ತಾವರಗೇರಾ: ಪದವೀಧರನ ಯಶಸ್ವಿ ದಾಳಿಂಬೆ ಕೃಷಿ

ತಾವರಗೇರಾ: ತಾವರಗೇರಾ ಪಟ್ಟಣದ ಅಮರೇಶ ಗಾಂಜಿ ಅವರು ಕೊರೊನಾ ಲಾಕ್‌ಡೌನ್ ಸಮಯದಲ್ಲಿ ತಮ್ಮ ಜಮೀನಿನಲ್ಲಿ ದಾಳಿಂಬೆ ಬೆಳೆಯ ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.
ತೋಟಗಾರಿಕೆ ಕೃಷಿ ಪದ್ಧತಿ ಹಾಗೂ ಹೊಸ ವಿಧಾನದಡಿ ದಾಳಿಂಬೆ ಬೆಳೆದಿದ್ದು, ಸತತ ಎರಡು ವರ್ಷಗಳಿಂದ ಲಾಭ ಗಳಿಸುತ್ತಿದ್ದಾರೆ.
ತಾವರಗೇರಾ ಪಟ್ಟಣದ ರೈತ ಅಮರೇಶ ಗಾಂಜಿ ಬಿಎ ಪದವಿ ಮುಗಿಸಿದ್ದಾರೆ. ಒಂದು ಸಲ ಗ್ರಾ.ಪಂ.ಸದಸ್ಯರಾಗಿದ್ದರು. ಗ್ರಾ.ಪಂ.ನಿಂದ ಪ.ಪಂ. ಮೇಲ್ದೇರ್ಜೆಗೆ ಏರಿದ ನಂತರ ಪ.ಪಂ. ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಉತ್ತಮ ರೀತಿಯಲ್ಲಿ ದಾಳಿಂಬೆ ಬೆಳೆ ಬೆಳೆದಿದ್ದು, ಉತ್ತಮ ಫಸಲು ಪಡೆಯುತ್ತಿದ್ದಾರೆ.
ತಮ್ಮ ಐದು ಎಕರೆ ಜಮೀನಿನಲ್ಲಿ 1800 ದಾಳಿಂಬೆ ಗಿಡಗಳನ್ನು ಬೆಳೆಸಿದ್ದಾರೆ. ಕೆಂಪು ಮಿಶ್ರಿತ ಮಣ್ಣಿನ ಈ ಜಮೀನಿನಲ್ಲಿ ನಾಲ್ಕು ಬೋರ್‌ವೆಲ್ ಕೊರೆಸಿದ್ದು, ಇಳಿಜಾರಿನ ಪ್ರದೇಶದಲ್ಲಿಯು ಸಹ ತಲಾ ಎರಡು ಇಂಚು ನೀರು ದೊರೆಯುತ್ತಿದೆ. ಹನಿ ನೀರಾವರಿ ಪದ್ಧತಿಯಡಿ ಬೆಳೆಗೆ ನೀರು ಉಣಿಸುತ್ತಿದ್ದಾರೆ. ಹಸು, ಎಮ್ಮೆ, ಕುರಿ-ಮೇಕೆ ಗೊಬ್ಬರ, ಸಾವಯುವ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಪತಿಯ ಕೃಷಿ ಆಸಕ್ತಿಗೆ ಪತ್ನಿಯೂ ನೆರವಾಗುತ್ತಿದ್ದಾರೆ.
ಜಮೀನಿನ ಸುತ್ತಲಿನ ಬೇಲಿಯಲ್ಲಿ ಲಿಂಬೆಗಿಡ, ನುಗ್ಗೆ, ಔಡಲ ಹೀಗೆ ಕೀಟ ಮತ್ತು ಪಕ್ಷಿ ನಿಯಂತ್ರಣಾ ಪದ್ಧತಿ ಗಿಡಗಳನ್ನು ಬೆಳೆಸಿದ್ದಾರೆ. ಕೃಷಿ ಬದುಕಿನಲ್ಲಿ ಸದಾ ಕಾರ್ಯ ಮಾಡುವ ಇವರ ಶ್ರಮಕ್ಕೆ ಹಿರಿಯ ರೈತಾಪಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದಾಳಿಂಬೆ ಇಳುವರಿ: ಸರ್ಕಾರದ ವಿವಿಧ ಯೋಜನೆಗಳನ್ನು ಬಳಸಿಕೊಂಡು ತೋಟಗಾರಿಕೆ ಇಲಾಖೆ ಹಾಗೂ ದಾಳಿಂಬೆ ಬೆಳೆದ ಹಿರಿಯ ರೈತರ ಸಲಹೆ ಪಡೆದು ಪ್ರತಿ ಎಕರೆಗೆ ಸರಾಸರಿ 7ರಿಂದ 8 ಟನ್ ದಾಳಿಂಬೆ ಫಸಲು ಪಡೆಯುತ್ತಿದ್ದಾರೆ. ಪ್ರತಿ ಗಿಡದಿಂದ 50 ಕೆ.ಜಿ. ಇಳುವರಿ ಬಂದಿದ್ದು, ಕಳೆದ ಬಾರಿ ಕಟಾವಿನಲ್ಲಿ ದೊಡ್ಡ ಗಿಡದಲ್ಲಿ 1 ಕೆ.ಜಿ.ಗೂ ಅಧಿಕ ತೂಕದ ಹಣ್ಣುಗಳು ದೊರೆತಿದ್ದು, ಈ ಬಾರಿ ಕೆ.ಜಿ. ಹಣ್ಣಿಗೆ ₹73 ರಿಂದ ₹78 ದೊರೆಯುತ್ತಿದೆ. ಈ ಬಾರಿ ₹10 ರಿಂದ 12 ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಫಸಲನ್ನು ಕಟಾವು ಮಾಡಲಾಗುತ್ತಿದೆ.
ಮೊದಲು ಸಜ್ಜೆ, ಎಳ್ಳು, ತೊಗರಿ, ನವಣೆ ಸೇರಿದಂತೆ ಇನ್ನಿತರ ಬೆಳೆ ಬೆಳೆದರೂ ಹಾಕಿದ ಬಂಡವಾಳ ತೆಗೆಯುವುದು ಕಷ್ಟವಾಗುತ್ತಿತ್ತು. ಆದರೆ, ಈ ಬೆಳೆಗೆ ಸುಮಾರು ₹7 ರಿಂದ 8 ಲಕ್ಷ ಬಂಡವಾಳ ಹಾಕಿದ್ದು, ಮಳೆರಾಯನ ಕೃಪೆಯಿಂದ ಇಳುವರಿ ಚೆನ್ನಾಗಿ ಬಂದಿದೆ. ಕೃಷಿಯಲ್ಲಿ ಖುಷಿ ಕಂಡಿದ್ದೇವೆ ಎನ್ನುತ್ತಾರೆ ಅಮರೇಶ ಗಾಂಜಿ ದಂಪತಿ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.