ಸೋಮವಾರ, ಆಗಸ್ಟ್ 3, 2020
23 °C
ಭೂಸ್ವಾಧೀನಕ್ಕೆ ವಿರೋಧ: ಬರ ನಿರ್ವಹಣೆಯಲ್ಲಿ ವಿಫಲ

ನಾಲ್ಕು ತಾಸು ಹೆದ್ದಾರಿ ತಡೆದು ರೈತರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ರಾಜ್ಯ ಸರ್ಕಾರ ಹೊಸದಾಗಿ ತಂದಿರುವ ಭೂ ಸ್ವಾಧೀನ ಕಾಯ್ದೆ ರದ್ದುಗೊಳಿಸಬೇಕು ಮತ್ತು ಬರಗಾಲ ಕಾಮಗಾರಿ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಸೋಮವಾರ ಮುನಿರಾಬಾದ್ ಸಮೀಪ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಹಿಟ್ನಾಳ ಟೋಲ್ ಅನ್ನು ಬೆಳಿಗ್ಗೆ 11 ಗಂಟೆಯಿಂದ ಬಂದ್ ಮಾಡಲಾಗಿತ್ತು. ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿದ್ದರೂ ಸುತ್ತಿ, ಬಳಸಿಕೊಂಡು ಹೋದವು. ಮಾಹಿತಿ ಇರದ ಪ್ರಯಾಣಿಕರು ಪರದಾಡಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ನಜೀರಸಾಬ್ ಮೂಲಿಮನಿ ಮಾತನಾಡಿ, ರಾಜ್ಯ ಸತತ ಬರಗಾಲ ಪೀಡಿತವಾಗುತ್ತಿದ್ದು, ದೇಶದಲ್ಲಿ ಬರಗಾಲ ಪೀಡಿತ ಪ್ರದೇಶದಲ್ಲಿ 2ನೇ ಸ್ಥಾನದಲ್ಲಿ ಇದೆ. ತೀವ್ರ ಬಿಸಿಲು, ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಕೊರತೆ ಮುಂತಾದ ಸಮಸ್ಯೆಗಳಿದ್ದರೂ ರಾಜ್ಯ ಸರ್ಕಾರ ಸಮರ್ಪಕ ಬರಗಾಲ ಕಾಮಗಾರಿ ಕೈಗೊಳ್ಳದೇ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.

ದೇಶದಲ್ಲಿ 2014ನೇ ಸಾಲಿನ ಮೊದಲು ಇದ್ದ ಭೂಸ್ವಾಧೀನ ಕಾಯ್ದೆಗೆ ಬದಲಾವಣೆ ತಂದು ರಿಯಲ್ ಎಸ್ಟೇಟ್ ಮತ್ತು ಎಸ್‌ಇಜೆಡ್ ಮೂಲಕ ರೈತರ ಜಮೀನು ಕೊಳ್ಳೆ ಹೊಡೆಯಲು ಅವಕಾಶ ನೀಡುತ್ತಿತ್ತು. ಕೇಂದ್ರದಲ್ಲಿ ಇದ್ದ ಯುಪಿಎ ಸರ್ಕಾರ ಭೂಸ್ವಾಧೀನ ಕಾಯ್ದೆ ಜಾರಿಗೆ ತಂದು ರೈತರ ಜಮೀನಿಗೆ ನಿಗದಿ ಪಡಿಸುವ ಮೊತ್ತದ ನಾಲ್ಕುಪಟ್ಟು ಪರಿಹಾರ ನೀಡಬೇಕು ಎಂದು ಹೇಳಿತ್ತು. ನಗರದ ಪ್ರದೇಶದ ವ್ಯಾಪ್ತಿಯ ಜಮೀನುಗಳಿಗೆ ಎರಡು ಪಟ್ಟು ನೀಡಬೇಕು ಎಂಬ ಕಾಯ್ದೆ ಜಾರಿಯಲ್ಲಿತ್ತು. ಆದರೆ ಪ್ರಸ್ತುತ ರಾಜ್ಯದ ಸಮ್ಮಿಶ್ರ ಸರ್ಕಾರ ಕಾಯ್ದೆಗೆ ತಿದ್ದುಪಡಿ ತರಲು ಹೊರಡಿರುವುದು ಖಂಡನೀಯ ಎಂದರು.

ರೈತರ ಜಮೀನು ಕೊಳ್ಳೆ ಹೊಡೆಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಯೋಜನೆ ರೂಪಿಸಿವೆ. ಜಿಲ್ಲಾಧಿಕಾರಿಗಳಿಗೆ ಈ ಅಧಿಕಾರವನ್ನು ನೀಡಿ ತಮ್ಮ ಅಕ್ರಮ ನಡೆಸಿಕೊಳ್ಳುವಲ್ಲಿ ಸಹಾಯಕವಾಗುವಂತೆ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವುದು ನಾಚಿಕೆಗೇಡು. ನಾವು ಯಾವುದೇ ಕಾರಣಕ್ಕೂ ಈ ಕಾಯ್ದೆಗೆ ತಿದ್ದುಪಡಿ ತರವುದನ್ನು ವಿರೋಧಿಸುತ್ತೇವೆ ಎಂದು ಹೇಳಿದರು.

ಸರ್ಕಾರ ರೈತರ ಹೋರಾಟಕ್ಕೆ ಬೆಲೆ ಕೊಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು. ಈ ಕಾಯ್ದೆಗೆ ತಿದ್ದುಪಡಿ ವಿರೋಧಿಸಿ ರಾಜ್ಯದ ಎಲ್ಲ ಹೆದ್ದಾರಿ ಮೇಲೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮುಂದಿನ ಅನಾಹುತಕ್ಕೆ ಸರ್ಕಾರವೇ ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರೈತ ಮುಖಂಡ ಹನಮಂತಪ್ಪ ಹೊಳೆಯಾಚೆ ಮಾತನಾಡಿ, ದೇಶಕ್ಕೆ ಅನ್ನ ನೀಡುವ ರೈತನ ಜಮೀನಿಗೆ ಕನ್ನ ಹಾಕುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂವರು ಕಳ್ಳರು. ಈ ಕಾಯ್ದೆಯನ್ನು ಉಗ್ರವಾಗಿ ವಿರೋಧಿಸಬೇಕಾದ ಬಿಜೆಪಿ ನಾಯಕ ಬಿ.ಎಸ್‌.ಯಡಿಯೂರಪ್ಪ ಬರ ಅಧ್ಯಯನ ನಡೆಸುತ್ತಿದ್ದಾರೆ. ಇವರ ಕಾಟಾಚಾರದ ರೈತಪರ ಕಾಳಜಿ ಎಷ್ಟಿದೆ ಎಂಬುವುದು ಅರಿವು ಆಗುತ್ತದೆ ಎಂದು ಟೀಕಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು