ಭಾನುವಾರ, ಮೇ 22, 2022
28 °C

ಹನುಮಸಾಗರ: 2400 ಹೆಕ್ಟೇರ್ ಕಡಲೆ ಬಿತ್ತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ನಿರಂತರ ಮಳೆಯಿಂದ ಸಾಕಷ್ಟು ಬೆಳೆಗಳು ಹಾಳಾಗಿದ್ದು ಈ ಮಧ್ಯದಲ್ಲಿ ಉತ್ತಮವಾಗಿ ಹಸಿಯಾಗಿರುವ ಕಾರಣ, ಬಿತ್ತನೆಗೆ ಜಮೀನು ಹದಕ್ಕೆ ಬಂದ ಭಾಗದಲ್ಲಿ ಹಿಂಗಾರು ಬಿತ್ತನೆ ಚುರುಕುಗೊಂಡಿದ್ದು, ಹೂಲಗೇರಿ, ಅಡವಿಭಾವಿ, ಕಡೆಕೊಪ್ಪ, ನೀರಲಕೊಪ್ಪ ಭಾಗಗಳಲ್ಲಿ ಭಾನುವಾರ ಕಂಡು ಬಂದಿತು.

ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಕಾಶ ತಾರಿವಾಳ ಮಾಹಿತಿ ನೀಡಿ, ಈ ಬಾರಿ ದಾಖಲೆ ಪ್ರಮಾಣದಲ್ಲಿ ಬಿತ್ತನೆಯಾಗಿದೆ. ಹನುಮಸಾಗರ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯಲ್ಲಿಯೇ 2400 ಹೆಕ್ಟೇರ್ ಪ್ರದೇಶದಲ್ಲಿ ಕಡಲೆ ಬಿತ್ತನೆಯಾಗಿದೆ. ರೈತರು ರಿಯಾಯಿತಿ ದರದಲ್ಲಿ 400 ಕ್ವಿಂಟಲ್ ಕಡಲೆ ಬೀಜ ಖರೀದಿಸಿದ್ದಾರೆ. ಕೆಲ ಭಾಗದಲ್ಲಿ ಇನ್ನು ಹಸಿ ಆರಿಲ್ಲದ, ನೀರು ನಿಂತ ಕಾರಣ ಅಂತಹ ಸ್ಥಳದಲ್ಲಿ ಬಿತ್ತನೆಗೆ ಇನ್ನು ನಾಲ್ಕಾರು ದಿನಗಳು ತಡಮಾಡಬೇಕಾಗುತ್ತದೆ. ಮಸಾರಿ, ಉಸುಕಮಿಶ್ರಿತ ಜಮೀನುಗಳಲ್ಲಿ ಕಡಲೆ, ಸೂರ್ಯಕಾಂತಿ ಬಿತ್ತನೆ ಹೆಚ್ಚಿನ ಪ್ರಮಾಣದಲ್ಲಿ ನಡೆದಿದ್ದರೆ ಜೋಳದ ಬಿತ್ತನೆ ಮಾತ್ರ ಈ ಬಾರಿ ಕಡಿಮೆಯಾಗಿದೆ ಎಂದು ಹೇಳಿದರು.

ರೈತರು ಬಿತ್ತನೆಗೆ ಅವಸರ ಮಾಡದೆ ಜಮೀನು ಸಂಪೂರ್ಣ ಬಿತ್ತನೆಗೆ ಯೋಗ್ಯವಾಗಿರುವುದನ್ನು ದೃಢೀಕರಿಸಿಕೊಂಡು ಬಿತ್ತನೆಗೆ ಮುಂದಾಗಬೇಕು ಎಂದು ಅವರು ರೈತರಿಗೆ ಸಲಹೆ ನೀಡಿದರು.

ಏರಿದ ಗಳೆ ಬಾಡಿಗೆ: ‘ಗ್ರಾಮ ಗಳಲ್ಲಿ ಎತ್ತುಗಳ ಸಂಖ್ಯೆ ಕಡಿಮೆ ಯಾಗಿರುವುದರಿಂದ ಬಿತ್ತನೆಗಾಗಿ ಎತ್ತಿನ ಗಳೆ ಹೊಂದಿದ ರೈತರ ಮನೆ ಬಾಗಿಲಿನಲ್ಲಿ ರೈತರು ಸರತಿಯಲ್ಲಿ ನಿಂತಿದ್ದಾರೆ. ಸಣ್ಣ ರೈತರು ಎತ್ತಿನ ಗಳೆ ಅವಲಂಭಿಸಿದ್ದಾರೆ. ನಾಲ್ಕು ದಿನ ಮೊದಲೇ ಹೇಳಿದರೆ ಮಾತ್ರ ಎತ್ತಿನ ಗಳೆ ದೊರಕುತ್ತವೆ. ಒಂದು ದಿನದ ಬಾಡಿಗೆ ₹2 ಸಾವಿರ ಇದ್ದು ಇದು ಸಣ್ಣ ರೈತರಿಗೆ ಕಷ್ಟವಾಗಿದೆ’ ಅಡವಿಭಾವಿ ಗ್ರಾಮದ ರೈತ ದೊಡ್ಡಪ್ಪ ಗೌಡ್ರ.

‘ಹಿಂದಿನ ವರ್ಷ ಒಂದು ಗಂಟೆ ಬಿತ್ತನೆ ಮಾಡಲು ಟ್ರ್ಯಾಕ್ಟರ್ ಬಾಡಿಗೆ ₹500 ಇದ್ದ ಬೆಲೆ ಈ ವರ್ಷ ₹600ಕ್ಕೆ ಏರಿದೆ. ಅದು ಟ್ರ್ಯಾಕ್ಟರ್‌ಗೆ ಕಾಯ್ದು ಕುಳಿತು ಬಿತ್ತನೆ ಮಾಡಬೇಕು’ ಎಂದು ರೈತರು ನೋವು ತೋಡಿಕೊಂಡರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು