸವರಾಜ ಹಳ್ಳೂರು, ಪುರಸಭೆ ಅಧ್ಯಕ್ಷ ಜಿ.ಕೆ.ಹಿರೇಮಠ, ಬಿಜೆಪಿ ಮುಖಂಡ ಅಮರೇಶ ಕರಡಿ, ನವೀನ ಗುಳಗಣ್ಣನವರ, ವಿನಯಕುಮಾರ ಮೇಲಿನಮನಿ, ಮಲ್ಲಣ್ಣ ಪಲ್ಲೇದ, ಈಶಪ್ಪ ಹಿರೇಮನಿ, ಶಂಕರ ಕರಪಡಿ ಇದ್ದರು.

ಬಸವರಾಜ ಹಳ್ಳೂರು ಸ್ವಾಗತಿಸಿದರು. ಚಂದ್ರಕಾಂತ ವಡಗೇರಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT