ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಅನ್ನಕ್ಕೆ ಕೈ ಹಾಕುವವರ ವಿರುದ್ಧ ಹೋರಾಟ: ವಿಶ್ವನಾಥ್‌ ಆಕ್ರೋಶ

ಕುದುರಿಮೋತಿಯಲ್ಲಿ ಬೇಡ, ಬುಡ್ಗ ಜಂಗಮರ ರಾಜ್ಯಮಟ್ಟದ ಸಮಾವೇಶ:
Last Updated 10 ಆಗಸ್ಟ್ 2022, 5:00 IST
ಅಕ್ಷರ ಗಾತ್ರ

ಕುದುರಿಮೋತಿ (ಕೊಪ್ಪಳ):‘ಪರಿಶಿಷ್ಟರಲ್ಲದ್ದರೂ ವೀರಶೈವ ಲಿಂಗಾಯತ ಜಂಗಮರು ಬೇಡ ಜಂಗಮ ಜಾತಿ ಪ್ರಮಾಣಪತ್ರ ಪಡೆಯಲು ಆ ಸಮಾಜದವರು ನಡೆಸುತ್ತಿರುವ ಹೋರಾಟ ಸರಿಯಲ್ಲ. ನಮ್ಮ ತಟ್ಟೆಯ ಅನ್ನಕ್ಕೆ ಕೈ ಹಾಕುವವರ ವಿರುದ್ಧ ನಿರಂತರ ಹೋರಾಟ ಮಾಡಲಾಗುವುದು’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಎಚ್ಚರಿಕೆ ನೀಡಿದರು.

ಕುಕನೂರು ತಾಲ್ಲೂಕಿನ ಕುದುರಿಮೋತಿ ಗ್ರಾಮದಲ್ಲಿ ಮಂಗಳವಾರ ನಡೆದ ಕುದುರೆಮೋತಿ ಬಿಡಾರು ಆಚಾರಂ ಅಲೆಮಾರಿ ಬೇಡ, ಬುಡ್ಗ, ಜಂಗಮರ ರಾಜ್ಯಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು ‘ತಮ್ಮದಲ್ಲದ ಹಕ್ಕು ಕೇಳುವವರು ಬಸವಣ್ಣನವರ ವಿರೋಧಿಗಳು. ಅಲೆಮಾರಿಗಳು ತಿನ್ನುವ ಆಹಾರವನ್ನು ಅಖಿಲ ಕರ್ನಾಟಕ ಬೇಡಜಂಗಮ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಡಿ. ಹಿರೇಮಠ ತಿಂದು ತೋರಿಸಲಿ. ಅಲೆಮಾರಿಗಳಂತೆ ನಿಕೃಷ್ಷ ಬದುಕು ನಡೆಸಲಿ’ ಎಂದು ಸವಾಲು ಹಾಕಿದರು.

‘ಅಲೆಮಾರಿಗಳಿಗೆ ಸರ್ಕಾರ ಸುಭದ್ರ ಮನೆಗಳನ್ನು ಕಟ್ಟಿ ಬೀಗದ ಕೈ ಕೊಡಬೇಕು. ಶಿಕ್ಷಣ, ಉದ್ಯೋಗದ ಅವಕಾಶಗಳನ್ನು ಕಲ್ಪಿಸಬೇಕು. ವಸತಿ ಸಚಿವ ವಿ. ಸೋಮಣ್ಣ ಅಲೆಮಾರಿ ಸಮುದಾಯಕ್ಕೆ ಐದು ಸಾವಿರ ಮನೆಗಳನ್ನು ಒದಗಿಸಬೇಕು’ ಎಂದು ಆಗ್ರಹಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ ಹಾಲಪ್ಪ ಆಚಾರ್‌ ಮಾತನಾಡಿ ‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ಎಲ್ಲಾ ಸಮುದಾಯದವರಿಗೆ ನ್ಯಾಯ ಒದಗಿಸಿವೆ ಎಂದು ಹೇಳಲು ಆಗದು. ಸಂವಿಧಾನದ ಪ್ರಕಾರ ತಮ್ಮ ಹಕ್ಕುಗಳನ್ನು ಪ‍ಡೆಯಲು ಎಲ್ಲರೂ ಅರ್ಹರು. ಅಲೆಮಾರಿ ಸಮುದಾಯಕ್ಕೆ ಸಿಗಬೇಕಾದ ಹಕ್ಕುಗಳನ್ನು ಸರ್ಕಾರದಿಂದ ಕೊಡಿಸಲು ಬದ್ಧನಾಗಿದ್ದೇನೆ’ ಎಂದರು.

ಅಖಿಲ ಭಾರತ ಬೇಡ, ಬುಡ್ಗ ಜಂಗಮ್‌ ಒಕ್ಕೂಟದ (ಹೈದರಾಬಾದ್) ರಾಷ್ಟ್ರೀಯ ಕಾರ್ಯದರ್ಶಿ ಬಾಲಗುರುಮೂರ್ತಿ ‘ಪಂಚಪೀಠಗಳನ್ನು ಹೊಂದಿರುವ ವೀರಶೈವ ಲಿಂಗಾಯತ ಜಂಗಮರು ನಮ್ಮ ಅನ್ನದ ತಟ್ಟೆಗೆ ಕೈ ಹಾಕಿದ್ದಾರೆ. ಆಂಧ್ರ ಹಾಗೂ ತೆಲಂಗಾಣದಲ್ಲಿ ಒಬ್ಬರೂ ಕರ್ನಾಟಕದವರ ಹಾಗೆ ನಮ್ಮ ಹಕ್ಕು ಕಸಿದುಕೊಂಡಿಲ್ಲ. ನಮ್ಮಲ್ಲಿ ಗುರುತು ಪತ್ರವಿಲ್ಲ, ಆಧಾರ್‌ ಕಾರ್ಡ್‌ ಕೊಟ್ಟಿಲ್ಲ. ನಿಡುಮಾಮಿಡಿ ಸ್ವಾಮೀಜಿ ಕೂಡ ವೀರಶೈವ ಲಿಂಗಾಯತ ಜಂಗಮರ ಪರ ಮಾತನಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ಹೈಕೋರ್ಟ್‌ ವಕೀಲ ಎಲ್‌.ಸಿ. ಬಕ್ಕಾಯಿ, ಸಾಮಾಜಿಕ ಕಾರ್ಯಕರ್ತ ವಾದಿರಾಜ್‌, ಡಾ. ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ನಿರ್ದೇಶಕ ಎಂ. ಸುರೇಶಕುಮಾರ್‌, ಅಲೆಮಾರಿ ಅಭಿವೃದ್ಧಿ ಕೋಶ ರಾಜ್ಯ ನೋಡಲ್‌ ಅಧಿಕಾರಿ ಜಿ.ಪಿ. ದೇವರಾಜ್, ವಿವಿಧ ಸಂಘಟನೆಗಳ ಮುಖಂಡರಾದ ಮೋಹನ್‌ ರಾಜ್‌, ಶ್ರೀಧರ ಕಲಿವೀರ, ಹನುಮಂತಪ್ಪ ಕಾಕರಗಲ್‌, ಗ್ರಾಮ ಪಂಚಾಯಿತಿ ಅಧ್ಯಕ್ಷ ದುರ್ಗಮ್ಮ ದೂಪಮ್‌ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

‘3,500 ಜನರಿಗೆ ಹಕ್ಕುಪತ್ರ ವಿತರಣೆಗೆ ಸಿದ್ಧತೆ‘
ಕುದುರಿಮೋತಿ (ಕೊಪ್ಪಳ):
‘ಅಲೆಮಾರಿಗಳಿಗೆ 10,500 ಮನೆಗಳನ್ನು ಕೊಡಬೇಕು ಎನ್ನುವ ಬೇಡಿಕೆ ಬಂದಿದೆ. ರಾಜೀವ್‌ ಗಾಂಧಿ ವಸತಿ ಯೋಜನೆಯಡಿ ₹200 ಕೋಟಿಯಲ್ಲಿ ಇದಕ್ಕಾಗಿ ಯೋಜನೆ ರೂಪಿಸಲಾಗಿದೆ. 3,500 ಜನರಿಗೆ ಹಕ್ಕುಪತ್ರ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ಎಂದು ಸಮಾಜ ಕಲ್ಯಾಣ ಇಲಾಖೆ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರ ಹೇಳಿದರು.

‘ಅಲೆಮಾರಿಗಳು ನಡೆಸುತ್ತಿರುವ ಜೀವನ, ಪದ್ಧತಿ, ಆಚಾರ ವಿಚಾರಗಳನ್ನು ನೋಡಿಕೊಂಡು ಪ್ರಮಾಣ ಪತ್ರ ಕೊಡಿ ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ. 101 ಸಮುದಾಯಗಳಲ್ಲಿ ಬರುವ ಅವರ ಬದುಕಿನ ಬುಡಕಟ್ಟಿನ ಸಂಪ್ರದಾಯಗಳನ್ನು ನೋಡುವಂತೆ ಹೇಳಲಾಗಿದೆ‘ ಎಂದರು.

‘ರಾಜ್ಯದಲ್ಲಿ ಆರು ಅಲೆಮಾರಿ ವಸತಿ ಶಾಲೆಗಳಿದ್ದು, ಕುದುರಿಮೋತಿಯಲ್ಲಿಯೂ ಶಾಲೆ ಆರಂಭಿಸಿ ಎಂದು ಬೇಡಿಕೆ ಇಟ್ಟಿದ್ದಾರೆ. ಇಲ್ಲಿಗೂ ಶಾಲೆ ಮಂಜೂರು ಮಾಡಲಾಗುವುದು’ ಎಂದು ತಿಳಿಸಿದರು.

*
ಅಲೆಮಾರಿಗಳಿಗೆ ಪ್ರತಿ ಊರಿನಲ್ಲಿಯೂ ಪ್ರತ್ಯೇಕ ಕಾಲೊನಿ ಕಟ್ಟಿಕೊಡಬೇಕು. ನಮ್ಮ ಸಮಾಜಕ್ಕೆ ಕುದುರಿಮೋತಿಯಲ್ಲಿ ಶಾಲೆ ನಿರ್ಮಿಸಬೇಕು.
-ಸಣ್ಣಮಾರೆಪ್ಪ, ರಾಜ್ಯ ಬೇಡ, ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ

*
ಆಗಸ್ಟ್‌ 31ರಂದು ಸರ್ಕಾರದ ವತಿಯಿಂದ ಅಲೆಮಾರಿಗಳ ಸಮಾವೇಶ ಮಾಡಿ 3,500 ಜನರಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುವುದು.
-ಕೋಟ ಶ್ರೀನಿವಾಸ ಪೂಜಾರಿ, ಸಮಾಜ ಕಲ್ಯಾಣ ಇಲಾಖೆ ಖಾತೆ ಸಚಿವ

ಯಾವ ಪಕ್ಷದವರೇ ಇರಲಿ. ನನಗೆ ಸರಿ ಅನ್ನಿಸದೇ ಇದ್ದರೆ ಅದನ್ನು ವಿರೋಧಿಸುತ್ತೇನೆ. ನನ್ನ ಅಭಿಪ್ರಾಯ ಹೇಳಿದ ಮಾತ್ರಕ್ಕೆ ಪಕ್ಷ ವಿರೋಧಿ ಅಂದುಕೊಳ್ಳುವುದು ಬೇಕಿಲ್ಲ.
ಎಚ್‌. ವಿಶ್ವನಾಥ, ವಿಧಾನಪರಿಷತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT