ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಬೇಟೆಗಾರನ ಅಪರೂಪದ ವೀರಗಲ್ಲು ಪತ್ತೆ

ಯುವ ಉಪನ್ಯಾಸಕಿ ಗೀತಾ ಪಾಟೀಲ ಸಂಶೋಧನೆ
Last Updated 24 ಅಕ್ಟೋಬರ್ 2021, 3:54 IST
ಅಕ್ಷರ ಗಾತ್ರ

ಕೊಪ್ಪಳ: ನಾಡಿನ ಇತಿಹಾಸ ಸಂಶೋಧಕರು ಈ ಭಾಗದಲ್ಲಿ ನೂರಾರು ವರ್ಷಗಳಿಂದ ಸಂಶೋಧನೆ ನಡೆಸುತ್ತಾ ಬಂದಿದ್ದು, ಜಿಲ್ಲೆಯ ಪ್ರಾಗೈತಿ ಹಾಸಿಕ ಇತಿಹಾಸದಿಂದ ಆಧುನಿಕ ಇತಿಹಾಸದವರೆಗೆ ಮಾನವನ ಪ್ರಾಚೀನ ನೆಲೆ ಎಂಬುವುದನ್ನು ಗುರುತಿಸಿದ್ದಾರೆ.

ಜಿಲ್ಲೆಯ ಬೆರಳಣಿಕೆಯ ಸಂಶೋಧಕರಲ್ಲಿ ಯುವ ಉಪನ್ಯಾಸಕಿ ವೀರಗಲ್ಲುಗಳ ಕುರಿತು ನಡೆಸಿದ ಅಧ್ಯಯನ ಗಮನ ಸೆಳೆಯುತ್ತದೆ. ವಿಜಯನಗರ ವಿವಿಯ ಸ್ನಾತಕೋತ್ತರ ಕೇಂದ್ರದ ಗೀತಾ ಪಾಟೀಲ ತಮ್ಮ ಆಸಕ್ತಿಯಿಂದ ವಿಶೇಷ ಇತಿಹಾಸವನ್ನು ಹೇಳುವ ವೀರಗಲ್ಲುಗಳನ್ನು ಪತ್ತೆ ಹಚ್ಚಿ ಅಧ್ಯಯನ ಆಸಕ್ತರಲ್ಲಿ ಕೂತೂಹಲ ಮೂಡಿಸಿದ್ದಾರೆ.

ಕ್ರಿ.ಶ. 17 ನೇ ಶತಮಾನದ ಪಾಳೆಗಾರರ ಕಾಲದ್ದು ಎನ್ನಲಾದ ವಿಶೇಷ ವೀರಗಲ್ಲನ್ನುರಾಯಚೂರು ತಾಲೂಕಿನ ಇಡಪನೂರು ಗ್ರಾಮದಲ್ಲಿ ಪತ್ತೆ ಮಾಡಿದ್ದಾರೆ. ಇತಿಹಾಸ ಮತ್ತು ಪುರಾತತ್ವ ವಿಭಾಗದ ಅಧ್ಯಾಪಕಿ ಡಾ. ಗೀತಾ ಪಾಟೀಲ ಈ ಶಿಲ್ಪದ ವೈಶಿಷ್ಟ ಗುರುತಿಸಿದ್ದಾರೆ. ಗ್ರಾಮದ ಆಂಜನೇಯ ದೇವಾಲಯದ ಬಳಿ ಸಾಲಾಗಿ ಹಲವು ವೀರಗಲ್ಲು ಇವೆ. ಅವುಗಳಲ್ಲಿ ಮೊದಲಿಗೆ ಇರುವ ವೀರಗಲ್ಲು ವಿಶಿಷ್ಟ ಸಂಕಥನ ಸಂಕೇತಿಸುತ್ತಿದ್ದು ಗಮನ ಸೆಳೆಯುತ್ತದೆ.

ಈ ವೀರಗಲ್ಲು ಬೇಟೆಗಾರನ ಕುರಿತಾಗಿದೆ. ಅಂದಿನ ಕಾಲದ ಪಾಳೆಗಾರರ ಕುರಿತು, ಅವರ ಬೇಟೆಗಳ ಕುರಿತು ಈ ವೀರಗಲ್ಲು ತಿಳಿಸುತ್ತವೆ ಎಂದು ಹೇಳಬಹುದು. 7.5ಅಡಿ ಅಗಲ,3.5 ಅಡಿ ಎತ್ತರ ಅಳತೆಯ ಈ ವೀರಗಲ್ಲು ವೀರನೊಬ್ಬನ ಬೇಟೆಗಾರಿಕೆಯನ್ನು ನಿದರ್ಶಿಸುತ್ತದೆ. ಸರ್ವಾಲಂಕಾರ ಭೂಷಿತ ಕುದುರೆಯನ್ನು ಸವಾರಿ ಮಾಡುತ್ತಿರುವ ವೀರ ಬೇಟೆಯಲ್ಲಿ ತೊಡಗಿದ್ದಾನೆ.

ಬಲಗೈಯಲ್ಲಿ ಭರ್ಚಿ ಎಡಗೈಯಲ್ಲಿ ಕಿರುಖಡ್ಗ ಹಿಡಿದಿದ್ದಾನೆ. ಕುದುರೆಯ ಮುಂದೆ ಸೇವಕನೊಬ್ಬ ಬಲಗೈಯಿಂದ ಕುದುರೆ ಲಗಾಮನ್ನು ಹಿಡಿದಿದ್ದರೆ ಎಡಗೈಯಲ್ಲಿ ನೀರಿನ ಚೀಲ (ಚರ್ಮದ್ದು) ಇದೆ. ಬೇಟೆಗೆ ನಾಯಿಯನ್ನು ಕರೆದೊಯ್ದಿದ್ದಾರೆ. ವೀರನ ಸುತ್ತಲೂ ಆಮೆ, ಹಾವು, ಗಿಣಿ, ಸೂರ್ಯ, ಚಂದ್ರರನ್ನು ಕೆತ್ತಲಾ ಗಿದೆ. ಸೂರ್ಯಚಂದ್ರರ ಶಿಲ್ಪಗಳು ಸಹಜವಾದರೂ ಗಿಣಿ ಕೆಲವು ವೀರಗಲ್ಲು ಗಳಲ್ಲಿ ಮಾತ್ರಕಂಡು ಬರುತ್ತದೆ.

ಇವು ವೀರನ ಪ್ರಾಣವನ್ನು ಸಂಕೇತಿಸುತ್ತವೆ (ಪ್ರಾಣಪಕ್ಷಿ) ಎಂಬ ಅಭಿಪ್ರಾಯವಿದೆ. ಆದರೆ ಹಾವು, ಆಮೆಗಳ ಹಿನ್ನೆಲೆಯಲ್ಲಿ ಗಮನಿಸಿದರೆ ವಿಶೇಷವೆನಿಸುತ್ತವೆ. ಆಮೆ ಜಲಚರವಾದರೇ ಹಾವು ಉಭಯಚರ, ಗಿಣಿ ಆಕಾಶಚರಗಳಾಗಿವೆ. ಅಂದರೆ ಇವು ಜಲ, ಭೂಮಿ ಮತ್ತು ಆಕಾಶವನ್ನು ಸಂಕೇತಿಸುತ್ತವೆ. ಆಮೆ ನಿಧಾನಗತಿಯದಾದರೆ ಅದಕ್ಕಿಂತ ವೇಗದ್ದು ಹಾವು, ಹಾವಿಗಿಂತ ವೇಗದ್ದು ಗಿಣಿ. ಒಟ್ಟಿನಲ್ಲಿ ಇವು ವೀರನ ವ್ಯಕ್ತಿತ್ವ, ಅವನ ಹೋರಾಟದ ಹಿನ್ನೆಲೆ, ವೀರಮರಣವನ್ನು ದೃಷ್ಟಾಂತದ ಹಿನ್ನೆಲೆಯಲ್ಲಿ ನಿರೂಪಿಸುತ್ತವೆ.

'ಈ ವೀರಗಲ್ಲು ಶೋಧನೆಯಲ್ಲಿ ಡಾ.ರವೀಂದ್ರ ಬಟಗೇರಿ, ಶ್ರುತಿ ದೇಸಾಯಿ ನೆರವಾಗಿದ್ದಾರೆ. ನಮ್ಮ ಭಾಗದಲ್ಲಿ ಬೇಟೆಗಾರರು, ಪಾಳೆಗಾರರು ಹೆಚ್ಚಾಗಿದ್ದ ಕಾರಣ ಅಂದಿನ ಕಾಲದ ಅವರ ಜೀವನ ಕುರಿತ ವೀರಗಲ್ಲುಗಳನ್ನು ಕೆತ್ತಲಾಗಿದೆ. ಇವು ನಮ್ಮ ಭಾಗದಲ್ಲಿ ದೊರೆತಿರುವುದು ಸಂತಸ ತಂದಿದೆ. ನಮ್ಮ ಸಂಶೋಧನೆಗೆ ಈ ವೀರಗಲ್ಲು ಇಂಬು ನೀಡಿದೆ' ಎನ್ನುತ್ತಾರೆ ಡಾ.ಗೀತಾ.

ಶಿಲಾಶಾಸನದಲ್ಲಿ ಕೆಲವೇ ಸಾಧಕಿ ಮಹಿಳೆಯರ ಜೊತೆಗೆ ಗುರುತಿಸಿಕೊಳ್ಳಬೇಕು ಎಂಬ ಉತ್ಸಾಹದಲ್ಲಿ ಇರುವ ಗೀತಾ ನಿರಂತರ ಅಧ್ಯಯನ, ಸಂಶೋಧನೆ ಮೂಲಕ ಗಮನ ಸೆಳೆಯುತ್ತಿದ್ದಾರೆ.

*
ಇಡಪನೂರು ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ಈ ವಿಶೇಷ ವೀರಗಲ್ಲು ಪತ್ತೆಯಾಗಿದೆ. ಇದು ಅಪರೂಪದ್ದಾಗಿದ್ದು, ಗಿಣಿ, ಹಾವು, ನಾಯಿ, ಆಮೆಯ ಚಿತ್ರ ಇದುವರೆಗೂ ಎಲ್ಲಿಯೂ ಪತ್ತೆಯಾಗಿಲ್ಲ.
-ಡಾ.ಗೀತಾ ಪಾಟೀಲ, ಸಂಶೋಧಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT