ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆಸಂತ್ರಸ್ತರಿಗೆ ವಿತರಿಸದ ಆಹಾರ ಸಾಮಗ್ರಿ ಪತ್ತೆ

ಗಂಗಾವತಿ ತಾಲ್ಲೂಕು ಆಡಳಿತ ನಿರ್ಲಕ್ಷ್ಯ: ಆರೋಪ
Last Updated 14 ಅಕ್ಟೋಬರ್ 2019, 10:27 IST
ಅಕ್ಷರ ಗಾತ್ರ

ಗಂಗಾವತಿ: ಉತ್ತರ ಕರ್ನಾಟಕದಲ್ಲಿ ನೆರೆಯಿಂದ ತತ್ತರಿಸಿದ ಲಕ್ಷಾಂತರ ಜನರಿಗೆ ಕಳುಹಿಸಲು, ನಗರದಲ್ಲಿ ಸಾರ್ವಜನಿಕರು ಸಂಗ್ರಹಿಸಿ ಕೊಟ್ಟ ದವಸಧಾನ್ಯ ಮತ್ತು ಅಗತ್ಯ ವಸ್ತುಗಳನ್ನು ತಾಲ್ಲೂಕು ಆಡಳಿತ ಮಂಡಳಿ, ಪ್ರವಾಹ ಸ್ಥಳಗಳಿಗೆ ಕಳುಹಿಸದೇ ನಿರ್ಲಕ್ಷ್ಯ ವಹಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಗರದ ಸಾಮರ್ಥ್ಯ ಸೌಧದಲ್ಲಿ ನೆರೆ ಸಂತ್ರಸ್ತರಿಗೆ ಕಳುಹಿಸಿಕೊಡಬೇಕಾಗಿದ್ದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಶನಿವಾರ ಇದನ್ನು ಪತ್ತೆಹಚ್ಚಿದ ತುಂಗಭದ್ರಾ ಅಭಿವೃದ್ಧಿ ಹೋರಾಟ ಸಮಿತಿಯ ಪದಾಧಿಕಾರಿ ಗಳು, ತಾಲ್ಲೂಕು ಪಂಚಾಯಿತಿ ಅಧಿಕಾರಿ ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ವೇಳೆ ಹೋರಾಟ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಮಾತನಾಡಿ, ನೆರೆ ಪೀಡಿತ ಕುಟುಂಬಗಳಿಗೆ ಪರಿಹಾರ ನೀಡುವುದಕ್ಕಾಗಿ ತಾಲ್ಲೂಕಿನ ಆನೆಗೊಂದಿ, ವೆಂಕಟಗಿರಿ, ಮರಳಿ, ಶ್ರೀರಾಮ ನಗರ ಸೇರಿದಂತೆ ಸಾಕಷ್ಟು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅಪಾರ ಪ್ರಮಾಣದ ದವಸ ಧಾನ್ಯಗಳನ್ನು, ಅಗತ್ಯ ವಸ್ತುಗಳನ್ನು ಸಂಗ್ರಹಿಸಲಾಗಿತ್ತು. ಆದರೆ, ಸಂಗ್ರಹಿಸಿದ ವಸ್ತುಗಳನ್ನು ತಾಲ್ಲೂಕು ಆಡಳಿತ ಮಂಡಳಿಯು ಪ್ರವಾಹ ಪೀಡಿತರಿಗೆ ಕಳುಹಿಸಿ ಕೊಡದೇ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ, ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಕೊಠಡಿಯಲ್ಲಿ ದಾಳಿ ವೇಳೆ, 20 ಕ್ವಿಂಟಾಲ್ ಅಕ್ಕಿ, 12 ಚೀಲ ಬಟ್ಟೆ, 3 ಪ್ಯಾಕೇಟ್ ತೊಗರಿಬೇಳೆ, 5 ಕೆ.ಜಿ.ಹುಣಸೆಹಣ್ಣು, 2 ಡಜನ್ ಸಾಬೂನು, 3 ಕೆ.ಜಿ ಖಾರದ ಪುಡಿಯು ಪತ್ತೆಯಾಗಿದ್ದು, ಭಾನುವಾರ ಮುಂಜಾನೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ತಿಮ್ಮನಾಯಕ ಪ್ರವಾಹ ಪೀಡಿತ ಪ್ರದೇಶಗಳಿಗೆ ಕಳುಹಿಸಿಕೊಟ್ಟರು.

ಸಲೀಂ ಬೇಗ್, ಗುರುಸಿದ್ದಪ್ಪ ಭೋವಿ, ಪಂಪಾರೆಡ್ಡಿ ಸಂಕನಾಳ್, ವೆಂಕಟೇಶ ಮಾಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT