ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗವಿಸಿದ್ಧೇಶ್ವರನ ದರ್ಶನಕ್ಕೆ ಭಕ್ತರ ದಂಡು: ಜಾತ್ರೆ ನೆನಪಿಸಿದ ಸಂಭ್ರಮ

ಗವಿಮಠದ ದಾಸೋಹ ಮಂಟಪದಲ್ಲಿ ಪ್ರಸಾದ ವ್ಯವಸ್ಥೆ
Last Updated 2 ಫೆಬ್ರುವರಿ 2022, 3:13 IST
ಅಕ್ಷರ ಗಾತ್ರ

ಕೊಪ್ಪಳ: ಕೋವಿಡ್‌ ನಿರ್ಬಂಧ ತೆರವುಗೊಳಿಸಿದ ಪರಿಣಾಮ ಸಾವಿರಾರು ಭಕ್ತರು ಮಂಗಳವಾರ ಅಮಾವಾಸ್ಯೆ ಪ್ರಯುಕ್ತ ಸಾವಿರಾರು ಭಕ್ತರು ಭೇಟಿ ನೀಡಿ ಗವಿಸಿದ್ಧೇಶ್ವರನ ದರ್ಶನ ಪಡೆದರು.

ಕೋವಿಡ್‌ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವವನ್ನು ಸರಳವಾಗಿ ಆಚರಿಸಲಾಗಿತ್ತು. ಪ್ರತಿವರ್ಷ 15 ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತಿದ್ದ ಜಾತ್ರೆಗೆ ಅಮಾವಾಸ್ಯೆಯ ದಿನ ಅಧಿಕೃತವಾಗಿ ತೆರೆ ಬೀಳುತ್ತಿತ್ತು. ಎರಡು ವರ್ಷಗಳಿಂದ ಜಾತ್ರೆ ನಡೆಯದೇ ಸೀಮಿತ ಭಕ್ತರ ಮಧ್ಯೆ ರಥವನ್ನು ಎಳೆದು ಸಂಪ್ರದಾಯ ಪಾಲಿಸಲಾಗಿತ್ತು. ಗವೀಶನ ಮೇಲೆ ಅಪಾರ ಭಕ್ತಿಯನ್ನು ಹೊಂದಿರುವ ಈ ಭಾಗದ ಜನ ನಿರ್ಬಂಧ ತೆರವಿಗೆ ಕಾಯುತ್ತಿದ್ದರೇನೋ ಎನ್ನುವಂತೆ ಸಾವಿರಾರು ಸಂಖ್ಯೆಯಲ್ಲಿ ಬಂದು ದೇವರ ದರ್ಶನ ಪಡೆದರು.

ಗವಿಮಠದ ದಾಸೋಹ: ರಾಜ್ಯದಲ್ಲಿಯೇ ಗವಿಮಠದ ದಾಸೋಹ ಎಲ್ಲೆಡೆ ಪ್ರಸಿದ್ಧಿ ಪಡೆದಿದೆ. ಶಿಸ್ತು, ಅಚ್ಚುಕಟ್ಟುತನದಿಂದ ಭಕ್ತರಿಗೆ ಬೇಡಿದಷ್ಟು ಅನ್ನದಾಸೋಹ ನೀಡುವ ಮೂಲಕ ಭಕ್ತರ ತನು, ಮನ ತಣಿಸುವಲ್ಲಿ ಸದಾ ಶ್ರಮಿಸುತ್ತಲೇ ಬಂದಿದೆ.

ಈ ಹಿಂದಿನಂತೆ ಅಮಾವಾಸ್ಯೆ ದಾಸೋಹಕ್ಕೆ ದಾಸೋಹಮಂಟಪ ಸಿದ್ಧಗೊಳಿಸಲಾಗಿತ್ತು. ನೂರಾರು ಕಾರ್ಯಕರ್ತರು, ಸಂಸ್ಥೆಯ ವಿದ್ಯಾರ್ಥಿಗಳು ಪ್ರಸಾದ ಬಡಿಸಿದರು. ಅನ್ನ, ಸಾಂಬಾರು, ರೊಟ್ಟಿ, ಉಪ್ಪಿನಕಾಯಿ, ಪುಟಾಣಿ ಚಟ್ನಿ, ಗೋಧಿ ಹುಗ್ಗಿ, ಪಲ್ಯ ಸಮಾರಾಧನೆ ನಡೆಯಿತು.

ಗವಿಮಠದ ಪೀಠಾಧಿಪತಿ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಭಕ್ತರಿಗೆ ದರ್ಶನ ನೀಡಿ, ಜಾತ್ರೆಯನ್ನು ಸಾಂಗವಾಗಿ ನೆರವೇರಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿ ಹರಿಸಿದರು.

ಜಾತ್ರೆಯ ನೆನಪು: ಪ್ರತಿ ವರ್ಷ ಜಾತ್ರೆಯ ಸಂದರ್ಭದಲ್ಲಿ ಸೇರುತ್ತಿದ್ದ ಜನರು ಕಳೆದ 2 ವರ್ಷಗಳಿಂದ ನಿರ್ಬಂಧವಿದ್ದುದರಿಂದ ಕಡಿಮೆ ಸಂಖ್ಯೆಯಲ್ಲಿ ಬಂದಿದ್ದರು. ಅಮಾವಾಸ್ಯೆಯ ದಿನ ಸುತ್ತಲಿನ ಎಲ್ಲ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಭಕ್ತರು ಗವಿಮಠಕ್ಕೆ ಬಂದಿದ್ದರಿಂದ ಅಂದಾಜು 1 ಲಕ್ಷ ಜನರು ಪ್ರಸಾದ ಸ್ವೀಕರಿಸಿದ್ದಾರೆ.

ಜಾತ್ರೆಯಲ್ಲಿ ಕಾಯಂ ಮಳಿಗೆಗಳು ಇರದೇ ಇದ್ದರೂ ರಸ್ತೆ ಉದ್ದಕ್ಕೂ ತಾತ್ಕಾಲಿಕವಾಗಿ ತಲೆ ಎತ್ತಿದ್ದ ತರಹೇವಾರಿ ಸಾಮಗ್ರಿ ಮಾರಾಟ ಮಾಡುವ ಅಂಗಡಿಗಳಲ್ಲಿ ಗ್ರಾಹಕರು ಖರೀದಿಸುವ ದೃಶ್ಯ ಸಾಮಾನ್ಯವಾಗಿತ್ತು. ಗವಿಮಠಕ್ಕೆ ಹೋಗುವ ಮಾರುಕಟ್ಟೆ ರಸ್ತೆ, ಬಸವೇಶ್ವರ ವೃತ್ತದಿಂದ ಮಠಕ್ಕೆ ಹೋಗುವ ರಸ್ತೆಗಳಲ್ಲಿ ಜನದಟ್ಟಣೆ ಉಂಟಾಗಿತ್ತು.

ಸುತ್ತಮುತ್ತಲಿನ ಗ್ರಾಮದ ಭಕ್ತರು ಮಠಕ್ಕೆ ತಂದಿದ್ದ ದವಸ, ಧಾನ್ಯ ಕಾಣಿಕೆ ಅರ್ಪಿಸಿದರು. ಹರಕೆ ಹೊತ್ತ ಭಕ್ತರು ದಾಸೋಹ ಸೇವೆ ಮಾಡಿ ವಾರ್ಷಿಕ ಜಾತ್ರಾ ಪರಿಕ್ರಮಕ್ಕೆ ಮಂಗಳ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT