ಗುರುವಾರ , ಫೆಬ್ರವರಿ 2, 2023
27 °C
ಮಹಾತ್ಮ ಗಾಂಧೀಜಿ, ಲಾಲ್‌ಬಹದ್ದೂರ್‌ ಶಾಸ್ತ್ರಿ ಜಯಂತಿ ಆಚರಣೆ: ಶಾಸಕ ಹಿಟ್ನಾಳ ಹೇಳಿಕೆ

ಗಾಂಧಿ ಬದುಕು ಎಲ್ಲರಿಗೂ ಪ್ರೇರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ನಗರದ ವಿವಿಧೆಡೆ ಭಾನುವಾರ ಮಹಾತ್ಮ ಗಾಂಧಿ ಮತ್ತು ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಜಯಂತಿ ಆಚರಿಸಲಾಯಿತು.

ಜಿಲ್ಲಾಡಳಿತ, ವಾರ್ತಾ ಮತ್ತು ಪ್ರಸಾರ ಇಲಾಖೆ ಮತ್ತು ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಿಲ್ಲಾಡಳಿತ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಬ್ಬರೂ ಮಹನೀಯರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಶಾಸಕ ರಾಘವೇಂದ್ರ ಹಿಟ್ನಾಳ ‘ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಅದರ ನೇತೃತ್ವ ವಹಿಸಿದ್ದ ಗಾಂಧೀಜಿ ಅಹಿಂಸಾ ಮಾರ್ಗದ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿದ ಫಲವಾಗಿ ಭಾರತಕ್ಕೆ ಸ್ವಾತಂತ್ರ್ಯ ದೊರೆಯಿತು. ಜಗತ್ತಿನ ಬೇರೆ ದೇಶಗಳಿಗೂ ಗಾಂಧೀಜಿಯವರ ಜೀವನ ಮಾದರಿಯಾಗಿದೆ’ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಸಾವಿತ್ರಿ ಬಿ.ಕಡಿ ಮಾತನಾಡಿ ‘ಗಾಂಧೀಜಿ ಅವರನ್ನು ನೆನಪಿಸಿಕೊಂಡರೆ ಮೊದಲು ನೆನಪಾಗುವುದು ಸತ್ಯಾಗ್ರಹ, ಹೋರಾಟ, ಅಹಿಂಸಾ ವಿಷಯಗಳು. ಗಾಂಧೀಜಿಯವರು ವೈಯಕ್ತಿಕ ಜೀವನದಲ್ಲಿ ಸತ್ಯ ಮತ್ತು ಪ್ರಾಮಾಣಿಕತೆಗೆ ಪ್ರಾಮುಖ್ಯತೆ ನೀಡಿದ್ದರು’ ಎಂದರು.

ಕಿರು ಚಿತ್ರ ಪ್ರದರ್ಶನ ಮತ್ತು ಭಜನೆ ಕಾರ್ಯಕ್ರಮ: ಗಾಂಧೀಜಿ 154ನೇ ಜನ್ಮ ದಿನದ ಅಂಗವಾಗಿ ಬಾಪೂಜಿ ಜೀವನ ಚರಿತ್ರೆ ಕುರಿತ ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು.

ಬಾಷು ಹಿರೇಮನಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ, ಕೊಪ್ಪಳ ತಹಶೀಲ್ದಾರ್ ವಿಠ್ಠಲ್ ಚೌಗಲಾ, ಕೃಷಿ ಜಂಟಿ ನಿರ್ದೇಶಕ ಸದಾಶಿವ, ಡಿಡಿಪಿಐ ಎಂ.ರೆಡ್ಡರ್ ಇದ್ದರು.

ಪುಸ್ತಕ ಮೇಳ: ತಾಲ್ಲೂಕಿನ ಬೆಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಪುಸ್ತಕ ಮೇಳ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಶಿಕ್ಷಕ ಪರಶುರಾಮ ಸಾಲ್ಮನಿ, ಶಿಕ್ಷಕರಾದ ರಾಜಸಾಹೇಬ, ಪ್ರಕಾಶರಡ್ಡಿ, ನಾರಾಯಣಪ್ಪ, ಶಿರಸಪ್ಪ ಗಡಾದ, ನಿರ್ಮಲಾ, ಮಾಲಿಪಾಟೀಲ, ತುಕರಾಮ್‌, ಸುರೇಶ‌, ಸುಷ್ಮಾ ಹಾಗೂ ಶ್ವೇತಾ ಇದ್ದರು.

ಆಚರಣೆ: ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ತತ್ವ ಹಾಗೂ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಕೊಪ್ಪಳದ ತ್ವರಿತಗತಿ ವಿಶೇಷ ನ್ಯಾಯಾಲಯ-1 (ಪೋಕ್ಸೊ ನ್ಯಾಯಾಲಯದ) ಹೆಚ್ಚುವರಿ ಸಿವಿಲ್ ನ್ಯಾಯಾಧೀಶ  ಡಿ.ಕೆ.ಕುಮಾರ ಹೇಳಿದರು.

ಬೆಂಗಳೂರು ಲೋಕ ಶಿಕ್ಷಣ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಲ್ಲಾ ಪೋಲಿಸ್ ಇಲಾಖೆ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾರಾಗೃಹ ಹಾಗೂ ಸುಧಾರಣ ಸೇವೆಗಳ ಇಲಾಖೆ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಉಮಾದೇವಿ ಸೊನ್ನದ, ಜಿಲ್ಲಾ ಕಾರಾಗೃಹ ಅಧೀಕ್ಷಕ ವಿಜಯಕುಮಾರ್ ಡಿ.ಚೌಹಾಣ್,  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದೇವೇಂದ್ರ ಪಂಡಿತ್, ಜೆ.ಎಂ.ಎಫ್.ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಹರೀಶ ಕುಮಾರ ಎಂ., ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಆದಿತ್ಯ ಕುಮಾರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಚಂದ್ರಪ್ಪ ಬಂಡಿ ಇದ್ದರು.

ಪ್ರಸ್ತುತ: ನಗರದ ಗವಿಸಿದ್ಧೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಷ್ಟಗಿಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾದ ಜೀವನಸಾಬ ಬಿನ್ನಾಳ್ ಮಾತನಾಡಿ ‘ಗಾಂಧೀಜಿ ವಿಚಾರಧಾರೆಗಳು ಪ್ರಸ್ತುತವಾಗಿವೆ’ ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್.ಬಿ ಕಂಬಾರ, ಸಹಾಯಕ ಪ್ರಾಧ್ಯಾಪಕರಾದ ಗಂಗಾಧರ ಸೊಪ್ಪಿಮಠ. ಡಾ ಆನಂದರಾವ ದೇಸಾಯಿ, ಶೈಲಜಾ ಅರಳಲೇಮಠ, ಡಾ.ನೀಲಾಂಬಿಕೆ ಹುದ್ದಾರ, ಶ್ರೀಲತಾ ದೇಸಾಯಿ, ಕಾಂಚನಗಂಗಾ, ಜಂಭಯ್ಯ, ಅನಿತಾ, ದೇವರಾಜ, ದೇವೇಂದ್ರ, ನಾಗರಾಜ, ಶಿವಕುಮಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.