ಶುಕ್ರವಾರ, ಜುಲೈ 30, 2021
20 °C

ಗಂಗಾವತಿ | ಮತ್ತೆ ಮೂವರಿಗೆ ಕೋವಿಡ್‌: ಹೆಚ್ಚಿದ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗಂಗಾವತಿ: ತಾಲ್ಲೂಕಿನಲ್ಲಿ ಮಂಗಳವಾರವೂ ಮತ್ತೆ ಮೂರು ಕೋವಿಡ್‌ ಪ್ರಕರಣಗಳು ಪತ್ತೆಯಾಗುವ ಮೂಲಕ ಎರಡೇ ದಿನದಲ್ಲಿ ಒಟ್ಟು ಆರು ಕೋವಿಡ್‌ ಪಾಸಿಟಿವ್‌ ಪ್ರಕರಣ ದಾಖಲಾಗಿವೆ. ಇದರಿಂದಾಗಿ ತಾಲ್ಲೂಕಿನ ಜನರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ.

ಗಂಗಾವತಿಯ ಸರ್ಕಾರಿ ಉಪವಿಭಾಗ ಆಸ್ಪತ್ರೆಯ 30 ವರ್ಷದ ನರ್ಸ್‌ ಒಬ್ಬರಿಗೆ ಮಂಗಳವಾರ ಕೋವಿಡ್‌ ಸೋಂಕು ತಗುಲಿರುವುದು ದೃಢಪಟ್ಟಿದೆ. ಯಾವುದೇ ಪ್ರಯಾಣದ ಹಿನ್ನೆಲೆ ಹೊಂದಿಲ್ಲದಿದ್ದರೂ ನರ್ಸ್‌ಗೆ ಸೋಂಕು ತಗುಲಿದೆ. ಅವರನ್ನು ಕೊಪ್ಪಳದ ಕೋವಿಡ್‌ ಆಸ್ಪತ್ರೆಗೆ ಕಳುಹಿಸಲಾಗಿದೆ.

ಸೋಮವಾರ ವಕೀಲಗೇಟ್‌ ಏರಿಯಾದಲ್ಲಿ ಮೂರು ವರ್ಷದ ಮಗುವಿಗೂ ಕೋವಿಡ್‌ ಸೋಂಕು ಕಾಣಿಸಿಕೊಂಡಿತ್ತು. ಮಂಗಳವಾರ ಮಗುವಿನ ತಂದೆ 41 ವರ್ಷದ ವ್ಯಕ್ತಿಯನ್ನು ತಪಾಸಣೆ ನಡೆಸಿದಾಗ ಅವರಿಗೂ ಸೋಂಕು ಇರುವುದು ದೃಢಪಟ್ಟಿದೆ. ಇವರು ಜೂನ್‌ 9 ರಂದು ಮುಂಬೈಯಿಂದ ನಗರಕ್ಕೆ ಆಗಮಿಸಿದ್ದರು ಎನ್ನಲಾಗಿದೆ.

ತಾಲ್ಲೂಕಿನ ಶ್ರೀರಾಮನಗರದ ಮುಖ್ಯ ರಸ್ತೆಯಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ 31 ವರ್ಷದ ವ್ಯಕ್ತಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಂಕಿತ ವ್ಯಕ್ತಿ ಉಡುಪಿಯ ಕುಂದಾಪುರದಿಂದ ಕೆಎಸ್‌ಆರ್‌ಟಿಸಿ ಬಸ್ ಮೂಲಕ ಜೂನ್‌ 3 ರಂದು ಗ್ರಾಮಕ್ಕೆ ಆಗಮಿಸಿದ್ದರು ಎನ್ನಲಾಗಿದೆ. ಗ್ರಾಮಕ್ಕೆ ಬಂದ ದಿನವೇ ಹೋಮ್‌ ಕ್ವಾರಂಟೈನ್‌ ಮಾಡಲಾಗಿತ್ತು. ಆದರೆ, ಮಂಗಳವಾರ ಸೋಂಕು ತಗುಲಿರುವುದು ದೃಢಪಟ್ಟಿದೆ.

ಮೂವರು ಸೋಂಕಿತರನ್ನು ಈಗಾಗಲೇ ತಾಲ್ಲೂಕು ಆಡಳಿತವು ಕೊಪ್ಪಳದ ಕೋವಿಡ್‌ ಆಸ್ಪತ್ರೆಗೆ ಕಳುಹಿಸಿದ್ದು, ಅವರಿದ್ದ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ.

ಆಸ್ಪತ್ರೆಯ ಸ್ಟಾಪ್‌ ನರ್ಸ್‌ಗೆ ಕೊರೊನಾ ತಗುಲಿರುವುದರಿಂದ ಇಡೀ ಆಸ್ಪತ್ರೆಯನ್ನು ಮಂಗಳವಾರ ಸಿಬ್ಬಂದಿ ಸೋಂಕು ನಿವಾರಕ ದ್ರಾವಣದಿಂದ ಸ್ವಚ್ಛಗೊಳಿಸಿದರು. ಜೊತೆಗೆ ಆಸ್ಪತ್ರೆಯ ಒಪಿಡಿ ಸೇವೆಯನ್ನು 24 ಗಂಟೆಗಳ ಕಾಲ ಬಂದ್‌ ಮಾಡಿ ಆಸ್ಪತ್ರೆಗೆ ಬರುವವರನ್ನು ಗೇಟಿನ ಹೊರಗಡೆಯೆ ತಡೆದು ಮನೆಗೆ ಕಳುಹಿಸಲಾಯಿತು.

ಮಂಗಳವಾರ ಆಸ್ಪತ್ರೆಯಲ್ಲಿದ್ದ 110 ಕ್ಕೂ ಹೆಚ್ಚು ಸಿಬ್ಬಂದಿಯ ಸ್ವಾಬ್‌ ಟೆಸ್ಟ್‌ ಕೂಡ ಮಾಡಲಾಯಿತು. ಆಸ್ಪತ್ರೆಯಲ್ಲಿ ಒಳರೋಗಿಗಳು ಮಾತ್ರ ಇದ್ದು, ಅವರಿಗಷ್ಟೇ ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರದಿಂದ ಸಾರ್ವಜನಿಕರಿಗೆ ಆಸ್ಪತ್ರೆ ಸೇವೆ ಎಂದಿನಂತೆ ಸಿಗಲಿದೆ.

 ನರ್ಸ್‌ಗೆ ಕೋವಿಡ್‌ ಪಾಸಿಟಿವ್‌ ಬಂದ ಕಾರಣ ಎಲ್ಲಾ ಸಿಬ್ಬಂದಿಯ ವೈದ್ಯಕೀಯ ತಪಾಸಣೆ ಮಾಡಲಾಗಿದ್ದು, ಬುಧವಾರ ವರದಿ ಬರಲಿದೆ. ವರದಿ ಬಂದ ಬಳಿಕವಷ್ಟೇ ಕೆಲಸಕ್ಕೆ ಹಾಜರಾಗಲು ಅವರಿಗೆ ಸೂಚಿಸಲಾಗಿದ್ದು, 24 ಗಂಟೆ ಅವರನ್ನು ಹೋಮ್‌ ಕ್ವಾರಂಟೈನ್‌ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು