ಶನಿವಾರ, ಏಪ್ರಿಲ್ 1, 2023
23 °C
ರಾಷ್ಟ್ರೀಯ ಪಕ್ಷಗಳ ಟಿಕೆಟ್‌ ಘೋಷಣೆಗೆ ಕಾಯಬೇಕಾಗಿದೆ

ಗಂಗಾವತಿ ಕ್ಷೇತ್ರದ ಸ್ಥಿತಿ–ಗತಿ: ಅತೃಪ್ತರು, ಆಕಾಂಕ್ಷಿಗಳತ್ತ ರೆಡ್ಡಿ ಚಿತ್ತ

ಪ್ರಮೋದ Updated:

ಅಕ್ಷರ ಗಾತ್ರ : | |

ಕೊಪ್ಪಳ: ಚುನಾವಣೆಗೆ ಕೆಲ ದಿನಗಳಷ್ಟೇ ಬಾಕಿ ಇರುವಾಗ ಹೊಸ ಪಕ್ಷ ಕಟ್ಟಿ ಅಗ್ನಿಪರೀಕ್ಷೆಗೆ ಮುಂದಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ನ ಟಿಕೆಟ್‌ ಆಕಾಂಕ್ಷಿಗಳು ಮತ್ತು ಅತೃಪ್ತರ ಮೇಲೆ ಚಿತ್ತ ಹರಿಸಿದ್ದಾರೆ.

ಜಿಲ್ಲೆಯ ಗಂಗಾವತಿ, ಕೊಪ್ಪಳ, ಕನಕಗಿರಿ, ಕುಷ್ಟಗಿ ಮತ್ತು ಯಲಬುರ್ಗಾ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧೆ ಬಯಸಿ ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳಿಂದ ಹಲವು ಆಕಾಂಕ್ಷಿಗಳು ಇದ್ದಾರೆ. ಈ ಪಕ್ಷಗಳ ಹಾಲಿ ಶಾಸಕರು ಮತ್ತು ಆಕಾಂಕ್ಷಿಗಳು ಗ್ರಾಮೀಣ ಪ್ರದೇಶದಿಂದ ಪ್ರಚಾರವನ್ನೂ ಆರಂಭಿಸಿದ್ದಾರೆ.

ಭತ್ತದ ಕಣಜ ಗಂಗಾವತಿ ಇಡೀ ರಾಜ್ಯದ ಗಮನ ಸೆಳೆದಿದೆ. ಜನಾರ್ದನ ರೆಡ್ಡಿ ಮೊದಲು ವಿವಿಧ ಸಮುದಾಯಗಳ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಗಂಗಾವತಿ ತಾಲ್ಲೂಕಿನ ಚಿಕ್ಕಬೆಣಕಲ್‌ ಮತ್ತು ಆನೆಗೊಂದಿ ಗ್ರಾಮ ಪಂಚಾಯಿತಿಗಳ ಸದಸ್ಯರನ್ನು ತಮ್ಮ ಪಕ್ಷಕ್ಕೆ ಸೇರ್ಪಡೆಯಾಗುವಂತೆ ಮಾಡಿಕೊಳ್ಳುವ ಮೂಲಕ ತಳಮಟ್ಟದಿಂದ ನಿರ್ದಿಷ್ಟ ಕ್ಷೇತ್ರಗಳಲ್ಲಿ ಶತಾಯಗತಾಯು ಗೆಲ್ಲಲೇಬೇಕು ಎಂದು ಪ್ರಚಾರ ನಡೆಸುತ್ತಿದ್ದಾರೆ.

ರಾಷ್ಟ್ರೀಯ ಪಕ್ಷಗಳ ಟಿಕೆಟ್ ಘೋಷಣೆಯಾಗುವುದನ್ನೇ ವಿಧಾನಪರಿಷತ್‌ನ ಮಾಜಿ ಸದಸ್ಯರು, ವಿವಿಧ ಸಮಾಜಗಳ ಪ್ರಮುಖರು ಹಾಗೂ ಕೆಲ ಆಕಾಂಕ್ಷಿಗಳು ಕಾಯುತ್ತಿದ್ದಾರೆ.

ತಾವು ನಂಬಿಕೊಂಡ ಪಕ್ಷದಲ್ಲಿ ಟಿಕೆಟ್‌ ಸಿಗದೇ ಹೋದರೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಾಗಿಲು ತಟ್ಟಲು ಕಾಯುತ್ತಿದ್ದಾರೆ. ರೆಡ್ಡಿಯೇ ತಮ್ಮ ಆಪ್ತರ ಮೂಲಕ ಜಿಲ್ಲೆಯ ಬೇರೆ ಪಕ್ಷಗಳ ಹಲವು ಮುಖಂಡರ ಜೊತೆ ಮಾತನಾಡಿಸಿದ್ದಾರೆ ಎನ್ನುತ್ತಾರೆ ಕಾಂಗ್ರೆಸ್‌ನ
ಮುಖಂಡರೊಬ್ಬರು.

ಗಂಗಾವತಿ ಕಗ್ಗಂಟು:  ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಗಂಗಾವತಿ ಕ್ಷೇತ್ರದಿಂದ ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ, ಮಲ್ಲಿ ಕಾರ್ಜುನ ನಾಗಪ್ಪ, ಜೆಡಿಎಸ್‌ನಿಂದ ಕೆಲ ತಿಂಗಳುಗಳ ಹಿಂದೆಯಷ್ಟೇ ಕಾಂಗ್ರೆಸ್‌ ಸೇರಿರುವ ಎಚ್‌.ಆರ್‌. ಶ್ರೀನಾಥ್‌ ಅರ್ಜಿ ಸಲ್ಲಿಸಿದ್ದಾರೆ. ಶ್ರೀನಾಥ್‌ ಮತ್ತು ನಾಗಪ್ಪ ಅವರ ಬಣ ’ನಾವು ಮೂಲ ಕಾಂಗ್ರೆಸ್ಸಿಗರು; ನಮಗೇ ಟಿಕೆಟ್‌ ಕೊಡ ಬೇಕು’ ಎಂದು ಹೇಳುತ್ತಿದ್ದರೆ, ’ಟಿಕೆಟ್‌ ತಂದು ತೋರಿಸುತ್ತೇನೆ’ ಎಂದು ಅನ್ಸಾರಿ ಬಹಿರಂಗವಾಗಿಯೇ ಹೇಳಿದ್ದಾರೆ.

ಆದ್ದರಿಂದ ಕಾಂಗ್ರೆಸ್‌ಗೆ ಗಂಗಾವತಿ ಟಿಕೆಟ್‌ ಆಯ್ಕೆ ಕಗ್ಗಂಟಾಗಿದೆ.
ಇದರ ನಡುವೆ ಜನಾರ್ದನ ರೆಡ್ಡಿ ಗಂಗಾವತಿ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವು ದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಹೀಗಾಗಿ ಭತ್ತದ ಕಣಜದಲ್ಲಿ ಈಗ ರಾಜಕೀಯ ಚಟು ವಟಿಕೆ ರಂಗು ಜೋರಾಗಿದೆ. ಕೆಲವರು ಬಹಿರಂಗವಾಗಿಯೇ
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪರ ಮತ್ತು ಇನ್ನೂ ಕೆಲವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪರ ಇದ್ದಾರೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ.

  ಜನಾರ್ದನ ರೆಡ್ಡಿ ಆಪ್ತರ ಮೂಲಕ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ದು ನಿಜ. ಗಂಗಾವತಿಯಲ್ಲಿ ಕಾಂಗ್ರೆಸ್‌ ಯಾರಿಗೆ ಟಿಕೆಟ್‌ ಕೊಡುತ್ತದೆ ಎನ್ನುವುದನ್ನು ನೋಡಿಕೊಂಡು ತೀರ್ಮಾನ.

–ಕರಿಯಣ್ಣ ಸಂಗಟಿ, ಪರಿಷತ್‌ ಮಾಜಿ ಸದಸ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು