ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದ್ದಲದ ಗ್ರಾಮಗಳಲ್ಲಿ ಸಾಮರಸ್ಯದ ಸಂದೇಶ ರವಾನೆ

ಬೂದಗುಂಪಾ, ಹಾಲಸಮುದ್ರ, ತಿಮ್ಮಾಪುರದಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿ ಸದ್ಭಾವನ ಯಾತ್ರೆ
Last Updated 19 ನವೆಂಬರ್ 2019, 12:15 IST
ಅಕ್ಷರ ಗಾತ್ರ

ಕಾರಟಗಿ: ತಾಲ್ಲೂಕಿನ ತ್ರಿವಳಿ ಗ್ರಾಮಗಳಾದ ಬೂದಗುಂಪಾ, ಹಾಲಸಮುದ್ರ ಹಾಗೂ ತಿಮ್ಮಾಪುರದಲ್ಲಿ ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ 5ನೇ ದಿನದ ಸದ್ಭಾವನ ಯಾತ್ರೆ ನಡೆಸಿ ಸಹಬಾಳ್ವೆ, ಸಾಮರಸ್ಯದ ಸಂದೇಶ ಸಾರಿದರು.

ಗದ್ದಲ, ಜಗಳ, ಪರಸ್ಪರ ವಿರೋಧ ಮನೋಭಾವನೆಯ ಗ್ರಾಮಗಳೆಂಬ ಖ್ಯಾತಿಗೆ ಒಳಗಾಗಿದ್ದ ತ್ರಿವಳಿ ಗ್ರಾಮಗಳಲ್ಲಿ ಮಂಗಳವಾರ ಭಿನ್ನ ವಾತಾವರಣ ನಿರ್ಮಾಣವಾಗಿತ್ತು. ಮೂರು ಗ್ರಾಮಗಳ ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು ಹೆಚ್ಚಾಗಿ ವಾಸಿಸುವ ಓಣಿಗಳಲ್ಲಿ ಸಗಣಿ ಸಾರಿಸಿ ಹಾಕಿದ್ದ ರಂಗು ರಂಗಿನ ರಂಗೋಲಿಗಳು, ಅದರ ಮಧ್ಯೆ ಇಟ್ಟಿದ್ದ ಹೂವು, ದೀಪಗಳು ಶಾಂತಿಯ ಸಂದೇಶ ರವಾನಿಸಿದವು. ಶ್ರೀಗಳು ಸಂಚರಿಸುವ ರಸ್ತೆಗಳಲ್ಲಿ ಬಾಳೆಯ ಗಿಡ, ತೆಂಗಿನ ಗರಿ, ಮಾವಿನ ಎಲೆ ಹಾಗೂ ಬಗೆಬಗೆಯ ಹೂಗಳಿಂದ ಸಿಂಗರಿಸಲಾಗಿತ್ತು.

ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಆಯಾ ಗ್ರಾಮಕ್ಕೆ ಬರುತ್ತಿದ್ದಂತೆ ಗ್ರಾಮದ ಹಾಲಿ, ಮಾಜಿ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಸ್ವಾಗತ ಕೋರಿದರೆ, ಸಮವಸ್ತ್ರಧಾರಿ ಶಾಲಾ ಮಕ್ಕಳು ಶ್ರೀಗಳಿಗೆ ಗುಲಾಬಿ ಹೂವುಗಳನ್ನು ನೀಡಿ ಗಮನ ಸೆಳೆದರು.

ಬೂದಗುಂಪಾದ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯಿಂದ ಆರಂಭಗೊಂಡ ಸದ್ಬಾವನಾ ಪಾದಯಾತ್ರೆಯು ಕುರುಬರ ಓಣಿ, ವಾಲ್ಮೀಕಿ ವೃತ್ತ, ಹರಿಜನ ಕೇರಿ, ದಾಸರ ಓಣಿ ಮೂಲಕ ಸಾಗಿ ತಿಮ್ಮಾಪುರ ತಲುಪಿತು. ತಿಮ್ಮಾಪುರ ಹಾಗೂ ಹಾಲ ಸಮುದ್ರದ ಕೆಲ ಗ್ರಾಮಗಳ ಅನೇಕ ಓಣಿಗಳಲ್ಲಿ ಸಂಚರಿಸಿದ ಶ್ರೀಗಳು ರಸ್ತೆಯ ಎಡ, ಬಲ ಭಾಗಗಳಲ್ಲಿ ತಮ್ಮ ನಿವಾಸಗಳ ಮುಂದೆ ನಿಂತಿದ್ದ ಭಕ್ತರಿಗೆ ಆಶೀರ್ವಾದ ಮಾಡಿ ಪಾದಯಾತ್ರೆ ಮುಂದುವರೆಸಿದರು.

ಬೂದಗುಂಪಾದ 3ನೇ ವಾರ್ಡ್‌ನ ಸುಂಕಲಮ್ಮದೇವಿ, ದಾಸರ ಓಣಿಯಲ್ಲಿ ಮಸೀದಿ, ನರಸಿಂಹಸ್ವಾಮಿ ದೇವಾಲಯ ಹಾಗೂ ಹಾಲಸಮುದ್ರ ಈಶ್ವರ ದೇವಸ್ಥಾನ ಸೇರಿದಂತೆ ಮಾರ್ಗ ಮಧ್ಯೆ ಇದ್ದ ದೇವಾಲಯಗಳಿಗೆ ತೆರಳಿ ಪುಷ್ಪಾರ್ಚನೆ ಮಾಡಿ ಭಕ್ತಿ ಭಾವದ ಸಂದೇಶ ಸಾರಿದರು.

‌ಸದ್ಬಾವನಾ ಪಾದಯಾತ್ರೆಯಲ್ಲಿ ಬೂದಗುಂಪಾ, ತಿಮ್ಮಾಪುರ, ಹಾಲಸಮುದ್ರ, ಯರಡೋಣಾ, ಕಾರಟಗಿ, ಚಳ್ಳೂರು, ಗುಂಡೂರು, ಸಿದ್ದಾಪುರ, ರಾಯಚೂರು ಜಿಲ್ಲೆಯ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ತ್ರಿವಳಿ ಗ್ರಾಮಗಳಲ್ಲಿ ನಡೆದ ಸದ್ಬಾವನಾ ಪಾದಯಾತ್ರೆಯ ಬಳಿಕ ಬೂದಗುಂಪಾದ ಶರಣಬಸವೇಶ್ವರ ದೇವಾಲಯದ ಆವರಣದಲ್ಲಿ ಧಾರ್ಮಿಕ ಸಭೆ ನಡೆಯಿತು.

ಶ್ರೀಗಳು ಗ್ರಾಮ ಪಂಚಾಯಿತಿಯ ನೂತನ ಕಟ್ಟಡದ ನೀಲನಕ್ಷೆಯನ್ನು ಬಿಡುಗಡೆ ಮಾಡಿದರು.

ಬಾಗಲಕೋಟೆ ಕೃಷ್ಣಯ್ಯಶಾಸ್ತ್ರಿ, ಹಂಚಿನಾಳಕ್ಯಾಂಪ್‌ನ ಶಿವಲಿಂಗಯ್ಯಸ್ವಾಮಿ ಹಿರೇಮಠ, ತಲೇಖಾನಮಠದ ವೀರಭದ್ರಯ್ಯ ಶರಣರು ಉಪಸ್ಥಿತರಿದ್ದರು. ಗ್ರಾಮದ ಪ್ರಮುಖರು ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಉಪಹಾರದ ವ್ಯವಸ್ಥೆ ಮಾಡಿದ್ದರು.

ತಿಮ್ಮಾಪುರದ ಬಳಿಕ ಬೂದಗುಂಪಾ ಭಾಗಕ್ಕೆ ಶ್ರೀಗಳ ಪಾದಯಾತ್ರೆ ಬಂದಾಗ ದೇವಾಲಯ ಹಾಗೂ ಮಸೀದಿ ಮಧ್ಯೆದ ರಸ್ತೆಯಲ್ಲಿ ಬಳಗಾನೂರಿನ ಚಿಕೇನಕೊಪ್ಪ ಚನ್ನವೀರ ಮಠದ ಶಿವಶಾಂತವೀರ ಶರಣರು ತಲೆದೂಗುವಂತೆ ಹಾಡಿದ ಸಂತ ಶಿಶುನಾಳ ಷರೀಫರ ‘ಮರುಳೇ ಮರತೀರಾ ಬೇಡಾಗುವಿನ, ಮಾಡೋ ಶ್ರೀಶಿವಭಜನಾ ನಿಯಮದಿ, ಅಳಿವುದು ಕಾಯ, ಉಳಿವುದು ಕೀರ್ತಿ’ಎಂಬ ತತ್ವಪದವು ಎಲ್ಲರನ್ನು ಮಂತ್ರಮುಗ್ದರನ್ನಾಗಿಸಿತು.

ಮೌನವ್ರತ ಮುರಿದ ಉಭಯ ಶ್ರೀಗಳು: ಕೊಪ್ಪಳ ಶ್ರೀಗವಿಸಿದ್ದೇಶ್ವರ ಸ್ವಾಮೀಜಿ ಹಾಗೂ ಚಿಕೇನಕೊಪ್ಪದ ಶಿವಶಾಂತವೀರ ಶರಣರು ಪ್ರತಿ ಮಂಗಳವಾರ ಮೌನ ಅನುಷ್ಠಾನದಲ್ಲಿರುತ್ತಾರೆ. ಭಕ್ತರ ಅನುಕೂಲಕ್ಕಾಗಿ ಸದ್ಭಾವನ ಯಾತ್ರೆ ಹಾಗೂ ಪ್ರವಚನ ಹಮ್ಮಿಕೊಳ್ಳಲಾಗಿದೆ. ಈಗಾಗಿ ಪಾದಯಾತ್ರೆಯಲ್ಲಿ ಚಿಕೇನಕೊಪ್ಪ ಶರಣರು ನಿರಂತರ ಭಜನೆ ಮಾಡಬೇಕಿರುವುದರಿಂದ ಮೌನ ವೃತ ಕೈಬಿಟ್ಟರೆ, ಸಂಜೆ ಗವಿಸಿದ್ದೇಶ್ವರ ಶ್ರೀಗಳು ಪ್ರವಚನ ಮಾಡುವುದರೊಂದಿಗೆ ಮೌನವೃತ ಮುರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT