ರೈತರಿಗೆ 10 ತಾಸು ವಿದ್ಯುತ್ ನೀಡಲು ಚಿಂತನೆ: ಸಚಿವ ಆರ್.ಶಂಕರ್

7
110 ಕೆ.ವಿ ಸಾಮರ್ಥ್ಯದ ವಿದ್ಯುತ್ ಘಟಕ ಉದ್ಘಾಟನೆ

ರೈತರಿಗೆ 10 ತಾಸು ವಿದ್ಯುತ್ ನೀಡಲು ಚಿಂತನೆ: ಸಚಿವ ಆರ್.ಶಂಕರ್

Published:
Updated:
Deccan Herald

 ಕೊಪ್ಪಳ: ಈ ಭಾಗದ ರೈತರ ಮತ್ತು ಜನಪ್ರತಿನಿಧಿಗಳ ಬೇಡಿಕೆಯಂತೆ 10 ತಾಸು ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ನೀಡಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್ ತಿಳಿಸಿದರು.

ಜಿಲ್ಲೆಯ ಕನಕಗಿರಿ ಮತಕ್ಷೇತ್ರದ ಬೆನ್ನೂರು ಗ್ರಾಮದಲ್ಲಿ 110 ಕೆ.ವಿ ಸಾಮರ್ಥ್ಯದ ವಿದ್ಯುತ್ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

ಕಾರಟಗಿ ಭಾಗದಲ್ಲಿ ಕಾಲುವೆ ಮತ್ತು ನೀರಿನ ಸೌಲಭ್ಯ ಇದ್ದರೂ, ವಿದ್ಯುತ್ ಕೊರತೆಯಿಂದ ರೈತರ ಬೆಳೆಗಳಿಗೆ ನೀರು ಹಾಯಿಸಲು ತೊಂದರೆ ಉಂಟಾಗಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಬಳಿ ಚರ್ಚಿಸಿ  ಕ್ರಮ ಕೈಗೊಳ್ಳಲಾಗುವುದು ಎಂದರು.

‘ನಾನು ಪಕ್ಷೇತರ ಸದಸ್ಯನಾಗಿದ್ದುಕೊಂಡು, ಜನರ ಅಭಿಮಾನದಿಂದ ಮೊದಲ ಬಾರಿಗೆ ಸಚಿವನಾಗಿದ್ದೇನೆ. ಹೀಗಾಗಿ ನಾನು ಜಾತ್ಯಾತೀತ ಮತ್ತು ಪಕ್ಷಾತೀತ ವ್ಯಕ್ತಿ. ಆದ್ದರಿಂದ ಜನರ ಕೆಲಸಕ್ಕೆ ಮೊದಲ ಆದ್ಯತೆ ನೀಡುತ್ತೇನೆ’ ಎಂದು ಭರವಸೆ ನೀಡಿದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ‘ಈ ಭಾಗದಲ್ಲಿ ವಿದ್ಯುತ್ತಿನ ಸಮಸ್ಯೆ ಪ್ರಮುಖವಾಗಿದೆ. ಸರ್ಕಾರದ‌ ಮಟ್ಟದಲ್ಲಿ ಚರ್ಚೆ ನಡೆಸಿ ಬಗೆಹರಿಸಬೇಕು. ಅಲ್ಲದೆ ಜಿಲ್ಲೆಯ ಕೊನೆಯ ಭಾಗದ ಈ ಹಳ್ಳಿಗಳಿಗೆ ರಸ್ತೆ ಸಂಪರ್ಕ ಇಲ್ಲದೆ ಇರುವುದರಿಂದ ಜನರಿಗೆ ತುಂಬ ತೊಂದರೆ ಆಗಿದೆ. ಜಿಲ್ಲಾಧಿಕಾರಿ ಮತ್ತು ಸಿಇಒ ಸೇರಿ ಕ್ರಿಯಾ ಯೋಜನೆ ತಯಾರಿಸಿ, ಶೀಘ್ರ ಉತ್ತಮ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಬೇಕು. ಇದಕ್ಕೆ ನಮ್ಮ ಸಹಕಾರ ಇದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಸವರಾಜ ದಡೇಸ್ಗೂರ, ‘ಸಚಿವರು ಆದ್ಯತೆ ಮೇರೆಗೆ ನಮ್ಮ ಭಾಗದಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಮೂಲಭೂತ ಸಮಸ್ಯೆಗಳನ್ನು ಪರಿಹಾರಕ್ಕೆ ಆದ್ಯತೆ ನೀಡಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಪಿ.ಸುನಿಲ್ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ವೆಂಕಟರಾಜಾ, ಜಿಲ್ಲಾ ಅರಣ್ಯಾಧಿಕಾರಿ ಯಶಪಾಲ್ ಕ್ಷೀರಸಾಗರ, ಗಂಗಾವತಿ ಎಪಿಎಂಸಿ ಅಧ್ಯಕ್ಷ ದುರ್ಗಾರಾವ್, ಕಾರಟಗಿ ಅಧ್ಯಕ್ಷ ಶಶಿಧರಗೌಡ ಪಾಟೀಲ್, ಕೆಪಿಟಿಸಿಎಲ್ ಅಧಿಕಾರಿ ಇ.ಪ್ರಲ್ಹಾದ್ ಇದ್ದರು.

ಸಂಸದರ ಕಾಲೆಳೆದ ಸಚಿವ

ಸಚಿವರು ಕಾಟಾಚಾರಕ್ಕೆ ಬರ ಪರಿಶೀಲನೆ ನಡೆಸಿದ್ದಾರೆ ಎಂದು ಕಳೆದ ವಾರದ ಹಿಂದೆ ಸಂಸದ ಸಂಗಣ್ಣ ಕರಡಿ ಹೇಳಿಕೆ ನೀಡಿದ್ದರು.

ಈಗ ನಾವು ಬರ ಪರಿಶೀಲಿಸಿ, ಸರ್ಕಾರಕ್ಕೆ ವರದಿ ಮಾಡಿ ಕೊಪ್ಪಳದ ನಾಲ್ಕು ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಿದ್ದೇವೆ ಎಂದು ಸಚಿವ ಶಂಕರ್ ಉತ್ಸಾಹದಿಂದ ಹೇಳುತ್ತಿದ್ದಾಗ, ಸಂಸದ ಕರಡಿ ಜಿಲ್ಲಾಧಿಕಾರಿ ಜೊತೆ ಗಂಭೀರ ಚರ್ಚೆಯಲ್ಲಿ ತೊಡಗಿದ್ದರು.

ತೀಕ್ಷ್ಣವಾಗಿ ದೃಷ್ಟಿ ಹರಿಸಿ 'ಯಜಮಾನ್ರೆ, ಕೇಳಿಸಿಕೊಳ್ಳಿ,' ಎಂದು ಎರಡು ಬಾರಿ ಕೂಗಿದರು. ಈಗ ನಾವು ಬರ ಘೋಷಣೆ ಮಾಡಿದ್ದೇವೆ. ಇನ್ನು ನಿಮ್ಮ ಜವಾಬ್ದಾರಿ ಜಾಸ್ತಿ ಇದೆ. ಕೇಂದ್ರ ಸರ್ಕಾರಕ್ಕೆ ಹೇಳಿ ಕೊಡಿಸಿ ಎಂದು ಕಿಚಾಯಿಸಿದರು. ಅದಕ್ಕೆ ಸಂಸದರು ಮುಗುಳ್ನಗೆಯ ಪ್ರತಿಕ್ರಿಯೆ ನೀಡಿದರು.

ಮತ್ತೆ ಸಚಿವ ಶಂಕರ್ ಹಾಗೇನಿಲ್ಲ, ಸಂಗಣ್ಣ ನಮ್ಮ ಹಿರಿಯರು. ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಹೇಳಿದರು.

* ಹಸಿರು ಕರ್ನಾಟಕ ನಮ್ಮ ಗುರಿಯಾಗಿದ್ದು, ಎಲ್ಲರೂ ತಮ್ಮ ಹೊಲ, ಮನೆಗಳ ಬದಿ ಸಸಿಗಳನ್ನು ನೆಡುವ ಮೂಲಕ ಪರಿಸರ ರಕ್ಷಣೆಗೆ ಶ್ರಮಿಸಬೇಕು.
–ಆರ್. ಶಂಕರ್, ಜಿಲ್ಲಾ ಉಸ್ತುವಾರಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !