ಸೋಮವಾರ, ಮಾರ್ಚ್ 8, 2021
22 °C
ಮಾದರಿಯಾದ ಜಹಗೀರಗುಡದೂರ ಗ್ರಾಮ ಪಂಚಾಯಿತಿ

ಹನುಮಸಾಗರ: ಹೈಟೆಕ್ ಮಾದರಿಯ ಸಭಾಭವನ

ಕಿಶನರಾವ್ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ:  ಗ್ರಾಮ ಪಂಚಾಯಿತಿ ಸದಸ್ಯರ ಇಚ್ಛಾಶಕ್ತಿ ಹಾಗೂ ಅದಕ್ಕೆ ಪೂರಕವಾಗಿ ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸುವ ಅಭಿವೃದ್ಧಿ ಅಧಿಕಾರಿಗಳ ಕಳಕಳಿ ಇದ್ದರೆ ಗ್ರಾಮ ಪಂಚಾಯಿತಿ ಅಭಿವೃದ್ಧಿಯಾಗುವುದರ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗಬಲ್ಲವು ಎಂಬುದಕ್ಕೆ ಸಮೀಪದ ಜಹಗೀರಗುಡದೂರ ಗ್ರಾಮ ಪಂಚಾಯಿತಿ ಸಾಕ್ಷಿಯಾಗಿದೆ.

ವಿಶಾಲವಾದ ಬಯಲಿನಲ್ಲಿ ಕಿರಿದಾದ ಪಂಚಾಯಿತಿ ಕಟ್ಟಡ, ಬಿಸಿಲಿನಲ್ಲಿ ನಿಲ್ಲುವ ಸಾರ್ವಜನಿಕರು, ಸಭೆ ನಡೆಸಲು ಸ್ಥಳದ ಅಭಾವ, ಎಲ್ಲಡೆ ಒಣಪರಿಸರ, ನೀರಿನ ಅಭಾವ, ಗ್ರಾ.ಪಂ ಮುಂದೆ ಯದ್ವತದ್ವಾ ನಿಲ್ಲುವ ವಾಹನಗಳು...

ಇವೆಲ್ಲಕ್ಕೂ ಒಂದು ವ್ಯವಸ್ಥಿತ ಏರ್ಪಾಟು ಮಾಡಬೇಕು ಎಂದು ನಿರ್ಧರಿಸಿದ ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಮೂಲಿಮನಿ, ಕೇವಲ ಐದು ತಿಂಗಳ ಅವಧಿಯಲ್ಲಿ ಗ್ರಾಮ ಪಂಚಾಯಿತಿಯ ಚಿತ್ರಣವನ್ನೇ ಬದಲಾಯಿಸಿದ್ದಾರೆ. 5 ತಿಂಗಳ ಹಿಂದೆ ಇಲ್ಲಿಗೆ ವರ್ಗಾವಣೆಯಾಗಿ ಬಂದ ಇವರು ಗ್ರಾ.ಪಂ ಮೊದಲ ಸಭೆಯಲ್ಲಿಯೆ ತಮ್ಮ ಅಭಿವೃದ್ಧಿಯ ನೀಲನಕ್ಷೆಯನ್ನು ತೆರೆದಿಟ್ಟರು. ಈ ಹಿಂದೆ ಇವರು ಕಾರ್ಯನಿರ್ವಹಿಸಿದ್ದ ಗ್ರಾ.ಪಂ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿದ್ದ ಸದಸ್ಯರು ಇವರ ವಿಚಾರಕ್ಕೆ ಒಮ್ಮತದಿಂದ ಸಹಿ ಹಾಕಿದರು. ಅಷ್ಟೆ ಅಲ್ಲ ತಮ್ಮ ಕಾರ್ಯಕ್ಕೆ ನಾವು ದೈಹಿಕ ಶ್ರಮ ನೀಡುವುದಾಗಿಯೂ ಭರವಸೆ ನೀಡಿದರು.

ಸುಮಾರು ₹ 9.82ಲಕ್ಷ ವೆಚ್ಚದ ಅವರ ಯೋಜನೆಗೆ ಸರ್ಕಾರದ ಅನುದಾನವನ್ನೇನು ಕಾಯುತ್ತ ಕುಳಿತುಕೊಳ್ಳಲಿಲ್ಲ, ಗ್ರಾಮ ಪಂಚಾಯಿತಿಯ ವಿದ್ಯುತ್‍ಬಿಲ್‍ನಲ್ಲಿಯೇ ಉಳಿತಾಯ ಮಾಡಿದ ಹಣವನ್ನು ಅನಗತ್ಯ ಕಾರ್ಯಗಳಿಗೆ ಖರ್ಚುಮಾಡಿ ಬಿಲ್ ತೋರಿಸುವುದರ ಬದಲು ಉಳಿಕೆಯಾದ ಈ ಎಲ್ಲ ಹಣವನ್ನು ಸದ್ವಿನಿಯೋಗ ಮಾಡಿಕೊಂಡ ಕಾರಣ   ಕಟ್ಟಡವಾಗಿ ನವೀಕರಣಗೊಂಡಿದೆ.

ಜಹಗೀರಗಡದೂರ ಸೇರಿದಂತೆ ಗುಡ್ಡದದೇವಲಾಪೂರ, ಕೋನಾಪೂರ, ಪರಮನಹಟ್ಟಿ ವ್ಯಾಪ್ತಿಹೊಂದಿರುವ ಈ ಗ್ರಾಮ ಪಂಚಾಯಿತಿ 15 ಜನ ಸದಸ್ಯರನ್ನು ಹೊಂದಿದೆ.

ಸದಸ್ಯರ ಹಾಗೂ ಅಧಿಕಾರಿಗಳ ಆಸಕ್ತಿಯಿಂದ ಅಧ್ಯಕ್ಷ ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕೊಠಡಿಗಳು, ವಿಶಾಲ ಸಭಾಭವನ, ಕಾರ್ಯಾಲಯ, ದಾಖಲೆ ಸಂಗ್ರಹ ಕೊಠಡಿ, ಸಿಬ್ಬಂದಿ ಹಾಗೂ ಸಾರ್ವಜನಿಕರ ಪ್ರತ್ಯೇಕ ಶೌಚಾಲಯ, ರ್‍ಯಾಂಪ್ ನಿರ್ಮಾಣ, ಗಣಕಯಂತ್ರ ದುರಸ್ತಿ ಹಾಗೂ ನವೀಕರಣಗೊಂಡಿವೆ. ಸಾರ್ವಜನಿಕರಿಗೆ ನೆರಳಿನ ವ್ಯವಸ್ಥೆ, ವಾಹನ ನಿಲಗಡೆಗೆ ಶೆಡ್, ಆವರಣದಲ್ಲಿ ಬಣ್ಣದ ಬ್ರಿಕ್ಸ್ ಜೋಡಿಸಲಾಗಿದೆ. ಗ್ರಾ.ಪಂ ವ್ಯಾಪ್ತಿಯ ಸಮಗ್ರ ಮಾಹಿತಿ ನೀಡುವ ಫಲಕಗಳನ್ನು ಅಳವಡಿಸಲಾಗಿದೆ. ಈ ಮೊತ್ತದಲ್ಲಿಯೇ ಸೋಲಾರ್, ಹೈಟೆಕ್ ಪೀಠೋಪಕರಣಗಳನ್ನು ತರಿಸಲಾಗಿದೆ.

ಗ್ರಾಮ ಪಂಚಾಯಿತಿ ಕಟ್ಟಡದ 100X120 ಅಳತೆಯ ಸೂರಿನಿಂದ ಮಳೆನೀರು ಕೊಯ್ಲು ಮಾಡಲಾಗಿದೆ. ಎರಡು ಕಡೆ ಫಿಲ್ಟರ್ ಜೋಡಿಸಿರುವುದರಿಂದ ಮಳೆನೀರು ಶುದ್ಧಗೊಂಡು ಆವರಣದ ನೆಲಮಟ್ಟದಲ್ಲಿ ನಿರ್ಮಿಸಲಾಗಿರುವ 3ಸಾವಿರ ಲೀಟರ್ ಸಾಮರ್ಥ್ಯದ ತೊಟ್ಟಿಯಲ್ಲಿ ಸಂಗ್ರಹವಾಗುತ್ತದೆ ಎಂದು ಅಭಿವೃದ್ಧಿ ಅಧಿಕಾರಿ ನಿಂಗಪ್ಪ ಮೂಲಿಮನಿ ಹೇಳುತ್ತಾರೆ.

ಸುಮಾರು ₹ 40 ಲಕ್ಷ ವೆಚ್ಚದಲ್ಲಿ ಆಗಬೇಕಿದ್ದ ಈ ಎಲ್ಲ ಕಾಮಗಾರಿ ಕೇವಲ ₹ 9.82ಲಕ್ಷದಲ್ಲಿ ಮುಗಿದಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹನುಮವ್ವ ಮುಸ್ಸಿಗೇರಿ  ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.