ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಒತ್ತು

ಜಲಮೂಲ ಕಲುಷಿತಗೊಳಿಸದಿರಲು ಜಿಲ್ಲಾಡಳಿತ, ಪರಿಸರವಾದಿಗಳ ಮನವಿ; ಈ ಬಾರಿ ದೊಡ್ಡ ಗಣಪತಿಗಳಿಗೆ ಬರ
Last Updated 6 ಸೆಪ್ಟೆಂಬರ್ 2021, 8:48 IST
ಅಕ್ಷರ ಗಾತ್ರ

ಕೊಪ್ಪಳ: ಕೊರೊನಾ ಸಂಕಷ್ಟ ಕಾಲದಲ್ಲಿ ಕಳೆದ ಎರಡು ವರ್ಷಗಳಿಂದ ಯಾವುದೇ ಹಬ್ಬಗಳ ಸಂಭ್ರಮದ ಆಚರಣೆಗೆ ತಡೆಬಿದ್ದಿದ್ದು, ಗಣೇಶೋತ್ಸವ ಆಚರಣೆಗೆ ಸೀಮಿತ ಅವಕಾಶ ನೀಡಿ ಸರ್ಕಾರ ಅನುಮತಿ ನೀಡಿದೆ. ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆಗೆ ಸಿದ್ಧತೆ ನಡೆದಿದೆ.

ಈ ಮೊದಲು 10ರಿಂದ 20 ಅಡಿಯ ಬೃಹತ್ ಗಣೇಶ ಮೂರ್ತಿಗಳನ್ನು ಕೂರಿಸಲಾಗುತ್ತಿತ್ತು. ಪರಿಸರಕ್ಕೆ ಮಾರಕವಾದ ಪಿಒಪಿ ಗಣಪತಿಗಳನ್ನು ನಿಷೇಧಿಸಿದ ಕಾರಣ ಬೃಹತ್ ಮೂರ್ತಿಗಳನ್ನು ಸ್ಥಾಪಿಸುವ ಪರಿಪಾಠಕ್ಕೆ ಬಹುತೇಕ ಕಡಿವಾಣ ಬಿದ್ದಿದೆ. ಜಿಲ್ಲೆಯಾದ್ಯಂತ ಸಾರ್ವಜನಿಕ ಗಣೇಶ ಮಂಡಳಿಯಿಂದ ಗಣಪತಿಯನ್ನು ಕೂರಿಸಿ 5,9, 11 ದಿನಗಳವರೆಗೆ ಅದ್ಧೂರಿ ಉತ್ಸವ ಕೂಡ ಆಚರಿಸಲಾಗುತ್ತಿತ್ತು. ವಿಸರ್ಜನೆ ದಿನದಂದು ಬೃಹತ್ ಮೆರವಣಿಗೆ ನಡೆಯುತ್ತಿತ್ತು. ಈಗ ಅವಕ್ಕೆಲ್ಲ ತಡೆ ಬಿದ್ದಿದೆ.

ಮೂರ್ತಿ ತಯಾರಕರ ಅಳಲು:ಗಣಪತಿ ಉತ್ಸವ ಬಂದರೆ ಮೂರ್ತಿ ತಯಾರಕರು, ವ್ಯಾಪಾರಿಗಳು, ಹೂವು, ಹಣ್ಣು ಸೇರಿದಂತೆ ಇತರೆ ಪೂಜಾ ಸಾಮಗ್ರಿಗಳ ಖರೀದಿಗೆ ಸಾವಿರಾರು ಜನರು ಮಾರುಕಟ್ಟೆಗೆ ಬರುತ್ತಿದ್ದರು. ಆದರೆ, ಈ ಬಾರಿ ಅಷ್ಟೊಂದು ವ್ಯಾಪಾರ ನಡೆಯುತ್ತಿಲ್ಲ ಎಂಬುವುದು ಸಾರ್ವಜನಿಕರ ಅಳಲಾಗಿದೆ.

ಗಣೇಶ ಉತ್ಸವ ಆಚರಣೆ ಬಗ್ಗೆ ಇನ್ನೂ ಅನಿಶ್ಚಿತತೆ ಇರುವುದರಿಂದ ಮತ್ತು ನಿರ್ಬಂಧಗಳ ಕಾರಣದಿಂದ ಬೃಹತ್‌ ಮೂರ್ತಿಗಳಿಗೆ ಬೇಡಿಕೆಯೇ ಬಂದಿಲ್ಲ. ಮನೆಯಲ್ಲಿ ಸಾಂಪ್ರದಾಯಿಕವಾಗಿ ಪೂಜಿಸುವ ಸಣ್ಣ ವಿನಾಯಕನ ಮೂರ್ತಿಗಳ ತಯಾರಿಕೆ ನಡೆದಿದ್ದರೆ, ಕೆಲವರು ಕಳೆದ ಬಾರಿ ಹಾನಿ ಅನುಭವಿಸಿದ್ದರಿಂದ ಈ ಸಲ ಆ ಕೆಲಸವನ್ನು ಕೈ ಬಿಟ್ಟಿದ್ದಾರೆ.

ಪರಿಸರಸ್ನೇಹಿ ಗಣೇಶನ ತಯಾರಿಕೆಗೆ ಒತ್ತು: ಗಣೇಶ ಮೂರ್ತಿ ತಯಾರಿಸುವ ಕೆಲವು ಸಾಂಪ್ರದಾಯಿಕ ಕುಟುಂಬಗಳು ಈಗಲೂ ಮಣ್ಣನ್ನು ತಂದು ರಾಸಾಯನಿಕ ಬಣ್ಣ ಬಳಸಿ ಮೂರ್ತಿ ತಯಾರಿಸುತ್ತಾರೆ. ಕೆಲವರು ಕಡಿಮೆ ಪ್ರಮಾಣದ ರಾಸಾಯನಿಕ ಬಳಸಿ ಗಜಾನನ ಮೂರ್ತಿ ತಯಾರಿಸುತ್ತಾರೆ.

ಜಿಲ್ಲೆಯಲ್ಲಿ ಈಚೆಗೆ ಜನಪ್ರಿಯವಾಗುತ್ತಿರುವ ಗೋವಿನ ಸಗಣಿ ಮತ್ತು ವಿವಿಧ ತರಹದ ಹಿಟ್ಟಿನ ಲಂಬೋಧರರನ್ನು ತಯಾರಿಸಿ ಪೂಜೆ ಮಾಡುವುದನ್ನು ಕಾಣಬಹುದು. ಜಿಲ್ಲೆಯಾದ್ಯಂತ ಬಹುತೇಕ ಕೆರೆಯ ಮತ್ತು ಜಿಗುಟಾದ ಮಣ್ಣಿನಿಂದಲೇ ಮೂರ್ತಿ ತಯಾರಿಸುತ್ತಿರುವುದು ಕಂಡು ಬರುತ್ತದೆ. ಅದಕ್ಕೆ ಬಣ್ಣ ಲೇಪಿಸಿ ಈಗಾಗಲೇ ಮಾರಾಟಕ್ಕೆ ಅನುವುಗೊಳಿಸಲಾಗುತ್ತಿದೆ.

ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿರುವುದರಿಂದ ಮನೆಗಳಲ್ಲಿಡುವ ಗಣಪತಿ ವ್ಯಾಪಾರ ಜೋರಾಗಿದೆ. ಜಿಲ್ಲೆಯಲ್ಲಿ 500ಕ್ಕೂ ಹೆಚ್ಚು ಸಾರ್ವಜನಿಕ ಗಜಾನನ ಮಂಡಳಿಗಳು ಇದ್ದು, ದೊಡ್ಡ ಮೂರ್ತಿ ಸ್ಥಾಪನೆಗೆ ಇನ್ನೂ ನಿರ್ಧಾರ ಮಾಡಿಲ್ಲ. ಅಲ್ಲದೆ ಸಮಯಾವಕಾಶ ಕಡಿಮೆ ಇರುವುದರಿಂದ ತಯಾರಕರು ಒಪ್ಪುತ್ತಿಲ್ಲ. ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ತರಲಾಗುತ್ತಿದ್ದ ಗಣೇಶ ಮೂರ್ತಿಗಳು ಅಲ್ಲಿ ಕೊರೊನಾ ಹಾವಳಿ ಹೆಚ್ಚಿರುವುದರಿಂದ ದೊರಕುತ್ತಿಲ್ಲ.

ಜಿಲ್ಲಾಮಟ್ಟದ ಮಾರ್ಗಸೂಚಿ: ರಾಜ್ಯ ಸರ್ಕಾರ ಗಣೇಶೋತ್ಸವಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿ ಹೊರಡಿಸಿದ್ದು, ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸೂಕ್ತ ನಿರ್ಧಾರ ಕೈಗೊಂಡು ಗಣೇಶ ಮಂಡಳಿಗಳಿಗೆ ಒಪ್ಪಿಗೆ ನೀಡಲಿದೆ ಎಂದು ತಿಳಿದು ಬಂದಿದೆ.

ಹುಲಿಕೆರೆ, ಹಿರೇಹಳ್ಳದಲ್ಲಿ ಮೂರ್ತಿಗಳ ವಿಸರ್ಜನೆಗೆ ನಿರ್ಬಂಧ:

ಪ್ರತಿವರ್ಷದಂತೆ ಈ ಬಾರಿಯೂ ಕುಡಿಯುವ ನೀರಿನ ಮತ್ತು ಅಂತರ್ಜಲಕ್ಕೆ ಪೂರಕವಾದ ಬಾವಿ, ಕೆರೆ, ಪುಷ್ಕರಣಿ ಸೇರಿದಂತೆ ಹುಲಿಕೆರೆ, ಹಿರೇಹಳ್ಳಗಳಲ್ಲಿ ಗಣೇಶ ವಿಸರ್ಜನೆಗೆ ನಿರ್ಬಂಧವಿದೆ. ಕೆಲವರು ಮನೆಯಲ್ಲಿ ಟಬ್, ಬಕೆಟ್‌ಗಳಲ್ಲಿ ವಿಸರ್ಜನೆ ಮಾಡುತ್ತಾರೆ.

ನೀರಿನಲ್ಲಿ ಕರಗುವ, ಮಣ್ಣಿನಲ್ಲಿ ಸೇರುವ ಮೂರ್ತಿಗಳನ್ನು ಹೆಚ್ಚು ಪ್ರತಿಷ್ಠಾಪನೆ ಮಾಡುವಂತೆ ಪರಿಸರ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಟ್ಯಾಂಕ್‌ ಮತ್ತು ಕೆರೆಗಳಲ್ಲಿ ವಿಸರ್ಜನೆ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದಶಾಲೆಗಳಲ್ಲಿ ಪ್ರತಿಷ್ಠಾಪನೆಯಾಗುತ್ತಿದ್ದ ಗಣೇಶ ಹಬ್ಬದ ಆಚರಣೆ ಕೂಡಾ ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT