ಶುಕ್ರವಾರ, ಅಕ್ಟೋಬರ್ 29, 2021
20 °C
ನರೇಗಾ: ಸಾರ್ವಜನಿಕರಿಗೆ ಇದ್ದೂರಲ್ಲೇ ದುಡಿಮೆಗೆ ಅವಕಾಶ

ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಸ್ವಂತ ಊರಿನಲ್ಲೆ ದುಡಿಯಲು ಅವಕಾಶವಿದ್ದು, ಸರ್ಕಾರದ ಯೋಜನೆಗಳನ್ನು ಪ್ರತಿಯೊಬ್ಬರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ತಾಲ್ಲೂಕಿನ ಬಸಾಪಟ್ಟಣ ಗ್ರಾ.ಪಂ ವ್ಯಾಪ್ತಿಯ ಸೂರ್ಯನಾಯಕನ ತಾಂಡಾದಲ್ಲಿ ಮಂಗಳವಾರ ಎನ್.ಆರ್.ಎಲ್.ಎಂ (ಸಂಜೀವಿನಿ) ವತಿಯಿಂದ ನರೇಗಾ ಅಡಿ ಅಭಿವೃದ್ಧಿ ಪಡಿಸಿದ ಕೆರೆಯಲ್ಲಿ ಮೀನು ಸಾಕಾಣಿಗೆ ಮಾಡಲು ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗಂಗಾವತಿ ನಗರದ ಕೂಗಳತೆ ದೂರದಲ್ಲಿರುವ ಸೂರ್ಯನಾಯಕನ ತಾಂಡಾ ಕೆರೆಯು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಕೆರೆಯಲ್ಲಿ ನೀರು ತುಂಬಿರುವುದರಿಂದ ಕೆರೆಯ ಸೌಂದರ್ಯವು ಹೆಚ್ಚಿದ್ದು, ಪ್ರವಾಸಿ ತಾಣವಾಗಿ ಮಾರ್ಪಟ್ಟಿರುವುದು ಖುಷಿಯ ವಿಷಯ ಎಂದರು.

ಇದೀಗ, ಎನ್.ಆರ್.ಎಲ್.ಎಂ (ಸಂಜೀವಿನಿ) ಮಿಷನ್ 35 ಹಾಗೂ ಮೀನುಗಾರಿಕೆ ಇಲಾಖೆಯ ಸಹಯೋಗದಲ್ಲಿ ಕೆರೆಯಲ್ಲಿ ಮೀನು ಸಾಕಾಣಿಕೆ ಮಾಡಲು ನಿರ್ಧರಿಸಿದ್ದು, ಇಂದು 20 ಸಾವಿರ ಮೀನಿನ ಮರಿಗಳನ್ನು ಕೆರೆಗೆ ಬಿಡಲಾಗಿದೆ. ಇದರ ಸಾಕಾಣಿಗೆ ಜವಾಬ್ದಾರಿಯನ್ನು, ಸ್ವಸಹಾಯ ಸಂಘದ ಸದಸ್ಯರುಗಳಿಗೆ ವಹಿಸಿದ್ದು, ಮೀನು ಸಾಕಾಣಿಕೆ ಮೂಲಕ ಅವರಿಗೆ ಉದ್ಯೋಗವನ್ನು ಕಲ್ಪಿಸಲಾಗಿದೆ ಎಂದರು.

ನಂತರ ತಾ.ಪಂ ಕಾರ್ಯನಿರ್ವಾಹಕ ಡಾ.ಡಿ.ಮೋಹನ್ ಮಾತನಾಡಿ, ಕಳೆದ ತಿಂಗಳು ಮಹಿಳಾ ಕಾಯಕೋತ್ಸವ ಅಭಿಯಾನ ಹಾಗೂ ನರೇಗಾದಡಿ ಕೂಲಿಕಾರರು ಕೆರೆಯ ಹೂಳನ್ನು ತೆಗೆದಿದ್ದರಿಂದ ಕೆರೆಯಲ್ಲಿ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ. ಇದರಿಂದ ಇದೀಗ ಕೆರೆಯಲ್ಲಿ ಮೀನು ಸಾಕಾಣಿಕೆಗೆ ಅವಕಾಶ ನೀಡಿದ್ದು, ಸ್ವಸಹಾಯ ಸಂಘದ ಸದಸ್ಯರಿಗೆ ಸ್ವಾವಲಂಬಿ ಜೀವನ ನಡೆಸಲು ಅನುಕೂಲ ಕಲ್ಪಿಸಲಾಗಿದೆ ಎಂದರು.

ಈ ವೇಳೆ ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಆನಂದ ಬಿ.ಪಾಟೀಲ, ಬಸಾಪಟ್ಟಣ ಪಿಡಿಒ ಇಂದಿರಾ, ಸದಸ್ಯರಾದ ಗೌರಮ್ಮ, ಶಂಕರ ನಾಯಕ, ಕನಕರಾಜ ನಾಯಕ, ಸಂಜೀವಿನಿ ಸಿಬ್ಬಂದಿ ಮಲ್ಲಿಕಾರ್ಜುನ, ಪ್ರಮುಖರಾದ ರಾಘವೇಂದ್ರ, ಹುಲಿಗೆಮ್ಮ, ಒಕ್ಕೂಟದ ಪದಾಧಿಕಾರಿಗಳು ಹಾಗೂ ಸ್ವಸಹಾಯ ಸಂಘದ ಸದಸ್ಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು