ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳದಲ್ಲಿ ಗೊಬ್ಬರ ಅಭಾವ: ಖರೀದಿಗಾಗಿ ರೈತರ ನಡುವೆ ಮಾರಾಮಾರಿ

Last Updated 19 ಜುಲೈ 2022, 16:06 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ಯೂರಿಯಾ ಗೊಬ್ಬರದ ಅಭಾವ ಭಾರಿ ಪ್ರಮಾಣದಲ್ಲಿ ತಲೆತೋರಿದ್ದು, ಇರುವ ಅಲ್ಪ ಗೊಬ್ಬರ ಖರೀದಿಗಾಗಿ ರೈತರ ನಡುವೆ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಕೇಂದ್ರದಲ್ಲಿ ಮಾರಾಮಾರಿ ನಡೆದಿದೆ.

ಸೋಮವಾರ ಮಾತಿಗೆ ಮಾತು ಬೆಳೆದು ರೈತರಿಬ್ಬರ ನಡುವೆ ಗಲಾಟೆ ನಡೆದಿದೆ. ರಕ್ತಬರುವಂತೆ ಪರಸ್ಪರ ರೈತರೇ ಹೊಡೆದಾಡಿಕೊಂಡ ವಿಡಿಯೊ ಮಂಗಳವಾರ ಸಾಮಾಜಿಕ ತಾಣಗಳಲ್ಲಿ ಹರಿದಾಡಿದೆ. ಇಬ್ಬರು ರೈತರ ನಡುವೆ ನಡೆದ ಗಲಾಟೆಯಲ್ಲಿ ಒಬ್ಬ ರೈತನ ಕಣ್ಣಿನ ಮೇಲ್ಬಾಗದಲ್ಲಿ ಗಾಯವಾಗಿದ್ದು, ರಕ್ತ ಸುರಿಯುತ್ತಿರುವ ಚಿತ್ರಣ ವಿಡಿಯೊದಲ್ಲಿದೆ.

ಗೊಬ್ಬರ ಖರೀದಿಗಾಗಿ ಜಿಲ್ಲೆಯ ವಿವಿಧ ತಾಲ್ಲೂಕು ಮತ್ತು ಹೋಬಳಿಗಳಲ್ಲಿ ರೈತರು ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಮಹಿಳೆಯರು ಚಿಕ್ಕ ಮಕ್ಕಳನ್ನು ಕರೆದುಕೊಂಡು ಸರತಿಯಾಗಿ ಕಾಯುತ್ತಿರುವ ಚಿತ್ರಣ ಸಾಮಾನ್ಯವಾಗಿದೆ.

ಜಿಲ್ಲೆಯಲ್ಲಿ ಉತ್ತಮ ಮಳೆಯಾದ ಕಾರಣ ಯೂರಿಯಾ ಹಾಗೂ ಡಿಎಪಿ ಗೊಬ್ಬರಕ್ಕಾಗಿ ಸಾಕಷ್ಟು ಪ್ರಮಾಣದಲ್ಲಿ ಬೇಡಿಕೆ ಹೆಚ್ಚಾಗಿದೆ. ರೈತರು ಕೃಷಿ ಸಚಿವ ಬಿ.ಸಿ. ಪಾಟೀಲ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ರೈತ ಅಂದಪ್ಪ ಕೋಳೂರು ’ಎಲ್ಲಿಯೂ ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಕೃತಕ ಅಭಾವ ಸೃಷ್ಟಿ ಮಾಡಲಾಗಿದೆ. ಈ ಸಮಸ್ಯೆ ಕುರಿತು ಸ್ಥಳೀಯ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸ್ಪಂದಿಸಿಲ್ಲ. ಬಿ.ಸಿ. ಪಾಟೀಲರಿಗೆ ಫೋನ್‌ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ. ಮುಖ್ಯಮಂತ್ರಿ ಹಾಗೂ ಕೃಷಿ ಸಚಿವರು ಉತ್ತರ ಕರ್ನಾಟಕ ಭಾಗದವರೇ ಆದರೂ ಈ ಭಾಗದ ರೈತರಿಗೆ ಅನುಕೂಲವಾಗಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಗೊಬ್ಬರದ ಕೊರತೆಯಿಲ್ಲ ಎಂದು ಸಚಿವರು ಮತ್ತು ಅಧಿಕಾರಿಗಳು ಹೇಳುತ್ತಿದ್ದಾರೆ. ಹಾಗಾದರೆ ಗೊಬ್ಬರ ಎಲ್ಲಿ ಹೋಯಿತು. ಗೊಬ್ಬರದ ಸಲುವಾಗಿ ಕೂಲಿ ಕೆಲಸ ಬಿಟ್ಟು ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ’ ಎಂದರು.

‘ಬುಧವಾರ ಬರಲಿದೆ ಗೊಬ್ಬರ‘

ಭತ್ತ ನಾಟಿ ಜೋರಾಗಿ ಆರಂಭವಾಗಿದ್ದು, ದಿಢೀರನೇ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿರುವ ಕಾರಣ ಸಮಸ್ಯೆಯಾಗಿದೆ. ಬುಧವಾರ ಜಿಲ್ಲೆಗೆ 1,250 ಮೆಟ್ರಿಕ್‌ ಟನ್‌ ಗೊಬ್ಬರ ಬರಲಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ವಿ. ತಿಳಿಸಿದರು. ಇದರಲ್ಲಿ ಕೊಪ್ಪಳ ನಗರಕ್ಕೆ 200 ಮೆಟ್ರಿಕ್‌ ಟನ್‌ ಮೀಸಲಿಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT