ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧ’

ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ವೇಳೆ ಕೃಷಿ ಸಚಿವ ಬಿ.ಸಿ. ಪಾಟೀಲ
Last Updated 12 ಸೆಪ್ಟೆಂಬರ್ 2020, 1:55 IST
ಅಕ್ಷರ ಗಾತ್ರ

ಯಲಬುರ್ಗಾ: ಲಾಕ್‍ಡೌನ್ ಪರಿಣಾಮದಿಂದ ರೈತರು ಎದುರಿಸಿದ ಸಂಕಷ್ಟಕ್ಕೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡುವ ಮೂಲಕ ಅವರ ಹಿತಕಾಪಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಪಟ್ಟಣದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ವರ್ಷದಿಂದ ‘ನನ್ನ ಬೆಳೆ ನನ್ನ ಹಕ್ಕು‘ ಎಂಬ ಕಾರ್ಯಕ್ರಮದ ಮೂಲಕ ರೈತರೆ ತಮ್ಮ ಬೆಳೆ ಸಮೀಕ್ಷೆಗೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ವಿವಿಧ ಪ್ರಯೋಜನಗಳು ರೈತರಿಗೆ ಸಿಗಲಿವೆ ಎಂದರು.

ರೈತರು ತಮ್ಮ ಮೊಬೈಲ್‍ದಲ್ಲಿಯೇ ಅಪ್‍ಲೋಡ್ ಮಾಡಿ ಬೆಳೆ ಮಾಹಿತಿ ನೀಡಬೇಕಾಗುತ್ತದೆ. ಈಗಾಗಲೇ ರಾಜ್ಯದಲ್ಲಿ 75 ಲಕ್ಷಕ್ಕೂ ಅಧಿಕ ರೈತರು ಬೆಳೆ ಮಾಹಿತಿ ಅಪ್‍ಲೋಡ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ 10 ಲಕ್ಷ ರೈತರಿಗೆ ಪ್ರತಿಯೊಬ್ಬರಿಗೂ ತಲಾ ₹ 5 ಸಾವಿರ ಆರ್ಥಿಕ ಸಹಾಯ ನೀಡಿದ್ದು, ಇದಕ್ಕಾಗಿ ಸರ್ಕಾರ ₹ 500 ಕೋಟಿ ಹಣ ಬಿಡುಗಡೆ ಮಾಡಿದೆ. ಹಾಗೆಯೇ ಅನೇಕ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದ ರೈತರು ಬೆಂಬಲ ಬೆಲೆಗಾಗಿ ಸುಮಾರು ವರ್ಷಗಳಿಂದಲೂ ಒತ್ತಾಯಿಸುತ್ತಿದ್ದರು. ಇದಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಹಾಗೆಯೇ ತರಕಾರಿ, ಹೂ ಹಾಗೂ ಇನ್ನಿತರ ಬೆಳೆಗಾರರ ರಕ್ಷಣೆಗೆ ಸರ್ಕಾರ ಮುಂದಾಗಿದೆ ಎಂದು ಹೇಳಿದರು.

ಶಾಸಕ ಹಾಲಪ್ಪ ಆಚಾರ ಮಾತನಾಡಿ, ಕ್ಷೇತ್ರದ ಸಮಗ್ರ ಅಭಿವೃದ್ದಿ ಹಾಗೂ ಪಟ್ಟಣದ ವಿವಿಧ ವಾರ್ಡ್‍ಗಳ ಅಭಿವೃದ್ದಿ ಕಾಮಗಾರಿಗಳಿಗೆ ಕೋಟಿಗಟ್ಟಲೆ ಅನುದಾನ ತರಲಾಗಿದೆ. ಇದು ಸರಿಯಾಗಿ ನಿರ್ವಹಣೆ ಆಗಬೇಕು ಎಂದರು.

ತಾಲ್ಲೂಕಿನ ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ಪ್ರಯತ್ನಸಲಾಗುವುದು. ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದರು.

‘ಕೆಂಪುಕೆರೆ ಅಭಿವೃದ್ಧಿ ಕಾಮಗಾರಿ ಕೇವಲ ಶಂಕು ಸ್ಥಾಪನೆ ಮಾಡಿದರೆ ಸಾಲದು ಟೆಂಡರ್ ಪ್ರಕ್ರಿಯೆ ಮುಗಿಸಿ ಚಾಲನೆ ನೀಡಬೇಕು, ಅದನ್ನು ಬಿಟ್ಟು ಎಲ್ಲವನ್ನು ನಾನೇ ಮಾಡಿದ್ದೇನೆಂದು ಹೇಳಿಕೊಳ್ಳುವ ಮಾಜಿ ಮಂತ್ರಿಗಳು ಎಷ್ಟರ ಮಟ್ಟಿಗೆ ಅಭಿವೃದ್ಧಿ ಮಾಡಿದ್ದಾರೆಂಬುದು ಜನರಿಗೆ ಗೊತ್ತಿದೆ. ಅನಗತ್ಯವಾಗಿ ಟೀಕೆ ಮಾಡುವುದು ಸರಿಯಲ್ಲ‘ ಎಂದರು.

ಕುಕನೂರ ತಾಲ್ಲೂಕಿನ ಭಾನಾಪುರ ಬಳಿ ಗೊಂಬೆ ತಯಾರಿಕಾ ವಲಯ ಸ್ಥಾಪನೆಯಾಗಲಿದ್ದು ಇದರಿಂದ ಉದ್ಯೋಗಾವಕಾಶಗಳು ಹೆಚ್ಚಿಲಿದೆ. ಹಾಗೆಯೇ ಕೈಗಾರಿಕೆಗಳು ಸ್ಥಾಪನೆಗೊಳ್ಳುವುದರಿಂದ ಈ ಪ್ರದೇಶ ಎಲ್ಲಾ ರಂಗದಲ್ಲಿಯೂ ಅಭಿವೃದ್ಧಿಗೊಳ್ಳಲಿದೆ ಎಂದರು.

ಜಿಲ್ಲಾಧಿಕಾರಿ ವಿಕಾಸ್ ಕಿಶೋರ ಸುರಳ್ಕರ್, ಜಿ.ಪಂ ಸಿಇಒ ರಘುನಂದನ ಮೂರ್ತಿ, ನಗರಾಭಿವೃದ್ದಿ ಯೋಜನಾಧಿಕಾರಿ ಸಿದ್ರಾಮೇಶ್ವರ, ತಹಶೀಲ್ದಾರ್ ಶ್ರೀಶೈಲ ತಳವಾರ, ತಾಪಂ ಇಒ ಡಾ.ಜಯರಾಂ ಚವ್ಹಾಣ, ಪ.ಪಂ ಮುಖ್ಯಾಧಿಕಾರಿ ಮಹೇಶ ನಿಡಶೇಸಿ, ಜಿಪಂ ಸದಸ್ಯೆ ಗಂಗಮ್ಮ ಗುಳಗಣ್ಣನವರ್, ಮಾಜಿ ಸದಸ್ಯ ಸಿ.ಎಚ್.ಪೋಲೀಸ ಪಾಟೀಲ್, ತಾಪಂ ಅಧ್ಯಕ್ಷೆ ಲಕ್ಷ್ಮೀ ಗೌಡರ, ಜಗನ್ನಾಥಗೌಡ ಪಾಟೀಲ್, ವೀರಣ್ಣ ಹುಬ್ಬಳ್ಳಿ, ಕಳಕನಗೌಡ ಪಾಟೀಲ್, ಕಳಕಪ್ಪ ಕಂಬಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT