ಸೋಮವಾರ, ಡಿಸೆಂಬರ್ 9, 2019
°C
ಸಿದ್ದಾಪುರದಲ್ಲಿ ಕೊಪ್ಪಳ ಗವಿಶ್ರೀಗಳ ಪಾದಯಾತ್ರೆ; ಶ್ರೀಗಳಿಗೆ ಹೂ ನೀಡಿ ಬರಮಾಡಿಕೊಂಡ ಮಕ್ಕಳು

ಭಾವೈಕ್ಯ ಬೆಸುಗೆ ಬೆಸೆದ ಸದ್ಬಾವನಾ ಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರಟಗಿ: ತಾಲ್ಲೂಕಿನ ಸಿದ್ದಾಪುರ ಗ್ರಾಮದಲ್ಲಿ ಭಾನುವಾರ ಕೊಪ್ಪಳ ಶ್ರೀಗವಿಸಿದ್ದೇಶ್ವರ ಸ್ವಾಮೀಜಿ ನಡೆಸಿದ 3ನೇ ದಿನದ ಸದ್ಭಾವನ ಪಾದಯಾತ್ರೆಯು ಭಾವೈಕ್ಯದ ಬೆಸುಗೆ ಗಟ್ಟಿಗೊಳಿಸಿತು. ಹಿಂದೂ-ಮುಸ್ಲಿಮರು ವಸ್ತ್ರಗಳ ವಿನಿಮಯ ಮಾಡಿ ಗಮನ ಸೆಳೆದರು.

ಅರ್ಧಚಂದ್ರದ ಟೋಪಿಯನ್ನು ಹಿಂದೂಗಳು, ನೀರಪಂಚೆ (ಕೆಂಪು ವರ್ಣದ ವಸ್ತ್ರ)ಯನ್ನು ಮುಸ್ಲಿಮರು ಧರಿಸಿ, ಭಾವೈಕ್ಯ, ಸೌಹಾರ್ದತೆಗೆ ಸಾಕ್ಷಿಯಾಗುವುದರೊಂದಿಗೆ ಇತರರಿಗೆ ಉತ್ತಮ ಸಂದೇಶ ರವಾನಿಸಿದರು.

ಗ್ರಾಮಕ್ಕೆ ಬಂದ ಶ್ರೀಗಳ ಪಾದಗಳಿಗೆ ಗ್ರಾಮದ ಬಸ್‌ ನಿಲ್ದಾಣದ ಬಳಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ ರಡ್ಡಿ ಹೊಸಮನಿ, ಮಾಜಿ ಉಪಾಧ್ಯಕ್ಷ ಬಿ. ಬಸವರಾಜಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಬಸವರಾಜ್ ಭಾವಿ, ಮಾಜಿ ಸದಸ್ಯ ಬಸವರಾಜ್ ನೀರಗಂಟಿ, ವಿಶೇಷ ಎಪಿಎಂಸಿ ಅಧ್ಯಕ್ಷ ಶರಣಪ್ಪ ಭಾವಿ ಸಹಿತ ಸಾವಿರಾರು ಸಂಖ್ಯೆಯ ಹಿಂದೂ ಮತ್ತು ಮುಸ್ಲಿಂ ಸಮಾಜದವರು ಪುಷ್ಪಾರ್ಚನೆ ಮಾಡಿದರೆ, ಮಕ್ಕಳು ಶ್ರೀಗಳಿಗೆ ಹೂ ನೀಡಿ ಬರಮಾಡಿಕೊಂಡರು.

ಶ್ರೀಗಳ ಪಾದಯಾತ್ರೆಯಲ್ಲಿ ಸಿದ್ದಾಪುರ, ಕೊಟ್ನೇಕಲ್, ಬರಗೂರು, ಉಳೇನೂರು, ಈಳಿಗನೂರು, ಗುಂಡೂರು, ಕಕ್ಕರಗೋಳ, ನಂದಿಹಳ್ಳಿ ಸಹಿತ ವಿವಿಧ ಗ್ರಾಮಗಳ ಸಾವಿರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಶ್ರೀಗಳು ಪಾದಯಾತ್ರೆ ನಡೆಸುವ ರಸ್ತೆಗಳನ್ನು ಸಗಣಿ ನೀರನ್ನು ಹಾಕಿ, ಬಣ್ಣ ಬಣ್ಣದ ರಂಗೋಲಿ ಬಿಡಿಸಿದ್ದರು. ತಳಿರು ತೋರಣಗಳನ್ನು ಕಟ್ಟಿ ಶ್ರೀಗಳನ್ನು ಸ್ವಾಗತಿಸಿಕೊಳ್ಳಲು ಇಡೀ ಗ್ರಾಮವೇ ಸನ್ನದ್ದಾವಾಗಿರುವುದು ಕಂಡುಬಂತು.

ಪಾದಯಾತ್ರೆ: ಸಿದ್ದಾಪುರ ಬಸ್‌ ನಿಲ್ದಾಣದ ಪಕ್ಕದ ರಸ್ತೆಯಿಂದ ಆರಂಭಗೊಂಡ ಸದ್ಭಾವನ ಪಾದಯಾತ್ರೆಯು ಗ್ರಾಮದೇವತೆ ದುಗಲಮ್ಮದೇವಿ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ಭೋವಿ ಓಣಿ, ಛಲವಾದಿ ಓಣಿ, ಕುರುಬರ ಓಣಿ, ವಿರುಪಯ್ಯತಾತನ ದೇವಸ್ಥಾನ, ಮರಕುಂಬಿ ವೀರುಪಣ್ಣ ಮಾರ್ಗ, ತಿಮ್ಮನಗೌಡ ಕನಕರೆಡ್ಡಿ ರಸ್ತೆ, ಎದುರು ಬಸವಣ್ಣ ರಸ್ತೆ, ಗೂಳಿ ಬಸವೇಶ್ವರ ವೃತ್ತ, ಮಲ್ಲಿಕಾರ್ಜುನ ನಗರದ ಆಂಜನೇಯ ದೇವಸ್ಥಾನದ ಮೂಲಕ ಬಸವರಾಜ ಭಾವಿ ಸ್ಮಾರಕ ಹಿರಿಯ ಪ್ರಾಥಮಿಕ ಶಾಲೆ ತಲುಪಿ, ಸಭೆಯಾಗಿ ಮಾರ್ಪಟ್ಟಿತು.

ಪಾದಯಾತ್ರೆಯ ಮಧ್ಯದಲ್ಲಿ ಬಳಗಾನೂರಿನ ಚಿಕೇನಕೊಪ್ಪ ಚನ್ನವೀರ ಶರಣರ ಮಠದ ಶಿವಶಾಂತವೀರ ಶರಣರ ವಚನಗಾಯನ, ತತ್ವಪದ ಗಾಯನ ನೆರೆದವರನ್ನು ಮಂತ್ರಮುಗ್ಧರ ನ್ನಾಗಿಸಿತ್ತು.

ಹೂವಿನಹಡಗಲಿಯ ಗವಿಸಿದ್ದೇಶ್ವರ ಶಾಖಾಮಠದ ಡಾ. ಹಿರೇಶಾಂತವೀರ ಸ್ವಾಮೀಜಿ ಮಾತನಾಡಿ, ‘ಸಿದ್ದಾಪುರ ಇಂದು ಶಿವನಪುರವಾಗಿ ಕಂಗೊಳಿಸು ತ್ತಿದೆ. ವೈಭವದ, ಜ್ಞಾನದ ಬೆಳಕು ಗ್ರಾಮದಲ್ಲೆಡೆ ಹರಡಿದೆ. ಪ್ರತಿ ಯೊಬ್ಬರೂ ಮಾನವೀಯ ಮೌಲ್ಯ ಕಾಪಾಡುವುದರ ಜತೆಗೆ ಪ್ರೀತಿ, ಸೇವಾದೃಷ್ಟಿಯನ್ನಿಟ್ಟುಕೊಂಡು ಸನ್ಮಾರ್ಗ ದಲ್ಲಿ ನಡೆಯಿರಿ’ ಎಂದು ಹೇಳಿದರು.

‘ಪುರದ ಪುಣ್ಯವು ನೆರೆದ ಸಿದ್ದಾಪುರ ಭಾಗದ ಭಕ್ತರಲ್ಲಿ ಕಾಣಿಸಿದ್ದು ಅನುಭವಕ್ಕೆ ಬಂತು. ವೇದ, ಪುರಾಣ, ಪ್ರವಚನ ಸಹಿತ ಇತರ ವಿಷಯಗಳ ಬಗ್ಗೆ ಅಭ್ಯಾಸಿಸಲು ಸಮಯವೇ ಸಾಲುತ್ತಿಲ್ಲ ಎಂಬ ಕೊರಗಿನಿಂದ ಮುಕ್ತರಾಗಿರಿ. ಸಾರ್ಥಕ ಬದುಕು ಸಾಗಿಸಲು ಯಾರೂ ಪ್ರಯಾಸ ಪಡಬೇಕಾದ ಅವಶ್ಯಕತೆ ಇಲ್ಲ. ನೀವೆಲ್ಲರೂ ಉತ್ತಮರಾಗಿರಬೇಕು ಜತೆಗೆ ಉಪಕಾರಿಯಾಗಿರಬೇಕು. ಇವೆರಡೂ ಗುಣಗಳನ್ನು ಮೈಗೂಡಿಸಿ ಕೊಂಡರೆ ಬದುಕು, ಜೀವನ ಸಾರ್ಥಕತೆ ಕಾಣುತ್ತದೆ’ ಎಂದು ಅಭಿನವ ಗವಿಸಿದ್ದೇಶ್ವರ ಶ್ರೀಗಳು ಆಶೀರ್ವಚನ ನೀಡಿದರು.

ಶಾಸಕ ಬಸವರಾಜ ದಢೇ ಸೂಗೂರು, ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಕಾಶ ಭಾವಿ,  ಸದಸ್ಯ ಶರಣೇಗೌಡ ಗುಂಡೂರು, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಿ. ತಿಮ್ಮನಗೌಡ, ಪ್ರಮುಖರಾದ ಡಾ.ಕೆ.ಎನ್‌.ಪಾಟೀಲ್, ಮಲ್ಲಿಕಾರ್ಜುನ ಹೊಸಮನಿ, ಶಿರಾಜ್ ಹುಸೇನ್, ಶರಣಬಸವರಾಜರೆಡ್ಡಿ  ಸೇರಿದಂತೆ ಹಲವು ಜನಪ್ರತಿನಿಧಿಗಳು, ಸಹಸ್ರಾರು ಭಕ್ತರು ಸದ್ಬಾವನಾ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)