ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿ ಭೇಟಿಯಾಗಿದ್ದು ಅಮೃತ ಘಳಿಗೆ: ಗೂಳರಡ್ಡಿ ಬಸರಡ್ಡಿ ಮೂಲಿಮನಿ

ಹೋರಾಟದ ದಿನಗಳನ್ನು ನೆನಪಿಸಿಕೊಂಡ ಮೂಲಿಮನಿ
Last Updated 11 ಆಗಸ್ಟ್ 2022, 6:14 IST
ಅಕ್ಷರ ಗಾತ್ರ

ಕೊಪ್ಪಳ: ‘ಸ್ವಾತಂತ್ರ್ಯ ಹೋರಾಟದ ಏಳುಬೀಳುಗಳು, ಸೋಲು, ಗೆಲುವುಗಳ ಹೀಗೆ ಅನೇಕ ವಿಷಯಗಳನ್ನು ಕೇಳಿದ್ದೇನೆ. ಕೆಲವನ್ನು ಕಂಡಿದ್ದೇನೆ. ಇನ್ನೂ ಹಲವು ಸಂಗತಿಗಳನ್ನು ಸ್ವತಃ ಅನುಭವಿಸಿದ್ದೇವೆ. ಇವೆಲ್ಲವುಗಳಿಗಿಂತ ಹೆಚ್ಚಾಗಿ 1934ರಲ್ಲಿ ಭಾನಾಪುರ ರೈಲ್ವೆ ನಿಲ್ದಾಣದಲ್ಲಿ ಮಹಾತ್ಮ ಗಾಂಧಿ ಅವರನ್ನು ಭೇಟಿಯಾಗಿದ್ದೇ ನನ್ನ ಬದುಕಿನ ಅಮೃತ ಗಳಿಗೆ...‘

ಜಿಲ್ಲೆಯ ಕುಕನೂರು ತಾಲ್ಲೂಕಿನ ತಳಕಲ್‌ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರಗೂಳರಡ್ಡಿ ಬಸರಡ್ಡಿ ಮೂಲಿಮನಿ ಅವರ ಮಾತುಗಳು ಇವು.

99 ವರ್ಷ ಪೂರ್ಣಗೊಳಿಸಿ, ಆರು ತಿಂಗಳು ಕಳೆದರೆ 100ನೇ ವರ್ಷಕ್ಕೆ ಪದಾರ್ಪಣೆ ಮಾಡಲಿರುವ ಅವರು ಸ್ವಾತಂತ್ರ್ಯ ಹೋರಾಟದ ಕೆಲ ನೆನಪುಗಳನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು. ತಮ್ಮ ಮಾತಿನ ನಡುವೆ ಶಿವಮೂರ್ತಿ ಸ್ವಾಮಿ ಅಳವಂಡಿ ಅವರನ್ನು ಮೆರೆಯಲಿಲ್ಲ.

ಶಿವಮೂರ್ತಿ ಸ್ವಾಮಿ ಅವರು ನಿಜಾಮರ ವಿರುದ್ಧದ ಹೋರಾಟದಲ್ಲಿ ಭೂಗತ ಚಳವಳಿಗಳ ಮೂಲಕ ಗಮನ ಸೆಳೆದವರು. ಭಾಷಾವಾರು ಪ್ರಾಂತ್ಯಗಳ ರಚನೆಯ ಮಹತ್ವವನ್ನು ಸಾರಿದವರು.

‘ಕೊಪ್ಪಳ, ಅಳವಂಡಿ, ಮುಂಡರಗಿ ಹಾಗೂ ಯಲಬುರ್ಗಾ ಭಾಗದಲ್ಲಿ ಸ್ವತಂತ್ರ್ಯ ಹೋರಾಟಗಾರರ ಜೊತೆ ನಾನೂ ಹೋಗುತ್ತಿದ್ದೆ. ಅದರಲ್ಲಿ ಶಿವಮೂರ್ತಿ ಸ್ವಾಮಿ ಅಗ್ರಗಣ್ಯರು. ಹೋರಾಟದ ಯೋಜನೆಗಳನ್ನು ಜನರಿಗೆ ತಿಳಿಸುವುದು ಕಷ್ಟವಾಗಿತ್ತು. ಊರೂರು ಕಾಲ್ನಡಿಗೆ ಮೂಲಕ ಹೋಗಿ ಸಂದೇಶ ಕೊಡುತ್ತಿದ್ದೆವು’ ಎಂದು ಮೂಲಿಮನಿ ಅವರು ನೆನಪುಗಳನ್ನು ಹಂಚಿಕೊಂಡರು.

‘ಭಾನಾಪುರದಲ್ಲಿ ಗಾಂಧಿ ಅವರನ್ನು ಭೇಟಿಯಾಗಿದ್ದು ಬದುಕಿನ ಅವಿಸ್ಮರಣೀಯ ಕ್ಷಣ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ. ಸಾಕಷ್ಟು ಸುಧಾರಣೆಯಾಗಿದೆ. ಸ್ವತಂತ್ರ್ಯಕ್ಕಾಗಿ ಹೋರಾಡಿದವರನ್ನು ಸರ್ಕಾರ ಗೌರವಯುತವಾಗಿ ನಡೆಸಿಕೊಳ್ಳುತ್ತಿದೆ ಎನ್ನುವುದೂ ನನ್ನಂಥವರಿಗೆ ಹೆಮ್ಮೆಯ ವಿಷಯವೇ‘ ಎಂದು ಸಂಭ್ರಮಪಟ್ಟರು.

ಇಳಿವಯಸ್ಸಾದರೂ ಮೂಲಿಮನಿ ಅವರು ನಿತ್ಯ ಬೆಳಿಗ್ಗೆ ಆರು ಗಂಟೆಗೆ ಎದ್ದು ನಿತ್ಯ ಕನ್ನಡಕವಿಲ್ಲದೇ ಪತ್ರಿಕೆಗಳನ್ನು ಓದುತ್ತಾರೆ ಎನ್ನುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT