ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಮಳೆ: ಬಿತ್ತನೆ ಆರಂಭ

Last Updated 25 ಮೇ 2021, 13:03 IST
ಅಕ್ಷರ ಗಾತ್ರ

ಹನುಮಸಾಗರ: ಈ ಬಾರಿ ಮುಂಗಾರು ಮಳೆ ಅವಧಿ ಪೂರ್ವದಲ್ಲಿಯೇ ಆರಂಭವಾಗಿರುವುದರಿಂದ ರೈತರಲ್ಲಿ ಸಂತಸ ಮನೆ ಮಾಡಿದೆ. ಬಿತ್ತನೆ ಧಾವಂತ ಎಲ್ಲೆಡೆ ಕಂಡುಬರುತ್ತಿದೆ.

ರೈತರು ಸೂರ್ಯಕಾಂತಿ, ಎಳ್ಳು, ಸಜ್ಜೆ, ಹೆಸರು ಬಿತ್ತನೆ ಮಾಡುತ್ತಿರುವುದು ಮಂಗಳವಾರ ಕಂಡುಬಂತು.

ಕಡೇಕೊಪ್ಪದ ರೈತ ಈರಣ್ಣ ಜೀಗೇರಿ ಹಸಿ ಆರಿದರೆ ಮತ್ತೆ ಮಳೆಗಾಗಿ ಕಾಯುತ್ತಾ ಕೂಡಬೇಕು ಎಂದು ತಮ್ಮ ಜಮೀನಿನ ಆಸುಪಾಸಿನ ನಾಲ್ಕಾರು ರೈತರನ್ನು ಸೇರಿಸಿಕೊಂಡು ಸಾಮೂಹಿಕವಾಗಿ ಎಳ್ಳು ಬಿತ್ತನೆ ಮಾಡಿದರು.

‘ಬಿತ್ತನೆ ನಂತರ ಸಸಿ ಬಂದ ಮೇಲೆ ಒಂದು ಉತ್ತಮ ಮಳೆಯಾದರೆ ಸಾಕು ಎಳ್ಳು ಬೆಳೆ ಬಂದಂತೆ ಸರಿ. ಹೆಸರು ಅಥವಾ ಎಳ್ಳು ತೆಗೆದುಕೊಂಡು ಎರಡನೇ ಬೆಳೆ ಬಿತ್ತನೆ ಮಾಡಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸದಿಂದ ಬಿತ್ತನೆ ಮಾಡುತ್ತಿದ್ದೇವೆ’ ಎಂದು ನಿಂಗಪ್ಪ ಹೇಳಿದರು.

‘ಭಾನುವಾರ ನಮ್ಮ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಇಂದು ಬಹುತೇಕ ರೈತರು ಸೂರ್ಯಕಾಂತಿ ಹಾಗೂ ಹೆಸರು ಬಿತ್ತನೆ ಮಾಡುತ್ತಿದ್ದಾರೆ. ಈ ಬಾರಿ ಮಳಿ ನಮ್ಮನ್ನ ಕೈಹಿಡಿದಂತೆ ಕಾಣುತೈತ್ರಿ’ ಎಂದು ಗಡಚಿಂತಿ ಗ್ರಾಮದ ರೈತರಾದ ಮಹಾಂತೇಶ ಗೊರೇಬಾಳ ಹಾಗೂ ಹಾಬಲಕಟ್ಟಿ ಗ್ರಾಮದ ರೈತ ಮುತ್ತಪ್ಪ ನಾಗರಾಳ ಸಂತಸ ವ್ಯಕ್ತಪಡಿಸಿದರು.

ಈ ಮಧ್ಯೆ ಬಿತ್ತನೆಯ ಕೂರಗಿಗಳನ್ನು ತಯಾರಿಸುವ ಬಡಿಗೇರ–ಕಮ್ಮಾರರ ಕುಲುಮೆಗಳು ಲಾಕ್‍ಡೌನ್ ನಿಮಿತ್ತ ಬಂದ್ ಆಗಿದ್ದರಿಂದ ರೈತರಿಗೆ ದೊಡ್ಡ ಸಮಸ್ಯೆ ಎದುರಾಗಿದೆ. ಕೆಲ ರೈತರು ಈ ಮೊದಲೇ ಕೂರಗಿ ತಯಾರಿಸಿಕೊಂಡಿದ್ದರಿಂದ ಅಂತವರಿಗೆ ಯಾವ ತೊಂದರೆಯಾಗಿಲ್ಲ.

ಹನುಮನಾಳ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಖಾದರಿ ಬಿ ಮಾಹಿತಿ ನೀಡಿ,‘ಈ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಬಿತ್ತನೆಯಲ್ಲಿ ತೊಡಗಿದ್ದಾರೆ. ರೈತ ಸಂಪರ್ಕ ಕೇಂದ್ರದಲ್ಲಿ ಹೆಸರು, ಸಜ್ಜೆ, ತೊಗರಿ ಬೀಜಗಳು ಲಭ್ಯ ಇವೆ. ಲಾಕ್‌ಡೌನ್‌ ಕಾರಣ ರೈತರು ಬೆಳಿಗ್ಗೆ 6 ಗಂಟೆಯಿಂದ 10 ರವರೆಗೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬೀಜ ಮತ್ತು ಗೊಬ್ಬರ ಪಡೆಯಬಹುದಾಗಿದೆ’ ಎಂದರು.

ಅಲ್ಲದೆ ರೈತರು ಬರುವಾಗ ಕೃಷಿ ಪಾಸ್‍ಬುಕ್, ಆಧಾರ್ ಕಾರ್ಡ್‌, ಪಹಣಿಯ ನಕಲು ಪ್ರತಿ ತರಬೇಕು. ಪರಿಶಿಷ್ಟ ಜಾತಿ ಹಾಗೂ ಪಂಗಡದ ಫಲಾನುಭವಿಗಳಾಗಿದ್ದಲ್ಲಿ ಈ ಎಲ್ಲ ದಾಖಲೆಗಳ ಜತೆಗೆ ಜಾತಿ ಪ್ರಮಾಣಪತ್ರ ತರಬೇಕು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT