ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಸ್ವಾತಂತ್ರ್ಯದ ಕಥೆ ಹೇಳುವ ಸರ್ಕಾರಿ ಶಾಲೆಗಳು...

ಶತಮಾನ ಕಂಡ ಶಾಲೆಗಳಿಗೆ ಬೇಕಿದೆ ಅಭಿವೃದ್ಧಿ, ಶಾಲೆಗಳಿಗೂ ಇದು ‘ಅಮೃತ‘ ಗಳಿಗೆ...
Last Updated 14 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಕೊಪ್ಪಳ: ಭಾರತಕ್ಕೆ ಸ್ವಾತಂತ್ರ್ಯ ಬಂದು ಇಂದಿಗೆ ಸರಿಯಾಗಿ (ಆಗಸ್ಟ್ 15) 75 ವರ್ಷಗಳಾದವು. ಇದಕ್ಕೂ ಮೊದಲೇ ಜಿಲ್ಲೆಯಲ್ಲಿ ಆರಂಭವಾದ ಶಾಲೆಗಳು ಸ್ವಾತಂತ್ರ್ಯ ಪೂರ್ವದ ಘಟನೆಗಳಿಗೆ ಸಾಕ್ಷಿಯಂತಿವೆ.

20ನೇ ಶತಮಾನದ ಮೊದಲ ದಶಕದಲ್ಲಿ ಮಹಾತ್ಮ ಗಾಂಧೀಜಿಆರಂಭಿಸಿದ ಅಸಹಕಾರ ಚಳವಳಿ ಮೂಲಕ ಭಾರತದಲ್ಲಿ ಶಿಕ್ಷಣದ ಗರಿಮೆ ಮೂಡಿತು. ಲೋಕಮಾನ್ಯ ತಿಲಕರು ರಾಷ್ಟ್ರೀಯ ಶಿಕ್ಷಣಾಂದೋಲನದ ಜಾಗೃತಿ ಮೂಡಿಸಿದರು. ಇದರ ಪರಿಣಾಮ ಆಗಿನ ನಿಜಾಮ್‌ ಸಂಸ್ಥಾನದ ಮೇಲೂ ಆಗಿ ಕುಕನೂರಿನಲ್ಲಿ 1922ರಲ್ಲಿ ರಾಷ್ಟ್ರೀಯ ಶಾಲೆಆರಂಭವಾಯಿತು.

ಜೈನರ ಕಾಲದಲ್ಲಿ ಜಿಲ್ಲೆಯ ಅಳವಂಡಿ, ಮಾದಿನೂರು, ಇಟಗಿ, ಕುಕನೂರು ಸೇರಿ ಅನೇಕ ಊರುಗಳಲ್ಲಿ ದೊಡ್ಡ ಅಗ್ರಹಾರ ಇದ್ದವು. ಮುಂದೆ ಅವೇ ಶಾಲೆಗಳಾದವು. ಕುಷ್ಟಗಿ ತಾಲ್ಲೂಕಿನ ದೋಟಿಹಾಳ, ಗಂಗಾವತಿಯ ಪ್ರಾಪರ್‌ ಮತ್ತು ಯುಲಬುರ್ಗಾ ತಾಲ್ಲೂಕಿನ ಮುಧೋಳ ಗ್ರಾಮದ ಸರ್ಕಾರಿ ಶಾಲೆಗಳು ಶತಮಾನ ಕಂಡಿವೆ. ಗಂಗಾವತಿಯ ಎರಡು ಶಾಲೆಗಳು ಮತ್ತು ಕನಕಗಿರಿಯ ಒಂದು ಶಾಲೆ 75 ವರ್ಷಗಳನ್ನು ದಾಟಿವೆ. ಈ ಶಾಲೆಗಳ ಸಾಹಸಗಾಥೆಗಳು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಡಗರಕ್ಕೆ ಇಂಬು ಕೊಟ್ಟಿವೆ.

ಜಿಲ್ಲೆಯ ಹೆಗ್ಗುರುತುಗಳಂತೆ ಇರುವ ಈ ಶಾಲೆಗಳ ಅಭಿವೃದ್ಧಿಗೆ ಮತ್ತು ಉನ್ನತ ಸೌಲಭ್ಯ ಕಲ್ಪಿಸಲು ಸರ್ಕಾರ ಕ್ರಮ ವಹಿಸಬೇಕಿದೆ. ಕನಕಗಿರಿಯ ಶಾಲೆಯಲ್ಲಿ 18 ಶಿಕ್ಷಕ ಹುದ್ದೆಗಳು ಮಂಜೂರಿಯಾಗಿದ್ದರೂ 8 ಹುದ್ದೆ ಖಾಲಿಯಿವೆ. ಮೂವರು ಅತಿಥಿ ಶಿಕ್ಷಕರು ಮಾತ್ರ ಕೆಲಸ ಮಾಡುತ್ತಿದ್ದಾರೆ.

ಎಲ್ಲಾ ಶಾಲೆಗಳು ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಕ್ರೀಡಾ ಉಪಕರಣಗಳ ಸೌಲಭ್ಯದಿಂದ ವಂಚಿತಗೊಂಡಿವೆ. ಈ ಸೌಲಭ್ಯಗಳನ್ನು ಕಲ್ಪಿಸಿ, ಜಿಲ್ಲೆಯ ಹೆಮ್ಮೆಗಳಾಗಿ ಶತಮಾನದ ಶಾಲೆಗಳನ್ನು ಅಭಿವೃದ್ಧಿ ಪಡಿಸುವ ಮಹತ್ವದ ಜವಾಬ್ದಾರಿ ಸರ್ಕಾರದ ಮೇಲಿದೆ.

ಮುಧೋಳ: ಅಗ್ರಹಾರದ ಸರ್ಕಾರಿ ಶಾಲೆ

ಉಮಾಶಂಕರ ಹಿರೇಮಠ

ಯಲಬುರ್ಗಾ: ಅಗ್ರಹಾರ ಕೇಂದ್ರವಾಗಿದ್ದ ತಾಲ್ಲೂಕಿನ ಮುಧೋಳ ಗ್ರಾಮದಲ್ಲಿ 109 ವರ್ಷಗಳ ಹಿಂದೆಯೇ ಸರ್ಕಾರಿ ಪ್ರಾಥಮಿಕ ಶಾಲೆ ಆರಂಭಿಸಲಾಗಿತ್ತು. 1913ರಲ್ಲಿ 1ರಿಂದ 7ನೇ ತರಗತಿಗಳಿಗೆ ಸೀಮಿತಗೊಳಿಸಿ ಪ್ರಾರಂಭಗೊಂಡ ಶಾಲೆಯನ್ನು ಈಗ ಸ್ಮಾರಕದಂತೆ ಅಭಿವೃದ್ಧಿ ಪಡಿಸಬೇಕಿದೆ. ಶಾಲೆಯ ಮೂಲ ವಿನ್ಯಾಸದ ರಕ್ಷಣೆಗೆ ₹2.5 ಲಕ್ಷ ಬಿಡುಗಡೆಯಾಗಿದ್ದು ಹೊರತುಪಡಿಸಿದರೆ ಬೇರೆ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ.

ಎರಡು ವರ್ಷಗಳ ಹಿಂದೆಯೇ ಶಾಲೆಯ ಶತಮಾನೋತ್ಸವ ಆಚರಣೆಗೆ ಸಿದ್ಧತೆ ನಡೆದಿತ್ತು. ಆದರೆ, ಕೋವಿಡ್ ಕಾರಣ ಇದು ನೆರವೇರಲಿಲ್ಲ. ಶಾಲಾ ಕಟ್ಟಡಕ್ಕೆ ಬಣ್ಣ ಹಚ್ಚಲಾಗಿದ್ದು, ಕುಸಿದಿರುವ ಭಾಗ ಮಾತ್ರ ದುರಸ್ತಿ ಮಾಡಲಾಗಿದೆ.

‘ಗುಡಿಸಲು ಮಾದರಿಯ ಕಟ್ಟಡದಲ್ಲಿ ಎರಡು ಬದಿಯ ಪಡಸಾಲಿಯಲ್ಲಿ ಎದುರು ಬದುರು ತಲಾ ಎರಡು ಕೋಣೆಗಳು, ನಡುವೆ ವಿಶಾಲ 2 ಕೊಠಡಿಗಳು ಉತ್ತಮ ಸ್ಥಿತಿಯಲ್ಲಿವೆ. ಆದರೂ ಬಳಸಿಕೊಳ್ಳುತ್ತಿಲ್ಲ. ಶಾಲೆಯಲ್ಲಿ ಶಿಕ್ಷಣ ‍ಪಡದ ಹಲವರು ನ್ಯಾಯಾಧೀಶರು, ವಕೀಲರು, ವೈದ್ಯರು, ಎಂಜಿನಿಯರ್, ಪೊಲೀಸ್ ಅಧಿಕಾರಿಗಳಾಗಿದ್ದಾರೆ’ ಎಂದು ಸ್ಥಳೀಯರಾದ ಹುಸೇನ ಮೋತೆಕಾನ್ ತಿಳಿಸಿದರು.

ಅರೇಬಿಕ್‌ ಭಾಷೆಯಲ್ಲಿ ಮಾಹಿತಿ ದಾಖಲೆ

ಮೆಹಬೂಬ ಹುಸೇನ್

ಕನಕಗಿರಿ: 1936ರಲ್ಲಿ ನಿಜಾಮನ ಕಾಲದಲ್ಲಿ ಶಾಸಕರ ಮಾದರಿಯ ಶಾಲೆ ಆರಂಭವಾಯಿತು. ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಹಾಗೂ ಶಿಕ್ಷಕರ ವೇತನದ ಕುರಿತು ಅರೇಬಿಕ್‌ ಭಾಷೆಯಲ್ಲಿ ಮಾಹಿತಿ ಬರೆಯಲಾಗಿದೆ. ಆಗಿನ ಶಾಲಾ ದಾಖಲಾತಿ ಹೊಸ ಪುಸ್ತಕದ ರೀತಿ ಕಾಣುತ್ತಿದೆ. ಹಾಳೆಗಳು ಹರಿದಿಲ್ಲ ಎಂಬುದು ವಿಶೇಷ.

ಕೃಷ್ಣಾಚಾರ್ಯ, ಪ್ರಹ್ದಾದರಾವ, ಸಂಗಪ್ಪ ಚೆನ್ನಬಸಪ್ಪ, ಮರ್ದಾನಸಾಬ ಸೇರಿ ಹಲವು ಜನರು ಶಾಲೆ ಮೊದಲ ವಿದ್ಯಾರ್ಥಿಗಳಾಗಿದ್ದಾರೆ. ಕರ್ನಾಟಕ ಏಕೀಕರಣವಾಗುವ ಮುಂಚೆಯೇ ಮೈಸೂರು ರಾಜ್ಯದ ಅವಧಿಯಲ್ಲಿ ಉತ್ತಮ ಶಾಲೆ ಎಂಬ ಪ್ರಶಸ್ತಿಗೆ ಶಾಲೆಗೆ ಬಂದಿದೆ. ನಿಜಾಮರ ಕಾಲದ ಅವಧಿಯಲ್ಲಿ ಕನ್ನಡ ಪ್ರಥಮ ಭಾಷೆಯಾಗಿ, ಉರ್ದು ದ್ವಿತೀಯ ಭಾಷೆಯಾಗಿ ಕಲಿಸಲಾಗುತ್ತಿತ್ತು.

ದೋಟಿಹಾಳ ಶಾಲೆಗೆ 13 ದಶಕಗಳ ಸಂಭ್ರಮ

ನಾರಾಯಣರಾವ ಕುಲಕರ್ಣಿ

ಕುಷ್ಟಗಿ: ಅದು ಗ್ರಾಮದ ಹನುಮಂತ ದೇವರ ಗುಡಿಯ ಮೂಲೆಯೊಂದರಲ್ಲಿ ಬೆರಳೆಣಿಕೆ ಮಕ್ಕಳಿಂದ ಆರಂಭಗೊಂಡ ಕನ್ನಡ ಶಾಲೆ. ಅಲ್ಲಿ ಕಲಿತವರು ಬಹುಶಃ ಈಗ ಇರಲಿಕ್ಕಿಲ್ಲ. ಆದರೆ ಆಲದ ಮರದಂತೆ ಈಗ ಬೃಹದಾಕಾರವಾಗಿ ಬೆಳೆದ ಶಾಲೆ ಸಹಸ್ರ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ನೆರಳಾಗಿ ನಿಂತಿದೆ. ಹದಿಮೂರು ದಶಕಗಳ ಇತಿಹಾಸ ಹೊಂದಿರುವ ತಾಲ್ಲೂಕಿನ ದೋಟಿಹಾಳ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕಥೆ ಇದು. ಅಕ್ಷರ ಕಲಿಕೆಗೆ ಹಾಕಿದ ಬುನಾದಿ ಭದ್ರವಾಗಿರುವುದಕ್ಕೆ ಆಗಿನ ಹಿರಿಯರ ಶಿಕ್ಷಣದ ಬಗೆಗಿನ ಪರಿಕಲ್ಪನೆ ಮತ್ತು ದೂರದೃಷ್ಟಿಯಿಂದ ಊರಿದ ಅಕ್ಷರ ಬೀಜ ಮೊಳೆತು ಶಾಲೆ ಈಗ ಹೆಮ್ಮರವಾಗಿ ಬೆಳೆದು ನಿಂತಿದೆ.

1905ರಲ್ಲಿ ಖಾಸಗಿಯಾಗಿ ಆರಂಭಗೊಂಡ ಗುಡಿಯಿಂದ ಕೆಲ ವರ್ಷಗಳ ನಂತರ ಗ್ರಾಮದ ಬಾಡಿಗೆ ಮನೆಯಲ್ಲಿ ನಡೆಯುತ್ತಿತ್ತು. ಸ್ವಂತ ಕಟ್ಟಡದ ಭಾಗ್ಯ ದೊರಕಿದ್ದು ಸ್ವಾತಂತ್ರ್ಯಾ ನಂತರ. ಸರ್ಕಾರಿ ಶಾಲೆಯ ಹೊಸ ಕಟ್ಟಡದ ಉದ್ಘಾಟನೆ ನಡೆದಿದ್ದು, ಆಗಿನ ಶಿಕ್ಷಣ ಸಚಿವ ದಿ.ಎಸ್‌.ಆರ್‌.ಕಂಠಿ ಅವರಿಂದ.

ಜಾಗ ಖರೀದಿ ವಿಚಾರವೂ ಕುತೂಹಲದಿಂದ ಕೂಡಿದೆ. ಗ್ರಾಮಕ್ಕೆ ಹೊಂದಿಕೊಂಡಿದ್ದ ಜಮೀನು ಖರೀದಿಗೆ ಹಿರಿಯರು ಮುಂದಾದರೂ ಕೇವಲ ₹100 ಕೊರತೆಯಾಗಿತ್ತಂತೆ. ಅನಿವಾರ್ಯವಾಗಿ ಚಂದಪ್ಪ ಕಾಳಗಿ ಎಂಬುವವರ ಮನೆಯಲ್ಲಿನ ತಾಮ್ರದ ಕೊಡ, ಹಂಡೆ ಅಡ ಇಟ್ಟು ಅದರಿಂದ ಬಂದ ಜಮೀನು ಖರೀದಿ ಪ್ರಕ್ರಿಯೆ ನಡೆಸಲಾಗಿದ್ದನ್ನು ಗ್ರಾಮದ ಹಿರಿಯರು ಹೇಳುತ್ತಿದ್ದರು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷ ಶ್ರೀನಿವಾಸ ಕಂಟ್ಲಿ.

ಸದ್ಯ 1-8ನೇ ತರಗತಿವರೆಗಿನ ಈ ಶಾಲೆಯಲ್ಲಿ (1-3 ಪ್ರತ್ಯೇಕ ಆಂಗ್ಲ ಮಾಧ್ಯಮ) ಸುಮಾರು 656 ಮಕ್ಕಳು ಕಲಿಯುತ್ತಿದ್ದಾರೆ. ಈ ಶಾಲೆಯಲ್ಲಿ ಕಲಿತ ಬಹಳಷ್ಟು ವಿದ್ಯಾರ್ಥಿಗಳು ಉನ್ನತ ಸ್ಥಾನಮಾನಗಳಿಗೆ ಭಾಜನರಾಗಿದ್ದಾರೆ.

ಗಂಗಾವತಿ: ಶತಮಾನದ ಶಾಲೆಗೆ ಬೇಕಿದೆ ಅಭಿವೃದ್ಧಿ

ಎನ್‌. ವಿಜಯ

ಗಂಗಾವತಿಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪ್ರಾಪರ್ ಶಾಲೆಗೆ ಈಗ ಬರೋಬ್ಬರಿ 116 ವರ್ಷ. ಹಲವಾರು ವಿದ್ಯಾರ್ಥಿಗಳ ಬಾಳಿಗೆ ಶಾಲೆ ದೀವಿಗೆಯಾಗಿದೆ. ಗಂಗಾವತಿ ತಾಲ್ಲೂಕಿನಲ್ಲಿ ಶತಮಾನ ಪೂರೈಸಿದ ಏಕೈಕ ಶಾಲೆ ಇದಾಗಿದೆ. ಇಲ್ಲಿ 1ರಿಂದ 8ನೇ ತರಗತಿವರೆಗೆ 201 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.

2006ರಲ್ಲಿ ಅಂದಿನ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಎರಡು ಕೊಠಡಿಗಳನ್ನು ಉದ್ಘಾಟಿಸಿ ಶತಮಾನೋತ್ಸವ ಆಚರಿಸಿದ್ದರು. 1953‌ರಿಂದ ಈವರೆಗೆ 25 ಮುಖ್ಯಶಿಕ್ಷಕರು ಕಾರ್ಯ ನಿರ್ವಹಿಸಿದ್ದಾರೆ.

ಶತಮಾನದಲ್ಲಿ ಮೂರು ಬಾರಿ ಶಾಲೆ ನವೀಕರಣಗೊಂಡರೂ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಈ ಅನುದಾನದಲ್ಲಿ ಅಗತ್ಯ ಕೆಲಸಗಳು ಪೂರೈಸಿದ್ದು ಬಿಟ್ಟರೆ, ಇನ್ನೂ ಮೈದಾನ, 4 ಮತ್ತು 5ನೇ ತರಗತಿಗೆ ಕೊಠಡಿ, ಲ್ಯಾಬ್, ಸಿಬ್ಬಂದಿ, ಅಡುಗೆ ಕೊಠಡಿಗಳು ಬೇಕಾಗಿವೆ. ಕೆಲ ಕೊಠಡಿಗಳಲ್ಲಿ ಶಿಥಿಲವಾದ ಸ್ಥಿತಿಯಲ್ಲಿದ್ದು, ಅವುಗಳನ್ನ ಕೆಡವಿ ಹೊಸ ಕೊಠಡಿಗಳನ್ನು ನಿರ್ಮಿಸಬೇಕು ಎನ್ನುವ ಬೇಡಿಕೆಯಿದೆ.

ಇಸ್ಲಾಂಪುರ ಶಾಲೆಗೆ 80 ವರ್ಷ : ಗಂಗಾವತಿಯ ಇಸ್ಲಾಂಪುರ (ಬಂಬೂ ಬಜಾರ್) ಸರ್ಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ 1942ರಲ್ಲಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಸ್ಥಾಪನೆಯಾಯಿತು. ಇದು 80 ವರ್ಷ ಪೂರೈಸಿದ ಶಾಲೆಯಾಗಿ‌‌ದೆ.

ಮೊದಲಿಗೆ ಈ ಶಾಲೆ ಇಸ್ಲಾಂಪುರದ ಮಸೀದಿ ಸಮೀಪ ಗುಡಿಸಲುಗಳಲ್ಲಿ ನಡೆಸಲಾಗುತ್ತಿತ್ತು. ನಂತರ ಬಂಬೂ ಬಜಾರಿಗೆ ವರ್ಗಾಯಿಸಲಾಯಿತು. ಕನ್ನಡ ಮತ್ತು ಉರ್ದು ಎರಡು ಶಾಲೆಗಳು ಎರಡೂ ಒಂದೇ ಕಟ್ಟಡದಲ್ಲಿ ನಡೆಯುತ್ತವೆ ಎನ್ನುವುದು ವಿಶೇಷ. 1978ರಲ್ಲಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೆ ಏರಿತು.

2012ರಲ್ಲಿ ಉನ್ನತೀಕರಿಸಿದ ಶಾಲೆಯಾಗಿ ಹೊರಹೊಮ್ಮಿತು. ಸ್ಥಳದ ಅಭಾವದಿಂದ ಹಮಾಲರ ಕಾಲೊನಿಗೆ ಸ್ಥಳಾಂತರ ಮಾಡಲಾಯಿತು. ಕನ್ನಡ ಮತ್ತು ಉರ್ದು ಶಾಲೆ ವಿಭಾಗವಾಗಿ ಬೆಳಿಗ್ಗೆ ಉರ್ದು, ಮಧ್ಯಾಹ್ನ ಕನ್ನಡ ಶಾಲೆ ನಡೆಸಲಾಗಿತ್ತು. ಮಕ್ಕಳಿಗೆ ಮೈದಾನ, ಪೀಠೋಪಕರಣ, ಲ್ಯಾಬ್, ಗ್ರಂಥಾಲಯ, ಕಂಪ್ಯೂಟರ್, ನೂತನ ಕೊಠಡಿಗಳ ನಿರ್ಮಿಸಬೇಕು ಎಂಬ ಬೇಡಿಕೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT