ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ಹಿತ ಕಾಯುವುದರಿಂದ ಸಾರ್ಥಕತೆ: ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ

Last Updated 15 ನವೆಂಬರ್ 2021, 2:56 IST
ಅಕ್ಷರ ಗಾತ್ರ

ಕುಷ್ಟಗಿ: ‘ಕ್ಷೇತ್ರ ಯಾವುದಾಗಿದ್ದರೂ ಬದುಕಿನಲ್ಲಿ ಸಿಗುವ ಅವಕಾಶಗಳನ್ನು ಸದ್ಬಳಕೆ ಮಾಡಿ, ಸಮಾಜದ ಹಿತ ಕಾಯುವ ಕೆಲಸದಲ್ಲೇ ಬದುಕಿನ ಸಾರ್ಥಕತೆ ಕಾಣಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ ಹೇಳಿದರು.

ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಪ್ರಧಾನ ಎಂಜಿನಿಯರ್ ಪ್ರಭಾಕರ ಚಿಣಿ ಅವರಿಗೆ ಅವರ ಅಭಿಮಾನಿಗಳು ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸರ್ಕಾರದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರಿಗೂ ಸಮಾಜಮುಖಿಯಾಗಿ ಕೆಲಸ ಮಾಡುವ ಬಹುದೊಡ್ಡ ಜವಾಬ್ದಾರಿ ಇರುತ್ತದೆ. ಜೀವನದುದ್ದಕ್ಕೂ ಗಳಿಸಿದ ಆಸ್ತಿ, ಅಂತಸ್ತು ನಮ್ಮ ಹಿಂದೆ ಬರುವುದಿಲ್ಲ. ಬದುಕಿರುವಾಗ ಮಾಡಿದ ಕೆಲಸ ಜನಮಾನಸದಲ್ಲಿ ಉಳಿಯುತ್ತವೆ. ಇದರ ಅರ್ಥ ತಿಳಿದು ಜೀವನ ನಡೆಸಬೇಕು’ ಎಂದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ‘ಸೇವೆಯಲ್ಲಿದ್ದಾಗ ಪ್ರಭಾಕರ ಚಿಣಿ ಅವರು ಜಿಲ್ಲೆಯ ಅಭಿವೃದ್ಧಿ ವಿಷಯದಲ್ಲಿ ಮುತುವರ್ಜಿ ವಹಿಸಿದ್ದನ್ನು ಕಾಣಬಹುದು. ಕೊಪ್ಪಳ ಏತ ನೀರಾವರಿ ಯೋಜನೆ ಅನುಷ್ಠಾನದಲ್ಲಿ ಚಿಣಿ ಅವರ ಪಾತ್ರವೂ ಮುಖ್ಯ. ನಿವೃತ್ತಿಯ ನಂತರವೂ ಅವರ ಹೊಸ ಕಲ್ಪನೆಗಳು ಸಮಾಜ ಸೇವೆ ಮೂಲಕ ಸಾಕಾರಗೊಳ್ಳಬೇಕು’ ಎಂದರು.

ನಿವೃತ್ತ ಐಎಎಸ್‌ ಅಧಿಕಾರಿ ಕೆ.ಶಿವರಾಮು ಮಾತನಾಡಿ,‘ಯಾವುದೇ ಸಮುದಾಯ ಸಂಘಟನೆಗೊಳ್ಳದಿದ್ದರೆ ಯಾವುದೇ ರಾಜಕೀಯ ಪಕ್ಷಗಳೂ ನಮ್ಮತ್ತ ಹೊರಳಿ ನೋಡುವುದಿಲ್ಲ. ರಾಜಕೀಯ ಪಕ್ಷಗಳು ಗುರುತಿಸುವಂತಾಗಲು ಉಪ್ಪಾರ ಸಮುದಾಯವೂ ತನ್ನ ಒಗ್ಗಟ್ಟನ್ನು ಪ್ರದರ್ಶಿಸುವ ಅಗತ್ಯವಿದೆ’ ಎಂದರು.

ಪ್ರಭಾಕರ ಚಿಣಿ ಮಾತನಾಡಿ, ‘ಸರಣಿ ಚೆಕ್‌ಡ್ಯಾಂ ಯೋಜನೆ ಜಿಲ್ಲೆಯ ಕೈತಪ್ಪಿಹೋಗುವ ಸ್ಥಿತಿಯಲ್ಲಿದ್ದಾಗ ಅದರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದೆ. ಕುಷ್ಟಗಿ ತಾಲ್ಲೂಕಿನಲ್ಲಿ ಹಾಲಿ, ಮಾಜಿ ಶಾಸಕರು ಅಭಿವೃದ್ಧಿ ವಿಷಯದಲ್ಲಿ ಅಡ್ಡಿಪಡಿಸದೆ ಸಹಕರಿಸಿದರು. ಸಣ್ಣಪುಟ್ಟ ಸಮುದಾಯಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕು’ ಎಂದರು.

‘ನಿವೃತ್ತಿಯಾದ ತಕ್ಷಣ ಬದುಕು ಮುಗಿಯದು. ಕೊಪ್ಪಳ ಜಿಲ್ಲೆ ಮತ್ತು ಕುಷ್ಟಗಿ ತಾಲ್ಲೂಕಿನ ಜನರ ಮತ್ತು ಪಟ್ಟಣದ ಅಭಿವೃದ್ಧಿ ವಿಷಯದಲ್ಲಿ ಸ್ವತಃ ಪಾಲ್ಗೊಳ್ಳಬೇಕು ಎಂಬ ಹಂಬಲ ಇದೆ. ಸಾರ್ವಜನಿಕ ಬದುಕಿಗೆ ಬರುವ ಆಸಕ್ತಿ ಇದೆ’ ಎಂದರು. ಬಸವಕಲ್ಯಾಣ ಅನುಭವ ಮಂಟಪದ ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಚಾಮರಾಜನಗರ ಶಾಸಕ ಸಿ.ಪುಟ್ಟರಂಗಶೆಟ್ಟಿ, ಮಾಜಿ ಶಾಸಕರಾದ ದೊಡ್ಡನಗೌಡ ಪಾಟೀಲ, ಹಸನಸಾಬ್ ದೋಟಿಹಾಳ, ಗುತ್ತಿಗೆದಾರ ಎಸ್‌.ಆರ್‌.ನವಲಿಹಿರೇಮಠ, ವಕೀಲ ಹೊಳಿಯಪ್ಪ ಕುರಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಭಿಮಾನಿಗಳು ಪ್ರಭಾಕರ ಚಿಣಿ ಅವರನ್ನು ಸನ್ಮಾನಿಸಿದರು.

ಮಾಜಿ ಶಾಸಕ ಕೆ.ಶರಣಪ್ಪ, ಚಂದ್ರಕಲಾ ಚಿಣಿ, ಯು.ಯಂಕೋಬ, ಸಿ.ಎಂ.ಹಿರೇಮಠ, ದೇವೇಂದ್ರಪ್ಪ ಬಳೂಟಗಿ, ಯಲ್ಲಪ್ಪ ಗದ್ದಿ, ಶಿವಶಂಕರಗೌಡ ಪಾಟೀಲ, ಎಸ್‌.ಎಚ್‌.ಹಿರೇಮಠ, ಚಂದ್ರಶೇಖರ ನಾಲತ್ವಾಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT