ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾ ರಥೋತ್ಸವದ ನಂತರವೂ ಭಕ್ತರ ದಂಡು

ಬಳಗಾನೂರಿನ ಶಿವಶಾಂತವೀರ ಸ್ವಾಮೀಜಿಯಿಂದ ಮರಿಶಾಂತವೀರ ಶಿವಯೋಗಿಗಳ ಗದ್ದುಗೆಯವರೆಗೂ ದೀರ್ಘದಂಡ ನಮಸ್ಕಾರ
Last Updated 1 ಫೆಬ್ರುವರಿ 2021, 5:12 IST
ಅಕ್ಷರ ಗಾತ್ರ

ಕೊಪ್ಪಳ: ಸಂಸ್ಥಾನ ಗವಿಮಠದಲ್ಲಿ ಜಾತ್ರೆಯ ಅಂಗವಾಗಿ ಎರಡನೇ ದಿನ ಬೆಳಿಗ್ಗೆ 7:30 ಕ್ಕೆ ಶ್ರೀ ಶಿವಶಾಂತವೀರ ಶರಣರಿಂದ ದೀರ್ಘದಂಡ ನಮಸ್ಕಾರ ಕಾರ್ಯಕ್ರಮ ಜರುಗಿತು.

ಇದು ಗವಿಮಠದ ಪರಂಪರಾಗತ ಸಂಪ್ರದಾಯ.ಚಿಕ್ಕೇನಕೊಪ್ಪದ ಚನ್ನವೀರ ಶರಣರು ತಮ್ಮ ಗುರು ಗವಿಮಠದ ಮರಿಶಾಂತವೀರ ಶಿವಯೋಗಿಗಳಿಂದ ಚಿನ್ಮಯಾನುಗ್ರಹ ದೀಕ್ಷೆ ಪಡೆದ ನಂತರ ಅಂದಿನಿಂದ ನಿರಂತರವಾಗಿ ಶಿವಯೋಗಿಗಳ ಗದ್ದುಗೆಯ ತನಕ ದೀರ್ಘದಂಡ ನಮಸ್ಕಾರ ಹಾಕುತ್ತಿದ್ದರು.

ಅವರ ಲಿಂಗೈಕ್ಯರಾದ ಬಳಿಕ ಬಳಗಾನೂರಿನ ಶರಣಾರಾದ ಶಿವಶಾಂತವೀರ ಶರಣರು ತಮ್ಮ ಗುರು ಪರಂಪರೆ ಮುನ್ನಡೆಸಿಕೊಂಡು ಬಂದಿದ್ದಾರೆ. ಹೊಂಬಳ, ಚಿಕ್ಕೇನಕೊಪ್ಪ, ಸೂಡಿ ಗ್ರಾಮದ ಸದ್ಭಕ್ತರ ಭಜನಾ ಮಂಡಳಿಯವರ ಭಕ್ತಿ ಗೀತೆ, ಜಯಘೋಷದ ಮಧ್ಯೆ ಉಘೇ, ಉಘೇ ಗವಿಸಿದ್ಧ ಎಂಬ ಘೋಷಣೆ ಮೂಲಕ ಮಠದ ಸುತ್ತ ದೀರ್ಘದಂಡ ನಮಸ್ಕಾರ ಹಾಕಿದರು.

ಪ್ರತಿವರ್ಷ ಶರಣರ ಜತೆ ಹರಕೆ ಹೊತ್ತ ಸಾವಿರಾರು ಭಕ್ತರು ದೀರ್ಘದಂಡ ನಮಸ್ಕಾರ ಹಾಕುವ ಪರಂಪರೆ ಇದೆ. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಶರಣರು ಮಾತ್ರ ಧಾರ್ಮಿಕ ಕ್ರಿಯಾವಿಧಿ ನೆರೆವೇರಿಸಿದರು.

ಬಳಗಾನೂರಿನ ಶಿವಶಾಂತವೀರ ಶರಣರು ಶ್ರೀಮಠದ ದ್ವಾರಬಾಗಿಲಿನಿಂದ ಹಿಡಿದು ಗವಿಮಠದ ಬೆಟ್ಟದ ಮೇಲಿನ ಮರಿಶಾಂತವೀರ ಶಿವಯೋಗಿಗಳ ಗದ್ದುಗೆಯ ತನಕ ಹೂವಿನ ಹಾಸಿಗೆಯ ಮೇಲೆ ಭಕ್ತಿ ಭಾವಾವೇಷವಾಗಿ ದೀರ್ಘದಂಡ ನಮಸ್ಕಾರ ಹಾಕಿದರು.ಜಾತ್ರೆ ಸರಳವಾಗಿ ನಡೆಯುತ್ತಿದ್ದರೂ ಆಸ್ತಿಕ ಭಕ್ತರು ಗದ್ದುಗೆ ದರ್ಶನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ತೇರು ಮೈದಾನದಲ್ಲಿ ಯಾವುದೇ ಪ್ರದರ್ಶನ, ಕೈಲಾಸ ಮಂಟಪದಲ್ಲಿ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮ ಇಲ್ಲ. ಒಂದು ತಿಂಗಳವರೆಗೆ ನಡೆಯುವ ಜಾತ್ರೆಯಲ್ಲಿ ತರೇವಾರಿ ತಿನಿಸು ಮಾರಾಟ ಮಾಡುವ ಅಂಗಡಿಗಳು, ಗೃಹಪಯೋಗಿ ವಸ್ತುಗಳು, ವಿಭೂತಿ, ರುದ್ರಾಕ್ಷಿ, ಸಾಹಸ ಪ್ರದರ್ಶನ ನಡೆಯುತ್ತಿದ್ದವು.

ಆದರೆ ಈ ಸಾರಿ ಅವುಗಳಿಗೆ ಯಾವುದೇ ಅವಕಾಶ ನೀಡಿಲ್ಲ. ಆದರೂ ಗವಿಮಠಕ್ಕೆ ಹೋಗುವ ಎಲ್ಲ ರಸ್ತೆಗಳಲ್ಲಿ ಸಣ್ಣ, ಪುಟ್ಟ ವ್ಯಾಪಾರಸ್ಥರು ಅಂಗಡಿಗಳನ್ನು ಹಾಕಿಕೊಂಡು ವ್ಯಾಪಾರದಲ್ಲಿ ತೊಡಗಿದ್ದು ಕಂಡು ಬಂತು. ದಾಸೋಹ ಮಂಟಪದಲ್ಲಿ ದಾಸೋಹಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಭಕ್ತರಿಗೆ ದರ್ಶನ ನೀಡಿ, ಎಂದಿನಂತೆ ಮಠದ ಚಟುವಟಿಕೆಗಳಲ್ಲಿ ನಿರತರಾಗಿದ್ದು, ಕಂಡು ಬಂತು. ಸುತ್ತಮುತ್ತಲಿನ ಗ್ರಾಮಸ್ಥರು ಕಾಯಿ, ಕರ್ಪೂರ ಮಾಡಿಸಿಕೊಂಡು ದೇವರ ದರ್ಶನ ಪಡೆದರು.

ಸರತಿಯಲ್ಲಿ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಕೂಡಾ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT