ಗುರುವಾರ , ನವೆಂಬರ್ 21, 2019
22 °C
ಕುಡಿಯುವ ನೀರಿಲ್ಲ, ಸ್ಮಶಾನವಿಲ್ಲ, ಪ‍್ರೌಢಶಾಲೆಯಿಲ್ಲ; ಸಮಸ್ಯೆ ಕೇಳುವವರೇ ಇಲ್ಲ!

‘ಬೇವನ’ಹಳ್ಳಿ ಜನರ ಬದುಕು ಇನ್ನೂ ‘ಕಹಿ’

Published:
Updated:
Prajavani

ಮುನಿರಾಬಾದ್: ಸಮೀಪದ ಬೇವಿನಹಳ್ಳಿ ಗ್ರಾಮಸ್ಥರು ಆರ್ಥಿಕವಾಗಿ ಸ್ವಲ್ಪಮಟ್ಟಿಗೆ ಉತ್ತಮಸ್ಥಿತಿಯಲ್ಲಿ ಇದ್ದಾರೆ. ಆದರೆ, ಇಲ್ಲಿನ ಗ್ರಾಮ ಪಂಚಾಯಿತಿಗೆ ಮಾತ್ರ ದಾರಿದ್ರ್ಯ ಕಾಡುತ್ತಿದೆ. ಊರಿನಿಲ್ಲಿ ಇದೂವರೆಗೆ ಕುಡಿಯುವ ನೀರು, ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆ ಸುಧಾರಿಸಿಯೇ ಇಲ್ಲ!

ಜಿಲ್ಲಾ ಪಂಚಾಯಿತಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವ ಮತ್ತು ನಿರ್ವಹಣೆ ಮಾಡುವ ಕೆಲಸದಲ್ಲಿ ಹಿಂದೆ ಬಿದ್ದಿದೆ. ಕಿರ್ಲೋಸ್ಕರ್ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಸ್ಥಾಪಿಸಿರುವ ಘಟಕ 4,000 ಜನಸಂಖ್ಯೆಗೆ ನೀರು ಪೂರೈಸುವಲ್ಲಿ ವಿಫಲವಾಗಿದೆ. ಗ್ರಾಮಸ್ಥರು ಪಕ್ಕದ ಊರಿಗೆ ಹೋಗಿ ನೀರು ತರುವ ಅನಿವಾರ್ಯತೆ ಇದೆ. ಸರ್ಕಾರದ ವತಿಯಿಂದ ಮಂಜೂರಾದ ಘಟಕದ ಕಟ್ಟಡ ನಿರ್ಮಾಣವಾಗಿ ಮೂರು ತಿಂಗಳು ಕಳೆದರೂ ಇನ್ನೂ ಯಂತ್ರಗಳು ಬಂದಿಲ್ಲ. ಗ್ರಾಮ ಪಂಚಾಯಿತಿಯಲ್ಲಿ ಕೇಳಿದರೆ ಇಂದು– ನಾಳೆ ಎಂದು ಸಾಗ ಹಾಕುತ್ತಿದ್ದಾರೆ ಎಂಬುದು ಅಲ್ಲಿನ ನಿವಾಸಿಗಳ ಅಳಲು.

ನೈರ್ಮಲ್ಯವೂ ಮರೀಚಿಕೆ: ಗ್ರಾಮದ ನೈರ್ಮಲ್ಯ ಕಾಪಾಡುವಲ್ಲಿ ಪಂಚಾಯಿತಿ ಸೋತಿದ್ದು, ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡುವ ಕಟ್ಟಡದ ಪಕ್ಕದಲ್ಲೇ ತಿಪ್ಪೆ ನಿರ್ಮಾಣವಾಗಿದೆ.

‘ತಿಪ್ಪೆಯ ಮಾಲೀಕರಿಗೆ ನೋಟಿಸ್ ನೀಡಿದ್ದೇವೆ ಆದರೂ ಅದನ್ನು ತೆರವುಗೊಳಿಸಲು ಸಾಧ್ಯವಾಗುತ್ತಿಲ್ಲ. ಅಲ್ಲಿನ ತ್ಯಾಜ್ಯ, ಕಸ ಚರಂಡಿಯಲ್ಲಿ ಸೇರಿ ನೀರು ಮುಂದೆ ಹೋಗದೇ ರಸ್ತೆಗೆ ಬರುತ್ತದೆ. ಇದೊಂದು ದೊಡ್ಡ ಸಮಸ್ಯೆಯಾಗಿದೆ. ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನವರು ಕಸವನ್ನು ಸಂಗ್ರಹಿಸಲು ಟಿನ್‍ಬ್ಯಾರೆಲ್ ನೀಡಿದ್ದು, ಸಂಗ್ರಹವಾದ ಕಸವನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲು ತಾತ್ಕಾಲಿಕ ವ್ಯವಸ್ಥೆಯಾಗಿದೆ’ ಎನ್ನುತ್ತಾರೆ ಮಾರುತಿ ಕೊಪ್ಪಳ.

‘ಗ್ರಾಮದಲ್ಲಿ 8ನೇ ತರಗತಿವರೆಗೆ ಮಾತ್ರ ಶಾಲೆ ಇದ್ದು, ಪ್ರೌಢಶಾಲೆ ಬೇಕು ಎಂದು ಸುಮಾರು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಶಿಕ್ಷಣಇಲಾಖೆ ಇದರ ಬಗ್ಗೆ ಕ್ರಮತೆಗೆದುಕೊಳ್ಳುತ್ತಿಲ್ಲ. ಪ್ರೌಢಶಾಲೆ ಇಲ್ಲದೇ ಕೆಲವು ಹೆಣ್ಣುಮಕ್ಕಳು ಶಾಲೆಯನ್ನೇ ತೊರೆಯುತ್ತಿದ್ದಾರೆ’ ಎಂದು ಶಾಲಾಅಭಿವೃದ್ಧಿ ಮತ್ತು ಮೇಲುಸ್ತುವಾರಿಸಮಿತಿಯ ಅಧ್ಯಕ್ಷ ಯಮನೂರಪ್ಪಅಡಿಗಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ದೈನಂದಿನ ಕೆಲಸ, ಶಾಲೆ– ಕಾಲೇಜಿಗೆ ಹೋಬಳಿ ಕೇಂದ್ರವಾದ ಹಿಟ್ನಾಳ ಗ್ರಾಮಕ್ಕೆ ಹೋಗಿಬರಲು ರಸ್ತೆಇದೆ. ಆದರೆ, ಹೆದ್ದಾರಿ ದಾಟಿ ಹೋಗಬೇಕಾದರೆ ಕೆಳ ಸೇತುವೆ ಮೂಲಕ ಹೋಗಬೇಕು. ಅದು ತೀರ ಚಿಕ್ಕದಾಗಿದ್ದು, ಮಳೆಗಾಲದಲ್ಲಿ ನೀರು ತುಂಬಿಕೊಂಡು ನಡೆದಾಡಲೂ ಪರದಾಡುವಂತಾಗಿದೆ. ಅದನ್ನು ದೊಡ್ಡದು ಮಾಡಿ, ಬಸ್‍ ಸೇರಿದಂತೆ ನಾಲ್ಕು ಚಕ್ರದ ವಾಹನ ಹೋಗಿಬರುವಂತೆ ಮಾಡಬೇಕು. ಗ್ರಾಮದ ಹೊಸ ಲೇಔಟ್‍ಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿದ ನಂತರ ಮನೆ ನಿರ್ಮಿಸಲು ಪರವಾನಗಿ ನೀಡಬೇಕು. ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದರೂ ಇಲ್ಲಿಆಡಳಿತ ಇದ್ದೂಇಲ್ಲದಂತಾಗಿದೆ ಎಂದು ನಿವಾಸಿ ಮಂಜುನಾಥ ಬೆಟಗೇರಿ ದೂರುತ್ತಾರೆ.

ಗ್ರಾಮದ ಸ್ಮಶಾನ ಒತ್ತುವರಿಯಾಗಿದೆ. ಅಳತೆ ಮಾಡಿ ಹದ್ದು ಗುರುತಿಸಲು ತಹಶೀಲ್ದಾರ್‌ ಅವರಿಗೆ ಮನವಿ ಮಾಡಿದ್ದೆವು. ತಹಶೀಲ್ದಾರ್‌ ಬಂದ–ಹೋದರು. ಆದರೆ ಕೆಲಸ ಮಾತ್ರ ಆಗಿರುವುದಿಲ್ಲ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಮೈಲಾರಪ್ಪರಾಂಪುರ, ಯಂಕನಗೌಡ ಪಾಟೀಲ್, ಬಾದರಬಂಡಿ ನಾಗರಾಜ.

ಪ್ರತಿಕ್ರಿಯಿಸಿ (+)